ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಅನುಷ್ಠಾನದಲ್ಲಿ ಗದಗ ಜಿಲ್ಲೆಯು ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. 2023-24ರ ಆರ್ಥಿಕ ವರ್ಷದ ಮೊದಲ 6 ತಿಂಗಳಲ್ಲಿ ತನ್ನ ಗುರಿಯನ್ನು ತಲುಪಿದೆ. ಈ ವರ್ಷದ ಇನ್ನೂ ಆರು ತಿಂಗಳಿದ್ದು, ಮೊದಲ ಸ್ಥಾನದತ್ತ ದಾಪುಗಾಲು ಇಡುತ್ತಿದೆ.
2023-24ರ ಆರ್ಥಿಕ ವರ್ಷದಲ್ಲಿ ಗದಗ ಜಿಲ್ಲಾ ಪಂಚಾಯತಿಗೆ 32 ಲಕ್ಷ ಮಾನವ ಸೃಜನ ದಿನಗಳನ್ನಾಗಿ (ಕಾಮಗಾರಿಯ ದಿನಗಳು) ಪರಿವರ್ತಿಸಬೇಕು ಎಂಬ ಗುರಿಯನ್ನು ನೀಡಿತ್ತು. ಆದರೆ, ಸಪ್ಟೆಂಬರ್ ಅಂತ್ಯದ ವೇಳೆಗೆ ಶೇ.100 ಗುರಿಯನ್ನು ತಲುಪುವ ಮೂಲಕ ರಾಜ್ಯದಲ್ಲಿ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ರಾಜ್ಯದಲ್ಲೇ ಉತ್ತಮ ಪ್ರಗತಿ ಮಾಡಿರುವ ಜಿಲ್ಲಾ ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗದಗ ಜಿಲ್ಲಾ ಪಂಚಾಯತಿಯು ತನ್ನ ವ್ಯಾಪ್ತಿಯಲ್ಲಿ 7 ತಾಲೂಕು ಪಂಚಾಯತಿಗಳನ್ನು ಒಳಗೊಂಡಿದ್ದು, 122 ಗ್ರಾಮ ಪಂಚಾಯತಿಗಳಿವೆ. ಜಿಲ್ಲೆಯಲ್ಲಿ 1.64 ಲಕ್ಷ ಉದ್ಯೋಗ ಚೀಟಿದಾರರಿದ್ದು, 1.22 ಲಕ್ಷ ಕ್ರಿಯಾಶೀಲ ಕುಟುಂಬಗಳು ಯೋಜನೆಯಡಿ ಉದ್ಯೋಗ ಪಡೆದುಕೊಂಡಿದ್ದಾರೆ. ಇದೆಲ್ಲದರ ಫಲವಾಗಿ, ಸೆಪ್ಟೆಂಬರ್ ಮಾಹೆಯ ಅಂತ್ಯಕ್ಕೆ 32,18,310 ಲಕ್ಷ ಮಾನವ ದಿನಗಳನ್ನು ಸೃಜಿಸಿ, ಒಟ್ಟು 12,949.95 ಲಕ್ಷ ರೂ. ಕೂಲಿ ನೀಡಿ, 100% ರಷ್ಟು ಸಾಧನೆ ಮಾಡಿದೆ.
ಜಿಲ್ಲೆಯಲ್ಲಿ ಮನರೇಗಾ ಯೋಜನೆಗೆ ಸಂಬಂಧಿಸಿದಂತೆ ಪ್ರತಿ ವರ್ಷ ಗುರಿಯನ್ನು ಸಾಧಿಸುವ ಕೆಲಸವಾಗುತ್ತಿದೆ. ಅದಕ್ಕೆ ಸಹಕರಿಸಿದ ಎಲ್ಲ ಗ್ರಾ.ಪಂ, ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಭಿನಂಧನಾರ್ಹರು. ಗ್ರಾಮೀಣ ಪ್ರದೇಶದ ಅರ್ಹ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಉಪಯೋಗ ಪಡೆದುಕೊಳ್ಳಬೇಕು ಅಂತಿದ್ದಾರೆ ಅಧಿಕಾರಿಗಳು.
ತಾಲೂಕವಾರು ಪ್ರಗತಿ
ರೋಣ – ವಾರ್ಷಿಕ ಗುರಿ 5,78,693 ಕೊಡಲಾಗಿದ್ದು ಸಪ್ಟೆಂಬರ್ ಅಂತ್ಯಕ್ಕೆ 6,93,805 ಮಾನವ ದಿನಗಳ ಸೃಜನೆ ಮಾಡುವ ಮೂಲಕ 119.89% ಪ್ರಗತಿ ಸಾಧಿಸಿದೆ..
ನರಗುಂದ – ವಾರ್ಷಿಕ ಗುರಿ 2,10,101 ಕೊಡಲಾಗಿದ್ದು ಸಪ್ಟೆಂಬರ್ ಅಂತ್ಯಕ್ಕೆ 2,14,715 ಮಾನವ ದಿನಗಳ ಸೃಜನೆ ಮಾಡುವ ಮೂಲಕ 102.20% ಸಾಧನೆ ಮಾಡಿ ಪ್ರಗತಿ ಸಾಧಿಸಿದೆ.
ಲಕ್ಷ್ಮೇಶ್ವರ – ವಾರ್ಷಿಕ ಗುರಿ 3,67,535 ಕೊಡಲಾಗಿದ್ದು ಸಪ್ಟೆಂಬರ್ ಅಂತ್ಯಕ್ಕೆ 3,70,685 ಮಾನವ ದಿನಗಳ ಸೃಜನೆ ಮಾಡುವ ಮೂಲಕ 100.94% ಸಾಧನೆ ಮಾಡಿ ಪ್ರಗತಿ ಸಾದಿಸಿದೆ.
ಗಜೇಂದ್ರಗಡ – ವಾರ್ಷಿಕ ಗುರಿ 4,47,660 ಕೊಡಲಾಗಿದ್ದು ಸಪ್ಟೆಂಬರ್ ಅಂತ್ಯಕ್ಕೆ 4,45,503 ಮಾನವ ದಿನಗಳ ಸೃಜನೆ ಮಾಡುವ ಮೂಲಕ 99.52% ಸಾಧನೆ ಮಾಡಿ ಪ್ರಗತಿ ಸಾದಿಸಿದೆ.
ಮುಂಡರಗಿ – ವಾರ್ಷಿಕ ಗುರಿ 5,13,957 ಕೊಡಲಾಗಿದ್ದು ಸಪ್ಟೆಂಬರ್ ಅಂತ್ಯಕ್ಕೆ 5,18,797 ಮಾನವ ದಿನಗಳ ಸೃಜನೆ ಮಾಡುವ ಮೂಲಕ 100.94% ಸಾಧನೆ ಮಾಡಿ ಪ್ರಗತಿ ಸಾದಿಸಿದೆ..
ಗದಗ – ವಾರ್ಷಿಕ ಗುರಿ 71,7,838 ಕೊಡಲಾಗಿದ್ದು ಸಪ್ಟೆಂಬರ್ ಅಂತ್ಯಕ್ಕೆ 6,73,581 ಮಾನವ ದಿನಗಳ ಸೃಜನೆ ಮಾಡುವ ಮೂಲಕ 93.83% ಸಾಧನೆ ಮಾಡಿ ಪ್ರಗತಿ ಸಾದಿಸಿದೆ..
ಶಿರಹಟ್ಟಿ – ವಾರ್ಷಿಕ ಗುರಿ 3,64,217 ಕೊಡಲಾಗಿದ್ದು ಸಪ್ಟೆಂಬರ್ ಅಂತ್ಯಕ್ಕೆ 3,01,224 ಮಾನವ ದಿನಗಳ ಸೃಜನೆ ಮಾಡುವ ಮೂಲಕ 82.70% ಸಾಧನೆ ಮಾಡಿದೆ…
ಗದಗ ಜಿಲ್ಲಾ ಪಂಚಾಯತಿ ಪ್ರಗತಿ ವಿವರ:
ಜಿಲ್ಲೆಯಲ್ಲಿ ಸೃಜನೆಯಾದ ಹಿಂದಿನ ಐದು ವರ್ಷಗಳ ಮಾನವ ದಿನ ಸೃಜನೆಯ ವಿವರ:
2019-20 ನೇ ಸಾಲಿನಲ್ಲಿ 3190138 ಮಾನವ ದಿನಗಳ ಸೃಜನೆ
2020-21 ನೇ ಸಾಲಿನಲ್ಲಿ 3100486 ಮಾನವ ದಿನಗಳ ಸೃಜನೆ
2021-22 ನೇ ಸಾಲಿನಲ್ಲಿ 4243605 ಮಾನವ ದಿನಗಳ ಸೃಜನೆ
2022-23 ನೇ ಸಾಲಿನಲ್ಲಿ 2937462 ಮಾನವ ದಿನಗಳ ಸೃಜನೆ
2023-24 ಸಪ್ಟೆಂಬರ್ ಅಂತ್ಯಕ್ಕೆ 3218310 ಮಾನವ ದಿನಗಳ ಸೃಜನೆ ಮಾಡಲಾಗಿದೆ.
ಅನುಷ್ಠಾನಕ್ಕೆ ವೆಚ್ಚಮಾಡಲಾದ ಅನುದಾನದ(ಲಕ್ಷಗಳಲ್ಲಿ) ವಿವರ
2019-20 – ನೇ ಸಾಲಿನಲ್ಲಿ 13534.98 ರಷ್ಟು ವೆಚ್ಚಮಾಡಲಾಗಿದೆ.
2020-21- ನೇ ಸಾಲಿನಲ್ಲಿ 11399.89 ರಷ್ಟು ವೆಚ್ಚಮಾಡಲಾಗಿದೆ.
2021-22 – ನೇ ಸಾಲಿನಲ್ಲಿ 15601.06 ರಷ್ಟು ವೆಚ್ಚಮಾಡಲಾಗಿದೆ.
2022-23 – ನೇ ಸಾಲಿನಲ್ಲಿ 15307.07 ರಷ್ಟು ವೆಚ್ಚಮಾಡಲಾಗಿದೆ.
2023-24. ಸಪ್ಟೆಂಬರ್ ಅಂತ್ಯಕ್ಕೆ 12996.64 ರಷ್ಟು ವೆಚ್ಚಮಾಡಲಾಗಿದೆ.
ಗದಗ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಿಸಿದ ಕಾಮಗಾರಿಗಳು:
ಗ್ರಾಮೀಣ ಮೂಲಭೂತ ಸೌಕರ್ಯಗಳು:
• ಗ್ರಾಮೀಣ ರಸ್ತೆಗಳ ಅಭಿವೃದ್ಧಿ-189
• ಗ್ರಾಮೀಣ ಚರಂಡಿ ನಿರ್ಮಾಣ -29
ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ ಕಾಮಗಾರಿಗಳು:
• ದಿಬ್ಬದಿಂದ ಕಣಿವೆ (RV) ವರೆಗೆ ಕಾಮಗಾರಿಗಳು-712
• ಕೃಷಿ ಹೊಂಡ ನಿರ್ಮಾಣ-61
• ಕೆರೆ ಅಭಿವೃದ್ಧಿ-25
• ಕಲ್ಯಾಣಿ ಅಭಿವೃದ್ಧಿ-2
• ಕಾಲುವೆ ಅಭಿವೃದ್ಧಿ ಕಾಮಗಾರಿ-40
ಶಾಲಾಭಿವೃದ್ಧಿ ಕಾಮಗಾರಿಗಳು:
• ಆಟದ ಮೈದಾನ ಅಭಿವೃದ್ಧಿ-05
• ಶಾಲಾ ಕಾಂಪೌಂಡ್ ಅಭಿವೃದ್ಧಿ-07
• ಶಾಲಾ ಶೌಚಾಲಯ ನಿರ್ಮಾಣ-08
• ಅಡುಗೆ ಕೋಣೆ ನಿರ್ಮಾಣ-01
• ಪೌಷ್ಟಿಕ ಕೈತೋಟ ಗಳ ಅಭಿವೃದ್ಧಿ-87
ವೈಯಕ್ತಿಕ ಸೌಲಭ್ಯಗಳು:
• ದನದ ಕೊಟ್ಟಿಗೆ-311
• ಬಚ್ಚಲು ಗುಂಡಿ-42
• ಕುರಿ ಸಾಕಾಣಿಕೆ ಶೆಡ್ಡು-24
• ಕೋಳಿ ಸಾಕಾಣಿಕೆ -03
• ಮನೆ ನಿರ್ಮಾಣ-700
“ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಬೇಡಿಕೆ ನೀಡಿದ ಕೂಲಿಕಾರರಿಗೆ ಸರಿಯಾದ ಸಮಯಕ್ಕೆ ಸ್ಥಳೀಯವಾಗಿ ಉದ್ಯೋಗ ಒದಗಿಸಲು ಜಿಲ್ಲಾ/ತಾಲ್ಲೂಕು/ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಿದ್ದರಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ, ಮುಂಬರುವ ದಿನಗಳಲ್ಲಿಯೂ ಯೋಜನೆಯಡಿ ಗ್ರಾಮಗಳಲ್ಲಿ ಬಹುಬಾಳಿಕೆಯ ಆಸ್ತಿ ಸೃಜನೆ ಹಾಗೂ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ವೈಯಕ್ತಿಕ ಸೌಲಭ್ಯಗಳ ನೀಡಿಕೆಗೆ ಹೆಚ್ಚಿನ ಗಮನಹರಿಸಲಾಗುವುದು” ಎಂದು ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಹೇಳಿದ್ದಾರೆ.
“ಜಿಲ್ಲೆಯಲ್ಲಿರುವ 7 ತಾಲ್ಲೂಕುಗಳಿಂದ ಒಟ್ಟು 122 ಗ್ರಾಮ ಪಂಚಾಯತಿಗಳಲ್ಲಿ 2.63 ಲಕ್ಷ ಕೂಲಿಕಾರರು ಯೋಜನೆಯಡಿ ಸಕ್ರೀಯರಾಗಿದ್ದು,ತಾಲ್ಲೂಕು/ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿ/ಸಿಬ್ಬಂದಿಗಳ ಸಹಕಾರದಿಂದ ಶೇ.100% ರಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಿಸಿ, ಯೋಜನೆಯಡಿ ನೋದಾಯಿತ ಫಲಾನುಭವಿಗಳಿಗೆ ತಮ್ಮ ತಮ್ಮ ಗ್ರಾಮಗಳಲ್ಲಿಯೇ ಸ್ಥಳೀಯವಾಗಿ ಅಕುಶಲ ಕೂಲಿ ಕೆಲಸ ನೀಡಿ ಆರ್ಥಿಕವಾಗಿ ಬೆಂಬಲ ನೀಡಲಾಗಿದೆ” ಎಂದು ಗದಗ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಸಿ.ಆರ್ ಮುಂಡರಗಿ ತಿಳಿಸಿದ್ದಾರೆ.
“2023-24 ನೇ ಆರ್ಥಿಕ ವರ್ಷದ ಪ್ರಾರಂಭದಿಂದಲೇ ಜಿಲ್ಲಾ ಮಟ್ಟದ ಅಧಿಕಾರಿಗಳು ನೀಡಿದ ಸಲಹೆ, ಸಹಕಾರ ಹಾಗೂ ಮಾರ್ಗದರ್ಶನದಿಂದ ಪ್ರಸಕ್ತ ಸಾಲಿನಲ್ಲಿ ತಾಲ್ಲೂಕುಗಳಿಗೆ ನಿಗದಿಪಡಿಸಿದ ಗುರಿಯನ್ನು ವರ್ಷದ ಪೂರ್ವಾರ್ಧದಲ್ಲಿಯೇ ಶೇಕಡಾ 100% ಪ್ರಗತಿ ಸಾಧಿಸಲು ಸಾಧ್ಯವಾಯಿತು ಎಂದು ಹೇಳಬಹುದು” ಎಂದು ರೋಣ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ರವಿ ಎ.ಎನ್ ತಿಳಿಸಿದ್ದಾರೆ.