ಲಕ್ಷ್ಮೇಶ್ವರ ಪಟ್ಟಣ ಶಾಂತಿ, ಸೌಹಾರ್ದತೆಯಿಂದ ಕೂಡಿದ್ದು, ಇದನ್ನು ಕದಡಲು ನಾವು ಬಿಡುವುದಿಲ್ಲ. ಕ್ಷುಲ್ಲಕ ಕಾರಣಕ್ಕಾಗಿ ಲಕ್ಷ್ಮೇಶ್ವರ ಬಂದ್ ಮಾಡುವುದು ಸರಿಯಲ್ಲ ಎಂದು ಸಾಮಾಜಿಕ ಹೋರಾಟಗಾರ ಫಕಿರೇಶ ಮ್ಯಾಟಣ್ಣನವರ ಆಕ್ಷೇಪ ವ್ಯಕ್ತಪಡಿಸಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀರಾಮ ಸೇನೆಯ ಮುಖಂಡ ರಾಜು ಖಾನಾಪೂರ ಲಕ್ಷ್ಮೇಶ್ವರ ಬಂದ್‌ಗೆ ಕರೆ ನೀಡಿರುವುದನ್ನು ಖಂಡಿಸಿ, ಪ್ರಗತಿಪರ ಮುಖಂಡರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
“ಲಕ್ಷ್ಮೇಶ್ವರ ಬಂದ್‌ಗೆ ಕರೆ ನೀಡಿರುವುದು ಕಾನೂನು ಬಾಹಿರವಾದದ್ದು. ಇದರಿಂದ ಇಡೀ ನಗರವೇ ತಲೆ ತಗ್ಗಿಸುವಂತಹದ್ದು. ಗೋಶಾವಿ ಸಮಾಜದ ಯುವಕ ಹಾಗೂ ಮುಸ್ಲಿಂ ಯುವಕನ ನಡುವೆ ನಡೆದ ಕ್ಷುಲ್ಲಕ ಜಗಳವನ್ನೇ ಕಾರಣವಾಗಿಟ್ಟುಕೊಂಡು ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಬಂದ್‌ಗೆ ಕರೆ ನೀಡಿರುವುದು ಸರಿಯಲ್ಲ. ಇದರಿಂದ ನಗರದಲ್ಲಿ ಶಾಂತಿ ಕದಡುತ್ತದೆ. ಯಾವುದೇ ಕಾರಣಕ್ಕೂ ನಗರದಲ್ಲಿ ಸೌಹಾರ್ದತೆಗೆ ಧಕ್ಕೆಯಾಗಲು ಬಿಡುವುದಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಹಾಸನ | ಜಲಸಂಪನ್ಮೂಲ ಇಲಾಖೆಯಿಂದ ಕಳಪೆ ಕಾಮಗಾರಿ; ಸೂಕ್ತ ತನಿಖೆಗೆ ಜಿ ದೇವರಾಜೇಗೌಡ ಒತ್ತಾಯ
“ಬಂದ್‌ಗೆ ಕರೆ ನೀಡಿದ ವ್ಯಕ್ತಿ ಕೂಡಲೇ ಲಕ್ಷ್ಮೇಶ್ವರ ಜನತೆಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಪೊಲೀಸರು ಬಂಧಿಸಬೇಕು” ಎಂದು ಆಗ್ರಹಿಸಿದರು.
ಪ್ರಗತಿಪರ ಚಿಂತಕರು ಸುರೇಶ್ ನಂದೆಣ್ಣವರ, ದಲಿತಪರ ನಾಯಕ ರಾಮಣ್ಣ ಲಮಾಣಿ, ಕೋಟೇಪ್ಪ ವರ್ದಿಯವರ, ತಿಪ್ಪಣ್ಣ ಶಂಶಿ, ಸೋಮಣ್ಣ ಬೆಟಗೇರಿ, ಜಗದೀಶ ಹುಲಿಗೆಮ್ಮನವರ, ನೀಲಪ್ಪ ಶೇರಸೂರಿ, ಪದ್ಮರಾಜ ಪಾಟೀಲ್, ಶರಣಪ್ಪ ಗೋಡಿ, ಬಾಬಣ್ಣ ಅಳವಂಡಿ, ಗಿರೀಶ್ ಕಲ್ಮಠ ಸೇರಿದಂತೆ ಇತರರು ಇದ್ದರು.