ಉಕ್ರೇನ್ನ ವಿವಿಧ ನಗರಗಳು ಮತ್ತು ರಾಜಧಾನಿ ಕೀವ್ ಪ್ರದೇಶಗಳ ಮೇಲೆ ರಷ್ಯಾ ನಡೆಸಿದ ಭೀಕರ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಲ್ಲಿ ಒಬ್ಬ ಭಾರತೀಯ ಪ್ರಜೆ ಸೇರಿದಂತೆ ಒಟ್ಟು 12 ಮಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅಧ್ಯಕ್ಷ ಝೆಲೆನ್ಸ್ಕಿ, “ರಷ್ಯಾ ನಡೆಸಿದ ಈ ಭೀಕರ ದಾಳಿಯಲ್ಲಿ ಭಾರತೀಯ ಪ್ರಜೆ ಸೇರಿದಂತೆ ಒಟ್ಟು 12 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಣ ಕಳೆದುಕೊಂಡವರ ಕುಟುಂಬಸ್ಥರು ಮತ್ತು ಸಂಬಂಧಿಕರಿಗೆ ನನ್ನ ತೀವ್ರ ಸಾಂತ್ವನಗಳು” ಎಂದು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಉಕ್ರೇನ್-ರಷ್ಯಾ ಸಂಘರ್ಷ | ಮಾತುಕತೆ ವಿಫಲ: ರಷ್ಯಾ ಡ್ರೋನ್ ದಾಳಿಗೆ ಉಕ್ರೇನ್ನ 9 ಮಂದಿ ಬಲಿ
ನಾಗರಿಕರ ವಸತಿ ಸಮುಚ್ಚಯಗಳು, ರೈಲ್ವೆ ಡಿಪೋಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಉದ್ದೇಶಪೂರ್ವಕವಾಗಿ ಗರಿಷ್ಠ ಮಟ್ಟದ ಹಾನಿ ಉಂಟುಮಾಡಲು ಈ ದಾಳಿಗಳನ್ನು ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.
ಕೀವ್, ಒಡೆಸ್ಸಾ ಹಾಗೂ ಬೊರಿಸ್ಪಿಲ್ ಸೇರಿದಂತೆ ಹಲವು ಭಾಗಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಪಡೆಗಳು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್ಗಳ ಮೂಲಕ ತೀವ್ರ ವಾಯುದಾಳಿ ನಡೆಸಿವೆ. ಈ ದಾಳಿಯಲ್ಲಿ ಹತ್ತಾರು ನಾಗರಿಕರು ತೀವ್ರವಾಗಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯಗಳು ಭರದಿಂದ ಸಾಗಿವೆ ಎಂದು ಉಕ್ರೇನ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.





