ಎಸ್ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯ ಹಿಂದೆ ರಾಜಕೀಯ ಶಡ್ಯಂತ್ರ ಅಡಗಿದ್ದು, ಇದು ದೇಶದ ನಾಗರಿಕರ ಮತದಾನದ ಹಕ್ಕಿಗೆ ಧಕ್ಕೆ ಉಂಟುಮಾಡುವ ಪ್ರಯತ್ನವಾಗಿದೆ ಎಂದು ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಯ ಅಧ್ಯಕ್ಷ ಚಾರ್ಲ್ಸ್ ಅಂಬ್ಲರ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನಬದ್ಧವಾಗಿ ದೊರೆತಿರುವ ಮತದಾನದ ಹಕ್ಕನ್ನು ಎಸ್ಐಆರ್ ಹೆಸರಿನಲ್ಲಿ ವ್ಯವಸ್ಥಿತವಾಗಿ ದಿಕ್ಕುತಪ್ಪಿಸಿ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ಅನ್ಯಾಯವಾಗುತ್ತಿರುವುದಾಗಿ ಆರೋಪಿಸಿದ ಅವರು, ಎಸ್ಐಆರ್ ರಾಜಕೀಯ ಪ್ರೇರಿತ ಕಾರ್ಯಾಚರಣೆಯಾಗಿದ್ದು, ಅದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎಸ್ಐಆರ್ ಮೂಲಕ ಅಲ್ಪಸಂಖ್ಯಾತರ ಮತದಾನದ ಹಕ್ಕು ಕಸಿಯುವ ಪ್ರಯತ್ನ ನಡೆದಿರುವುದನ್ನು ಸಾಮಾಜಿಕ ಜಾಲತಾಣಗಳು ಹಾಗೂ ಸುದ್ದಿ ಮಾಧ್ಯಮಗಳ ವರದಿಗಳ ಮೂಲಕ ಗಮನಿಸಿರುವುದಾಗಿ ಅವರು ಹೇಳಿದರು.
ಸಂವಿಧಾನದ ಆಶಯಗಳನ್ನು ಕಡೆಗಣಿಸಿ ಚುನಾವಣಾ ಆಯೋಗ ಕಾರ್ಯನಿರ್ವಹಿಸಬಾರದು. “ನಮ್ಮ ಮತ–ನಮ್ಮ ಹಕ್ಕು” ಎಂಬ ತತ್ವದಡಿ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ರಕ್ಷಿಸಬೇಕಾಗಿದ್ದು, ಅದಕ್ಕಾಗಿ ಪ್ರತಿಭಟನೆ ಹಾಗೂ ಪ್ರಜಾಸತ್ತಾತ್ಮಕ ಪ್ರತಿರೋಧ ಅನಿವಾರ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಎಸ್ಐಆರ್ ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ಮತದಾರರ ಹಕ್ಕುಗಳ ರಕ್ಷಣೆಗೆ ಹೋರಾಟ ಮುಂದುವರಿಸುವುದಾಗಿ ಚಾರ್ಲ್ಸ್ ಅಂಬ್ಲರ್ ತಿಳಿಸಿದ್ದಾರೆ.





