ಲಕ್ಷ್ಮೇಶ್ವರ ಪುರಸಭೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಆವರಣದಲ್ಲಿ ನಿರ್ಮಾಣ ಮಾಡುತ್ತಿರುವ ಬೃಹತ್ ಜಲಾಗಾರ ಕಾಮಗಾರಿಯನ್ನು ಸ್ಥಳಾಂತರಿಸಲು ಆಗ್ರಹಿಸಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ನಾಕಾ ಹತ್ತಿರದ ಪಾಳಾ-ಬಾದಾಮಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಕಾಲೇಜಿನ ಹಳೆಯ ವಿದ್ಯಾರ್ಥಿ ಶರಣು ಗೋಡಿ ಮಾತನಾಡಿ, “ಮಹಾವಿದ್ಯಾಲಯದ ಆವರಣದಲ್ಲಿ ಅಮೃತ 2.0 ಯೋಜನೆಯಡಿ ನಿರ್ಮಾಣವಾಗುತ್ತಿರುವ ಬಹುಉದ್ದೇಶ ನೀರಿನ ಟ್ಯಾಂಕ್ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಸೂಕ್ತ ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸಬೇಕು” ಎಂದು ಒತ್ತಾಯಿಸಿದರು.
“ಲಕ್ಷ್ಮೇಶ್ವರ ನಗರದ ಗೌರವಾನ್ವಿತ ಕಲ್ಮಠ ಮನೆತನದವರು ಈ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಲಕ್ಷ್ಮೇಶ್ವರ ಪುರಸಭೆಗೆ ದಾನವಾಗಿ ನೀಡಿದ್ದು, ಸಾವಿರಾರು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಇದು ಮಹತ್ವದ ಕೇಂದ್ರವಾಗಿದೆ. ದಾನವಾಗಿ ನೀಡಲಾದ ಶಿಕ್ಷಣ ಸಂಸ್ಥೆಯ ಭೂಮಿಯನ್ನು ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಬಳಸುವುದು ಸರಿಯಲ್ಲ ಎಂಬುದು ನಮ್ಮ ಹಾಗೂ ಸಾರ್ವಜನಿಕರ ಅಭಿಪ್ರಾಯವಾಗಿದೆ” ಎಂದರು.
“ಈ ಮಹಾವಿದ್ಯಾಲಯವು ಅನೇಕ ದಶಕಗಳ ಇತಿಹಾಸ ಹೊಂದಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರಮುಖ ಸ್ಥಳವಾಗಿದೆ. ಮಹಾವಿದ್ಯಾಲಯದ ಆವರಣದಲ್ಲಿ ಇಂತಹ ಭಾರೀ ನೀರಿನ ಟ್ಯಾಂಕ್ ನಿರ್ಮಾಣ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯದ ಚಟುವಟಿಕೆಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಜೊತೆಗೆ ವಿದ್ಯಾರ್ಥಿಗಳ ಸುರಕ್ಷತೆ, ಕಾಲೇಜಿನ ಪರಿಸರ ಹಾಗೂ ಸೌಂದರ್ಯಕ್ಕೂ ಧಕ್ಕೆಯಾಗುವ ಆತಂಕ ವ್ಯಕ್ತವಾಗಿದೆ” ಎಂದರು.
“ನಗರದಲ್ಲಿ ಇತರ ಸರ್ಕಾರಿ ಜಾಗ ಹಾಗೂ ಪರ್ಯಾಯ ಸ್ಥಳಗಳ ಲಭ್ಯತೆ ಇದ್ದರೂ ಸಹ ಶಿಕ್ಷಣ ಸಂಸ್ಥೆಯ ಆವರಣವನ್ನೇ ಆಯ್ಕೆ ಮಾಡಿರುವುದು ಸಮಂಜಸವಲ್ಲವೆಂಬುದನ್ನು ನಾವು ಭಾವಿಸುತ್ತೇವೆ. ಈಗ ನಡೆಯುತ್ತಿರುವ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಬಹು ಉದ್ದೇಶದ ನೀರಿನ ಟ್ಯಾಂಕ್ ಅನ್ನು ಬೇರೆ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಆದೇಶಿಸಬೇಕು” ಎಂದು ಒತ್ತಾಯಿಸಿದರು.
“ಶಿಕ್ಷಣ ಸಂಸ್ಥೆಯ ಮೂಲ ಉದ್ದೇಶ ಹಾಗೂ ದಾನಿಗಳ ಆಶಯವನ್ನು ಗೌರವಿಸಿ ಕ್ರಮ ಕೈಗೊಳ್ಳಬೇಕು. ಅಲ್ಲದೆ ಈ ಈ ಮಹಾವಿದ್ಯಾಲಯವು ಸರ್ಕಾರಕ್ಕೆ ಹತ್ತಾಂತರಿಸಲು ಪುರಸಭೆ ಲಕ್ಷ್ಮೇಶ್ವರ ಆಡಳಿತ ಮಂಡಳಿ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ. ಅದರಂತೆ ಈ ಮಹಾವಿದ್ಯಾಲಯವು ಸರ್ಕಾರಿ ಮಹಾವಿದ್ಯಾಲಯ ಅಂತ ಮಂಜೂರಿ ಹಂತದಲ್ಲಿದ್ದು, ಸದರಿ ಜಾಗವು ಮುಂದಿನ ದಿನಮಾನಗಳಲ್ಲಿ ವಿವಿಧ ವಿಭಾಗಗಳ ಕೊಠಡಿ ಕಟ್ಟಡ ನಿರ್ಮಾಣಕ್ಕೆ ಅವಶ್ಯಕತೆ ಇದೆ. ಈಗ ನಿರ್ಮಿಸಿತ್ತಿರುವ ಜಲಗಾರ ಕಾಮಗಾರಿಯನ್ನು ಸ್ಥಗಿತಗೊಳಿಸಿ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂಬುದನ್ನು ಈ ಮೂಲಕ ತಿಳಿಸುತ್ತೇವೆ” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ತಿಪ್ಪಣ್ಣ ಸಂಶಿ, ಪದ್ಮರಾಜ ಪಾಟೀಲ್, ಟಾಕಪ್ಪ ಸಾತಪುರ, ಸೋಮಣ್ಣ ಹತ್ತಿ, ಇಸ್ಮಾಯಿಲ್ ಆಡೂರು, ಸದಾನಂದ ನಂದೆನ್ನವರ, ಸಂಜಿಜವ ಅಮರಾಪುರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




