“ಭೀಕರ ಬರ ಪರಿಸ್ಥಿತಿಯಲ್ಲಿ ರೈತರಿಗೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಗದಗ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಕೇಂದ್ರ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು”ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
ಗದಗ ಪಟ್ಟಣದಲ್ಲಿ ಇಂದು ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಗದಗ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಗದಗ ಜಿಲ್ಲೆಯ ಒಂದು ತಾಲೂಕನ್ನು ಮಾತ್ರ ಬರಪೀಡಿತ ತಾಲೂಕು ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬೆಳೆ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದ್ದು, ಶೇ.95ರಷ್ಟು ಪ್ರದೇಶದಲ್ಲಿ ಹಸಿರು ಕಾಣದಂತಹ ಪರಿಸ್ಥಿತಿ ಕಂಡುಬಂದಿದೆ. ಆದ್ದರಿಂದ ಮುಂದಿನ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಗದಗ ಜಿಲ್ಲೆಯ ಸಾಧ್ಯವಾದಷ್ಟು ಹೆಚ್ಚಿನ ತಾಲೂಕುಗಳನ್ನು ಸೇರ್ಪಡೆಗೊಳಿಸಿ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಪ್ರಯತ್ನಿಸಲಿದೆ” ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ರಾಯರಡ್ಡಿ ಅವರು ಮಾತನಾಡಿ, “ಮುಖ್ಯಮಂತ್ರಿಗಳ ನಿರ್ದೇಶನದಂತೆ ಈಗಾಗಲೇ ಗದಗ ಜಿಲ್ಲೆಯ ಬರ ಸ್ಥಿತಿ ಕುರಿತು ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ಹಾಗೂ ಸಭೆಗಳನ್ನು ನಡೆಸಲಾಗಿದೆ. ಅಧಿಕಾರಿಗಳಿಂದ ವರದಿ ಪಡೆದು ಕ್ರೋಢಿಕೃತ ವರದಿಯನ್ನು ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ರೈತರ ಬೆಳೆಗಳು ಸಂಪೂರ್ಣವಾಗಿ ಮಳೆ ಕೊರತೆಯಿಂದ ಬಾಧಿತವಾಗಿವೆ. ಅಲ್ಲದೇ ಸಕಾಲಕ್ಕೆ ಮಳೆ ಆಗದೆ ಹಲವು ರೈತರು ಬಿತ್ತನೆ ಕೂಡ ಮಾಡದಂತಹ ಪರಿಸ್ಥಿತಿ ತಲೆದೊರಿದ್ದು ಗದಗ ಜಿಲ್ಲೆಯನ್ನು ಸಂಪೂರ್ಣ ಬರ ಪೀಡಿತ ಘೋಷಿಸುವಂತೆ ವರದಿ ನೀಡಲಾಗಿದೆ” ಎಂದು ತಿಳಿಸಿದರು.
ಶಾಸಕರಾದ ಎಚ್.ಕೆ.ಪಾಟೀಲ ಅವರು ಮಾತನಾಡಿ, “ಮುಖ್ಯಂಮತ್ರಿಗಳು ರೈತರ ನೈಜ ಸ್ಥಿತಿಯನ್ನು ಅರಿತು ಅವರ ಸಮಸ್ಯೆಗಳ ಪರಿಹಾರಕ್ಕೆ ಅಧ್ಯಯನಶೀಲರಾಗಿರುವುದು ಸಂತಸದ ಸಂಗತಿಯಾಗಿದೆ. ಕಿತ್ತೂರು ಕರ್ನಾಟಕ ಭಾಗದ ಹೊಬಳಿ ಸಂಖ್ಯೆಗಳನ್ನು ಹೆಚ್ಚಿಸಲು ಮನವಿ ಮಾಡಿದರು. ರೈತರ ಬೆಳೆ ವಿಮೆಯಲ್ಲಿ ಆದಂತಹ ಅನ್ಯಾಯವನ್ನು ಸರಿಪಡಿಸುವ ಕುರಿತು ಮನವಿ ಮಾಡಿದರು. ಗದಗನಲ್ಲಿಯ ಗಾಳಿ ಅಸಾಮಾನ್ಯವಾಗಿದ್ದು ಮೋಡ ಬಿತ್ತನೆ ಕಾರ್ಯವನ್ನು ಡ್ರೋನ್ ಮುಖಾಂತರ ಜರುಗಿಸಲು ಅಧ್ಯಯನ ಮಾಡಲು ಅನುದಾನ ನೀಡಲು ಮನವಿ ಮಾಡಿದರು.
ಶಾಸಕರಾದ ಸಿ.ಸಿ.ಪಾಟೀಲ ಅವರು ಮಾತನಾಡಿ ನರಗುಂದ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಿಸಲು ಮನವಿ ಮಾಡಿದರು.
ಶಾಸಕರಾದ ಚಂದ್ರು ಲಮಾಣಿ ಅವರು ಮಾತನಾಡಿ ಶಿರಹಟ್ಟಿ ಮತಕ್ಷೇತ್ರ ಮೂರು ತಾಲೂಕಗಳನ್ನು ಒಳಗೊಂಡಿದ್ದು ಮಳೆ ಅಭಾವದಿಂದ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಮತಕ್ಷೇತ್ರ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಂಭತ್ತು ಕೋಟಿ ಅನುದಾನ ನೀಡಲು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ ಅವರು ಮಾತನಾಡಿ ಜಿಲ್ಲೆಯಲ್ಲಿನ ಎಲ್ಲ ತಾಲೂಕುಗಳನ್ನು ಬರಗಾಲ ಘೋಷಣೆ ಮಾಡಲು ಮನವಿ ಮಾಡಿದರು. ಗದಗ-ಬೆಟಗೇರಿ ಅವಳಿ ನಗರಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಸಬೇಕು. ಈ ಕುರಿತು ಕೆ.ಡಿ.ಪಿ.ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದರು ಕೂಡು ಬಹುದಿನಗಳ ಸಮಸ್ಯೆ ಇದುವರೆಗೂ ಇತ್ಯರ್ಥಪಡಿಸಲಾಗಿಲ್ಲ ಎಂದು ತಿಳಿಸಿದರು.
ರಾಜ್ಯ ವಿಕೇಂದ್ರಿಕರಣ, ಯೋಜನೆ ಮತ್ತು ಅಭುವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್.ಪಾಟೀಲ ಅವರು ಮಾತನಾಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಡಿಜಿಟೈಜೇಶನ್ ಪಾವತಿಗೆ ಕ್ರಮ ವಹಿಸಲು ಮನವಿ ಮಾಡಿದರು.
ಸಂದರ್ಭದಲ್ಲಿ ಶಾಸಕರಾದ ಎನ್.ಎಚ್.ಕೋನರಡ್ಡಿ, ಹೆಸ್ಕಾಂ ಅಧ್ಯಕ್ಷರಾದ ಅಜ್ಜಂಪೀರ್ ಖಾದ್ರಿ, ರಾಜ್ಯ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ (ಪ್ರಕೃತಿ ವಿಕೋಪ) ವಿಭಾಗದ ಕಾರ್ಯದರ್ಶಿ ಹಾಗೂ ಪರಿಹಾರ ಆಯುಕ್ತರಾಗಿ ಮನೋಜ್ ಕುಮಾರ್ ಮೀನಾ, ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕುಮಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.





