“ನಿನ್ನೆ ನಡೆದ ಹಿಂದೂ ಸಮಾವೇಶದಲ್ಲಿ ಬೇರೆ ಧರ್ಮದ ಹೆಸರನ್ನು ಬಳಸಿ ಅಲ್ಲಿ ನೆರೆದ ಜನರನ್ನು ಇನ್ನೂಂದು ಧರ್ಮದ ವಿರುದ್ಧ ಎತ್ತಿಕಟ್ಟಿ ಮತ್ತೆ ಕನ್ಹೇರಿ ಸ್ವಾಮೀಜಿ ದ್ವೇಷ ಭಾಷಣ ಮಾಡಿದ್ದಾರೆ. ಕೂಡಲೇ ಕನ್ಹೇರಿ ಸ್ವಾಮಿಜಿ ವಿರುದ್ದ ಪೋಲಿಸ್ ವರಿಷ್ಠಾಧಿಕಾರಿಗಳು ಸುಮೋಟೋ ಪ್ರಕರಣ ದಾಖಲಿಸಬೇಕು” ಎಂದು ದಲಿತ ಹೋರಾಟಗಾರ ಮುತ್ತು ಬಿಳಿಯಲಿ ಆಗ್ರಹಿಸಿದರು.
ಗದಗ ಪಟ್ಟಣದ ವಿ.ಡಿ.ಎಸ್.ಟಿ ಮೈದಾನದಲ್ಲಿ ಶಿವ ಶರಣರ ಹಿಂದೂ ಸಮಾವೇಶದಲ್ಲಿ ಕನ್ಹೇರಿ ಸ್ವಾಮೀಜಿ ಭಾಷಣದಲ್ಲಿ ಮತ್ತೆ ಒಂದು ಧರ್ಮದ ವಿರುದ್ಧ ಮಾತನಾಡಿದ್ದು, ಈ ಹೇಳಿಕೆಯನ್ನು ಖಂಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
“ಈ ಹಿಂದೆ ವಿಜಯಪುರ ಜಿಲ್ಲಾಧಿಕಾರಿಗಳು ವಿಜಯಪುರದ ಜಿಲ್ಲೆಯ ಶಾಂತಿ, ಸೌಹಾರ್ದತೆ ಹಿತದೃಷ್ಟಿಯಿಂದ ಈ ಕನ್ನೇರಿ ಸ್ವಾಮೀಜಿಯನ್ನು ಜಿಲ್ಲೆಗೆ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು. ಈ ನಿರ್ಬಂಧ ಆದೇಶವನ್ನು ಪ್ರಶ್ನಿಸಿ ಕನ್ನೇರಿ ಸ್ವಾಮೀಜಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದನ್ನು” ನೆನಪಿಸಿದರು.
“ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಕನ್ನೇರಿ ಸ್ವಾಮೀಜಿಗೆ ಒಬ್ಬ ಸ್ವಾಮೀಜಿ ಆದಂತವರ ಭಾಷೆ ಮಿತಿದಲ್ಲಿರಬೇಕು.ಅಶ್ಲೀಲ ಹಾಗೂ ಯಾವ ಸಮುದಾಯಕ್ಕೂ ಅವಹೇಳನಕಾರಿ ಮಾತುಗಳನ್ನು ಆಡಬಾರದೆಂದು ಸುಪ್ರೀಂಕೋರ್ಟ್ ಛಿಮಾರಿ ಹಾಕಿದ್ದರೂ ನಿನ್ನೆ ಗದಗನಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಮತ್ತೆ ತಮ್ಮ ನಾಲಿಗೆಯನ್ನು ಒಂದು ಧರ್ಮದ ವಿರುದ್ಧ ಹರಿಬಿಟ್ಟಿದ್ದಾರೆ” ದಲಿತ ಹೋರಾಟಗಾರ ಮುತ್ತು ಬಿಳಿಯಲಿ ಕಿಡಿಕಾರಿದ್ದಾರೆ.
“ನಿನ್ನೆ ನಡೆದ ಹಿಂದೂ ಸಮಾವೇಶದಲ್ಲಿ ಗದಗ ಜಿಲ್ಲೆಯಲ್ಲಿ ಪರಸ್ಪರ ಪ್ರಿತಿಸಿ ವಿವಾಹವಾದ ಅಂತರಧರ್ಮಿಯರ ಹೆಸರುಗಳನ್ನು ಬಹಿರಂಗವಾಗಿ ಉಲ್ಲೇಖಿಸಿ ಲವ್ ಜಿಹಾದ್ ಎಂಬ ಹೆಸರಿನ ಮೂಲಕ ಒಂದು ಧರ್ಮದ ವಿರುದ್ಧ ಅಲ್ಲಿ ನೆರೆದ ಜನರನ್ನು ಎತ್ತಿ ಕಟ್ಟಿ, ಪ್ರಚೋದಿಸುವ ಮಾತುಗಳನ್ನಾಡುವ ಮೂಲಕ ದ್ವೇಷ ಭಾಷಣ ಮಾಡಿ ಗದಗ ಜಿಲ್ಲೆಯ ಕೋಮು ಸೌಹಾರ್ದತೆಗೆ ದಕ್ಕೆ ತರುವ ಮೂಲಕ ಜನರನ್ನು ಪ್ರಚೋದಿಸಿದ್ದಾರೆ” ಎಂದು ಆರೋಪಿಸಿದರು.
“ಅಷ್ಟೇ ಅಲ್ಲದೇ ಈ ನಾಡಿನ ಚಿಂತಕರು ಜಾನಪದ ತಜ್ಞರಾದ ಬಸವಾನುಯಾಯಿಗಳಾದ ಕಲಬುರ್ಗಿಯ ಮಿನಾಕ್ಷಿ ಬಾಳಿ ಹೆಸರನ್ನು ಪ್ರಸ್ತಾಪಿಸಿ ಅವರ ಅಡ್ಡ ಹೆಸರನ್ನು ಅಶ್ಲೀಲ ಭಾಷೆಯ ಮೂಲಕ ನಿಂದನಾತ್ಮಕವಾಗಿ ನಿಂದಿಸಿದ ಕನ್ನೇರಿ ಸ್ವಾಮೀಜಿ ಸಾರ್ವಜನಿಕವಾಗಿ ಅವರಿಗೆ ಅವಮಾನ ಮಾಡಿ ಮಾನಹಾನಿ ಮಾಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕನ್ಹೇರಿ ಸ್ವಾಮೀಜಿ ಬರುವ ಎರಡು ದಿನಗಳ ಮುಂಚೆಯೇ ‘ಸಮಾನತೆಗಾಗಿ ನಾವು’ ಎಂಬ ವೇದಿಕೆಯಿಂದ ಈ ಕನ್ನೇರಿ ಸ್ವಾಮೀಜಿಯನ್ನು ಗದಗ ಜಿಲ್ಲೆಗೆ ಬರಲು ನಿರ್ಬಂಧಿಸಬೇಕು. ಈ ಸ್ವಾಮೀಜಿ ಒಂದು ಧರ್ಮದ ವಿರುದ್ಧ ಮಾತನಾಡಿ ಗದಗ ಜಿಲ್ಲೆಯ ಕೋಮು ಸೌಹಾರ್ದತೆಯನ್ನು ಹಾಳು ಮಾಡುತ್ತಾರೆ. ಎಂದು ಗದಗ ಜಿಲ್ಲಾಧಿಕಾರಿಗಳಿಗೆ ಹಾಗೂ ಗದಗ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವು” ಎಂದು ಹೇಳಿದರು.
“ನಮ್ಮ ಮನವಿಯನ್ನು ನಿರ್ಲಕ್ಷಿಸಿದ ಜಿಲ್ಲಾಡಳಿತ ಇಂತ ಕೋಮುವಾದಿ ಕನ್ನೇರಿ ಸ್ವಾಮೀಜಿಯನ್ನು ಗದಗ ಪ್ರವೇಶಿಸಲು ಅನುಮತಿ ನೀಡಿ ಈಗ ಗದಗ ಜಿಲ್ಲೆಯ ಸೌಹಾರ್ದತೆಯನ್ನು ಹಾಳು ಮಾಡಿ ಹೋಗಿದ್ದಾರೆ” ಎಂದು ಕಿಡಿಕಾರಿದರು.
“ಮೇ 30ರಂದು ಶನಿವಾರ ಈ ಬಸವಾದಿ ಶರಣರ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಹಿಂದೂ ಸಮಾವೇಶದ ವಿರುದ್ಧ ನಗರದ ಗಾಂದಿ ವೃತ್ತದಲ್ಲಿ ‘ಸಾಮೂಹಿಕ ವಚನ ಪಠಣ’ ಹಾಗೂ ‘ಸಂವಿಧಾನದ ಪೂರ್ವ ಪೀಠಿಕೆಯ ಸಮಾನತೆಯ ಉದ್ಘೋಷ’ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದನ್ನು ಪ್ರಸ್ತಾಪಿಸಿದ ಕನ್ನೇರಿ ಸ್ವಾಮೀಜಿಗಳು ಆ ಕಾರ್ಯಕ್ರಮದಲ್ಲಿ ‘ನರೇಗಾ ಕಾರ್ಮಿಕರನ್ನು ಕರೆ ತಂದಿದ್ದಾರೆ’ ಎಂದು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಈ ಸಾಮೂಹಿಕ ವಚನ ಪಠಣದ ಕಾರ್ಯಕ್ರಮಕ್ಕೆ ಕೂಲಿ ಕಾರ್ಮಿಕರನ್ನು ಬಳಸಿಕೊಂಡಿದ್ದನ್ನು ಕನ್ನೇರಿ ಸ್ವಾಮೀಜಿ ಬಹಿರಂಗ ಪಡಿಸಬೇಕು. ಇಲ್ಲ ಅಂದ್ರೆ ‘ಸಮಾನತೆಗಾಗಿ ನಾವು’ ವೇದಿಕೆಗೆ ಕ್ಷಮಾಪಣೆ ಕೇಳಬೇಕು” ಎಂದು ಒತ್ತಾಯಿಸಿದರು.
“ತಕ್ಷಣ ಗದಗ ಜಿಲ್ಲಾಡಳಿತ ಗದಗ ಪೋಲಿಸ್ ವರಿಷ್ಠಾಧಿಕಾರಿಗಳು ಹೆಚ್ಚೆತ್ತುಕೊಂಡು ಕೋಮು ಸೌಹಾರ್ದತೆಯನ್ನು ಹಾಳು ಮಾಡಿ ದ್ವೇಷ ಭಾಷಣ ಮಾಡಿದ ಕನ್ನೇರಿ ಸ್ವಾಮೀಜಿಯ ಮೇಲೆ ಸ್ವಯಂ ಪ್ರೇರಿತ ಸುಮೋಟೊ ಪ್ರಕರಣವನ್ನು ದಾಖಲಿಸಿ ಇಂತ ಕೋಮುವಾದಿಗಳಿಗೆ ತಕ್ಕ ಕಾನೂನಿನ ಶಿಕ್ಷೆಗೆ ಒಳಪಡಿಸಬೇಕೆಂದು ಗದಗ ದಲಿತ ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸುತ್ತೆವೆ” ಎಂದು ಹೇಳಿದರು.





