ಗದಗ | ಬುದ್ಧಿಮಾಂದ್ಯ, ಅಂಗವಿಕಲರ ಆತ್ಮವಿಶ್ವಾಸಕ್ಕೆ ನೀರೆರೆದ ಮನರೇಗಾ

Date:

Advertisements

ದೈಹಿಕ ಮತ್ತು ಬೌದ್ಧಿಕ ನ್ಯೂನತೆ ಹೊಂದಿರುವವರು ಸಮಾಜದಲ್ಲಿ ಸಾಮಾನ್ಯರಂತೆ ಬದುಕು ನಡೆಸಲು ಪ್ರೇರೇಪಿಸುವಲ್ಲಿ ಹಾಗೂ ಅವರಲ್ಲಿ ಆತ್ಮವಿಶ್ವಾಸವನ್ನು ಮರು ಸ್ಥಾಪಿಸುವಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆ ಬಹುಮುಖ್ಯ ಪಾತ್ರ ವಹಿಸಿದೆ.

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಗುಳಗುಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರೇಅಳಗುಂಡಿ ಗ್ರಾಮದ 24 ವರ್ಷದ ಸುಮ್ಮವ್ವ ಬಾಲನ್ನವರ ಮತ್ತು 22 ವರ್ಷದ ಬಸವ್ವ ಬಾಲನ್ನವರ ಎಂಬ ಬುದ್ದಿಮಾಂದ್ಯ ಸಹೋದರಿಯರಿಗೆ ಮನರೇಗಾ ಯೋಜನೆಯ ಸಮುದಾಯದ ಕೆಲಸ ಜೀವನ ಕಟ್ಟಿಕೊಟ್ಟಿದೆ. ಸರಿಯಾಗಿ ಮಾತು ಬರದ ಮತ್ತು ದೈಹಿಕ ನೂನ್ಯತೆ ಹೊಂದಿರುವ ಈ ಇಬ್ಬರು ಸಹೋದರಿಯರು ಪಾಲಕರ ನೆರವಿನಿಂದ ಸಾಮಾನ್ಯರ ಸಮನಾಗಿ ಕೆಲಸ ಮಾಡುತ್ತಿದ್ದಾರೆ.

ಹೌದು.. ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮನರೇಗಾ ಸಮುದಾಯ ಕಾಮಗಾರಿಗಳಲ್ಲಿ ಕೆಲಸ ಆರಂಭವಾಗಿದೆ. ಗಂಡು-ಹೆಣ್ಣಿಗೆ ಸರಿಸಮಾನವಾಗಿ ಕೂಲಿ ಮೊತ್ತ ನೀಡುವ ಈ ಯೋಜನೆಯು ವಿಶೇಷ ಚೇತನರಿಗೆ ಮತ್ತು ಅಂಗವಿಕಲರಿಗೆ ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡುವುದರ ಮೂಲಕ ಅವರ ಸ್ವಾವಲಂಬಿ ಜೀವನಕ್ಕೆ ಆಶಾಕಿರಣವಾಗಿದೆ.

Advertisements
WhatsApp Image 2025 04 30 at 11.25.33 AM 1

ತಂದೆ ರಂಗಪ್ಪ ಬಾಲನ್ನವರ ಯೋಜನೆಯಡಿ ಬದು ನಿರ್ಮಾಣ ಕೆಲಸದಲ್ಲಿ ಮಣ್ಣು ಅಗೆಯುವ ಕೆಲಸ ಮಾಡುತ್ತಾರೆ. ಅವರು ಅಗೆಯುವ ಮಣ್ಣನ್ನು ಸಹೋದರಿಯರಿಬ್ಬರು ಪರಸ್ಪರ ಸಹಕಾರದಿಂದ ಬುಟ್ಟಿಗೆ ತುಂಬಿ ಹೊಲದ ಬದುವಿಗೆ ಒಡ್ಡು ಹಾಕುವ ಕೆಲಸ ಮಾಡುತ್ತಾರೆ. ಬಾಲ್ಯದಿಂದಲೇ ಬುದ್ದಿಮಾಂದ್ಯತೆ ಹೊಂದಿರುವ ಇವರಿಗೆ ಗ್ರಾಮದಲ್ಲಿ ಖಾಸಗಿಯಾಗಿ ಯಾರೂ ಕೆಲಸ ಕೊಟ್ಟಿಲ್ಲ. ತಾಯಿ ಲಲಿತವ್ವ ಬಾಲನ್ನವರು ಮನೆಕೆಲಸ ಮಾಡಿಕೊಂಡು ಇಬ್ಬರು ಮಕ್ಕಳನ್ನು ಸಾಕುತ್ತಿದ್ದಾರೆ. ಬಡ ಕುಟುಂಬದಲ್ಲಿರುವ ಬಾಲನ್ನವರ ದಂಪತಿಗಳಿಗೆ ನರೇಗಾ ಕೆಲಸವೇ ಜೀವನಕ್ಕೆ ಆಧಾರ. ಬೇಸಿಗೆ ಅವಧಿಯಲ್ಲಿ ತಮ್ಮಿಬ್ಬರ ಮಕ್ಕಳನ್ನು ಕರೆದುಕೊಂಡು ನರೇಗಾ ಕೆಲಸದಲ್ಲಿ ದುಡಿಮೆ ಮಾಡುತ್ತಾರೆ. ನರೇಗಾದಿಂದ ಬರುವ ಕೂಲಿಮೊತ್ತವನ್ನು ಜೀವನ ಸಾಗಿಸಲು ಮತ್ತು ಮಕ್ಕಳಿಬ್ಬರ ಆರೋಗ್ಯ ತಪಾಸಣೆಗೆ ಬಳಸಿಕೊಳ್ಳುತ್ತೇವೆ ಎಂದು ಬುದ್ದಿಮಾಂದ್ಯ ಸಹೋದರಿಯರ ತಂದೆ ರಂಗಪ್ಪ ಹೇಳುತ್ತಾರೆ.

ಸರಿಯಾಗಿ ಮಾತನಾಡಲು ಬಾರದ ಸುಮ್ಮವ್ವ ಮತ್ತು ಬಸವ್ವ ಇಬ್ಬರನ್ನು ಮಾತನಾಡಿಸಲಾಗಿ.. “ಮನರೇಗಾ ಯೋಜನೆಯಡಿ ಕೆಲಸ ಕೊಡುತ್ತಿರುವ ಬಗ್ಗೆ ಸಂತಸವಾಗಿದೆ. ನಮಗೆ ಊರಿನಲ್ಲಿ ಯಾರೂ ಕೆಲಸ ಕೊಡಲ್ಲ. ತಂದೆ-ತಾಯಿಯ ಜೊತೆ  ಒಡ್ಡಿನ ಕೆಲಸಕ್ಕೆ ಬರುತ್ತೇವೆ. ಅಪ್ಪ ಕಡಿಯುವ ಮಣ್ಣನ್ನು ಹೊತ್ತು ಹಾಕುತ್ತೇವೆ. ನಮಗೆ ದಿನಾನು ಕೆಲಸ ಕೊಡಿ” ಎಂದು ಕಣ್ಣೀರು ಹಾಕಿದರು. ಅಲ್ಲದೆ ನರೇಗಾದಿಂದ ಬಂದ ಕೂಲಿ ಮೊತ್ತವನ್ನು ಏನು ಮಾಡುತ್ತೀರಿ ಎಂದು ಪ್ರಶ್ನಿಸಿದಾಗ ಬ್ಯಾಂಕ್‌ನಲ್ಲಿಟ್ಟು ದವಾಖಾನೆಗೆ ತೋರಿಸಿಕೊಳ್ಳುತ್ತೇವೆ ಎಂದು ವಿವರಿಸಿದ್ದಾರೆ.

WhatsApp Image 2025 04 30 at 11.25.33 AM 2

ಸಹೋದರಿಯರು ಮನರೇಗಾ ಯೋಜನೆಯನ್ನು ಹೀಗೆ ಸದುಪಯೋಗಪಡಿಸಿಕೊಂಡರೆ, ತಾಲೂಕಿನ ಗೋಗೇರಿ ಗ್ರಾಮ ಪಂಚಾಯತಿಯ 45 ವರ್ಷದ ಬಸಮ್ಮ ಕೆರಿ ಬುದ್ದಿಮಾಂದ್ಯರಾಗಿದ್ದರೆ, 38 ವರ್ಷದ ಅಂದಪ್ಪ ಕೆರಿ ಕಾಲು ಕಳೆದುಕೊಂಡಿದ್ದಾರೆ. ಇಬ್ಬರು ಬೇಸಿಗೆ ಅವಧಿಯಲ್ಲಿ ಕೆಲಸಕ್ಕಾಗಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಬೇಡಿಕೆ ಸಲ್ಲಿಸುತ್ತಾರೆ. ಬೇಸಿಗೆ ಅವಧಿಯಲ್ಲಿ ಕನಿಷ್ಟ 60 ದಿನಗಳ ಕಾಲ ದುಡಿದು 22000 ಕೂಲಿ ಸಂಪಾದಿಸುತ್ತಾರೆ. ಇದರಿಂದಲೇ ಸ್ವಾವಲಂಬನೆಯಾಗಿ ಬದುಕು ಕಟ್ಟಿಕೊಂಡಿದ್ದಾರೆ.

ಈ ಕುರಿತು ಈದಿನ ಡಾಟ್ ಕಾಮ್ ಜೊತೆಗೆ ಗಜೇಂದ್ರಗಡ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ಮಾತನಾಡಿ, “ಮನರೇಗಾ ಯೋಜನೆಯಲ್ಲಿ ವಿಶೇಷ ಚೇತನರಿಗೆ, ಹಿರಿಯ ನಾಗರಿಕರಿಗೆ, ಅಂಗವಿಕಲರಿಗೆ ರಿಯಾಯಿತಿ ಕೆಲಸ ನೀಡಲಾಗುವುದು. ಗ್ರಾಮದಲ್ಲಿ ಖಾಸಗಿ ವ್ಯಕ್ತಿಗಳು ಇವರಿಗೆ ಕೆಲಸ ಕೊಡ್ತಾರೋ ಬಿಡ್ತಾರೋ ಗೊತ್ತಿಲ್ಲ. ಆದರೆ ಮನರೇಗಾ ಯೋಜನೆಯಡಿ ಇವರಿಗೆ ಅವರ ಸಾಮಾರ್ಥ್ಯದ ಆಧಾರದ ಮೇಲೆ ಕೆಲಸ ನೀಡಿ ದಿನವೊಂದಕ್ಕೆ 370 ರೂಪಾಯಿ ಕೂಲಿಮೊತ್ತ ನೀಡುತ್ತೇವೆ. ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಚೇತನರಿಗೆ ಇರುವ ಕೆಲಸದ ರಿಯಾಯಿತಿ ಬಗ್ಗೆ ಐಇಸಿ ಚಟುವಟಿಕೆ ಮೂಲಕ ಪ್ರಚಾರ ಮಾಡಲಾಗಿದೆ. ಹೀಗಾಗಿ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಚೇತನರು ಮನರೇಗಾ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ” ಎಂದು ಹೇಳಿದರು.

WhatsApp Image 2025 04 30 at 11.25.33 AM

ತಾಲೂಕು ಪಂಚಾಯತ್ ಗ್ರಾಮೀಣ ಉದ್ಯೋಗ‌ ಯೋಜನೆಯ ಸಹಾಯಕ ನಿರ್ದೇಶಕ ಬಸವರಾಜ ಬಡಿಗೇರ ಮಾತನಾಡಿ, “ದೈಹಿಕ ನೂನ್ಯತೆ ಹೊಂದಿದ್ದರೂ ಯೋಜನೆಯಡಿ ಕೆಲಸ ಮಾಡುವ ಆಸಕ್ತಿ ಈ ನಾಲ್ವರಿಗೆ ಬಂದಿರುವುದು ಒಳ್ಳೆಯದು. ಇವರಷ್ಟೇ ಅಲ್ಲದೆ ಬೇರೆ ಯಾರಾದರೂ ವಿಶೇಷ ಚೇತನರು ತಾಲೂಕಿನ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿದ್ದರೆ ಅವರು ಕೂಡಾ ಕೆಲಸಕ್ಕೆ  ಬರಬಹುದು.  ಯೋಜನೆಯಡಿ ನೀಡುವ ಕೂಲಿಮೊತ್ತದಲ್ಲಿ ಯಾವುದೇ ತಾರತಮ್ಯವಿಲ್ಲ. ಗಂಡಿಗೆ-ಹೆಣ್ಣಿಗೆ ಮತ್ತು ವಿಶೇಷ ಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೂ ಒಂದೇ ಕೂಲಿಮೊತ್ತ  ದಿನಕ್ಕೆ 370 ನೀಡಲಾಗುತ್ತಿದೆ.  ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಬೇಸಿಗೆ ಅವಧಿಯಲ್ಲಿ ಸಮುದಾಯ ಕೆಲಸದಲ್ಲಿ  ಭಾಗವಹಿಸಿ” ಎಂದು ತಿಳಿಸಿದರು.

ಇದನ್ನೂ ಓದಿ: ಗದಗ | ಮನರೇಗಾ ಯೋಜನೆಯಡಿ ಸ್ವಾವಲಂಬಿ ಬದುಕು; ಮುಂಡವಾಡದ ವೃದ್ಧ ದಂಪತಿಯ ಶ್ರಮಗಾಥೆ

ನೂನ್ಯತೆ ಅವರ ಸಾಮರ್ಥ್ಯವನ್ನೂ, ಸಾಧನೆಯ ಹಕ್ಕನ್ನೂ ಮರೆಯಿಸಬಾರದು ಎಂಬ ಸ್ಮರಣೆಗೆ ಇವರು ಉದಾಹರಣೆ. ಶ್ರಮದ ಹಕ್ಕು ಮತ್ತು ಸಮಾಜದಲ್ಲಿ ಸಮಾನತೆಗೆ ಅವರು ನೀಡಿದ ಸಂದೇಶ, ಮನರೇಗಾ ಯೋಜನೆಯ ಮೂಲಕ ಹೊಸ ಮೌಲ್ಯ ತಂತ್ರವನ್ನು ಸ್ಥಾಪಿಸುತ್ತಿದೆ. ದೈಹಿಕ ಅಥವಾ ಬೌದ್ಧಿಕ ಅಡಚಣೆಗಳು ಇದ್ದರೂ ಶ್ರಮಿಸುವ ಮನಸ್ಸು ಇದ್ದರೆ ಅವಕಾಶಗಳು ತೆರೆದುಕೊಳ್ಳುತ್ತವೆ ಎಂಬುದನ್ನು ಈ ಉದ್ಯೋಗಿಗಳು ಸಾಬೀತುಪಡಿಸಿದ್ದಾರೆ. ಇಂತಹ ಕಥೆಗಳು ಕೇವಲ ಪ್ರೇರಣೆಯಲ್ಲ, ಅವರು ಬಯಸಿದರೆ ಸಮಾನವಾಗಿ ಬದುಕಬಹುದು ಎಂಬ ನಿಜವಾದ ಸಂದೇಶವನ್ನು ಸಮಾಜಕ್ಕೆ ನೀಡುತ್ತವೆ. ಅಂತಹವರಿಗೆ ಬೇಕಾಗಿರುವುದು ಸಹಾನುಭೂತಿ ಅಲ್ಲ; ಅವಕಾಶ ಮತ್ತು ಗೌರವ.

SHARANAPPA H SANGANALA
ಶರಣಪ್ಪ ಎಚ್ ಸಂಗನಾಳ
+ posts

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X