- ಮೂಢನಂಬಿಕೆ, ಅನಾಚಾರಗಳಿಗೆ ಬಲಿಯಾಗದೆ ವೈಜ್ಞಾನಿಕವಾಗಿ ಹಬ್ಬ ಆಚರಿಸಬೇಕು
- ದಸಂಸ, ಮಾನವ ಬಂಧುತ್ವ ವೇದಿಕೆಯಿಂದ ಬಸವ ಪಂಚಮಿ ಆಚರಣೆ
ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ದಸಂಸ ಮತ್ತು ಮಾನವ ಬಂದುತ್ವ ವೇದಿಕೆಯ ಕಾರ್ಯಕರ್ತರು ಸ್ನೇಹ ಸಂಜೀವಿನಿ ಸಂಸ್ಥೆ ನಡೆಸುತ್ತಿರುವ ವೈಭವ ನಿರ್ಗತಿಕರ ವೃದ್ಧಾಶ್ರಮದಲ್ಲಿ ಬಸವ ಪಂಚಮಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ದಸಂಸ ತಾಲೂಕಾಧ್ಯಕ್ಷ ದತ್ತು ಜೋಗನ್ನವರ, “ಸೇವಿಸುವ ಆಹಾರವನ್ನು ವ್ಯರ್ಥ ಮಾಡುವ ಬದಲಿಗೆ ನಿರ್ಗತಿಕರಿಗೆ ನೀಡುವುದು ಮಾನವೀಯತೆ. ಯಾವುದೇ ಹಬ್ಬಗಳನ್ನು ಮೂಢನಂಬಿಕೆ, ಅನಾಚಾರಗಳಿಗೆ ಬಲಿಯಾಗದೆ ವೈಜ್ಞಾನಿಕವಾಗಿ ಆಚರಿಸಲು ಮುಂದಾಗಬೇಕು. ಅನ್ನ ಚೆಲ್ಲುವ ಬದಲು ಹಸಿದ ಹೊಟ್ಟೆಗೆ ನೀಡಬೇಕು” ಎಂದು ಹೇಳಿದರು.
ದಲಿತ ಮುಖಂಡ ಗುರುನಾಥ ಕೆಂಗಾರಕರ್ ಮಾತನಾಡಿ, “ಮೌಢ್ಯದಿಂದ ಹೊರಬಂದು ಬುದ್ಧ ಬಸವ ಅಂಬೇಡ್ಕರ್ ರವರ ವೈಜ್ಞಾನಿಕ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆಯ ಬಾಲರಾಜ್ ದೊಡ್ಡಮನಿ, ಮೈಲಾರಪ್ಪ ಹಿರೇಮನಿ, ಮಂಜು ದೊಡ್ಡಮನಿ, ಮಹಾಂತೇಶ್ ಪೂಜಾರ್, ದೇವಪ್ಪ ಮಾದರ್. ಶಿವಾನಂದ್ ಮಾದರ್, ಬಸವರಾಜ್ ಜೋಗನ್ನವರ್ ಗುರುನಾಥ್ ಕೆಂಗಾರಕರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು