ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಗದಗದಲ್ಲಿ ಕರವೇ ಪ್ರತಿಭಟನೆ ನಡೆಸಿದೆ. ಗದಗ ತಾಲೂಕು ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ನಾಗಪ್ಪ ಅಣ್ಣಿಗೇರಿ, “ಡಿಸೆಂಬರ್ 27 ರಂದು ನಡೆದ ಕನ್ನಡದ ನಾಮಫಲಕದ ಅಭಿಯಾನದ ವೇಳೆ ಇಂಗ್ಲಿಷ್ ಹಾಗೂ ಹಿಂದಿ ನಾಮಫಲಕಗಳನ್ನು ತೆಗೆದು ಎಸೆಯುವ ಮೂಲಕ ಕನ್ನಡ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ ಎ ನಾರಾಯಣಗೌಡ ಮತ್ತು ಕಾರ್ಯಕರ್ತರನ್ನು ಬಂಧಿಸಿರುವುದು ಖಂಡನೀಯ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
“ಕರವೇ ರಾಜ್ಯಾಧ್ಯಕ್ಷ ಹಾಗೂ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ಗದಗ ಜಿಲ್ಲಾದ್ಯಂತ ತೀವ್ರ ಪ್ರತಿಭಟನೆ ಮಾಡಲಾಗುವುದು. ಈ ಸಂದರ್ಭದಲ್ಲಿ ಹಾನಿ ಉಂಟಾದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕನ್ನಡಪರ ಕಾರ್ಯಕರ್ತರ ಬಂಧನ ಖಂಡನೆ; ಕರವೇ ಆಕ್ರೋಶ
ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಿಂಗನಗೌಡ ಮಾಲಿ ಪಾಟೀಲ್, ಗದಗ ತಾಲೂಕು ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಭೋವಿ, ತಾಲೂಕು ಉಪಾಧ್ಯಕ್ಷ ಈರಣ್ಣ ಹುರಕಡ್ಲಿ ತಾಲೂಕು ಸಂಚಾಲಕ ಅಲ್ಲಾ ಸಾಬ್ ನದಾಫ್, ಸಾಮಾಜಿಕ ಜಾಲತಾಣ ಸಂಚಾಲಕ ಮುಸ್ತಾಕ್, ದಾವಣಗೆರೆ ಪ್ರವೀಣ್ ಬನ್ನಿಗೊಳ್ಳ, ವೀರೇಶ್ ಕೊಣ್ಣೂರ್, ಫಾರೂಕ ಕನವಳ್ಳಿ, ಚಂದ್ರು ಮಣ್ಣೂರ್, ಮಂಜು ಕೊಣ್ಣೂರ್ ,ಶಿವು ಜಾಫರ್ ಸೇರಿದಂತೆ ಇತರರು ಇದ್ದರು.