ಗದಗ ಜಿಲ್ಲೆಯ ವಿವಿಧ ಕಟ್ಟಡಗಳು ವಿಭಿನ್ನ ವಿನ್ಯಾಸ ಹಾಗೂ ವೈಶಿಷ್ಟ್ಯದಿಂದ ಕೂಡಿದ್ದು, ಜಿಲ್ಲೆಯು ಮಾದರಿ ಜಿಲ್ಲೆಯಾಗಿ ರೂಪುಗೊಳ್ಳುತ್ತಿದೆ” ಎಂದು ಮುಖ್ಯಮಂತ್ರಿ ಶ್ಲಾಘಿಸಿದರು. ಜಿಲ್ಲೆಯ ಮುಕ್ತಿವನ ಯೋಜನೆಯನ್ನು ಸರ್ಕಾರದ ನೂರು ದಿನಗಳ ವರದಿಯಲ್ಲಿ ಸೇರಿಸಲಾಗುವುದು ಎಂದರು.
ಗದಗ ಪಟ್ಟಣದಲ್ಲಿ ಇಂದು ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಗದಗ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಯುವಕರಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ, ನಶಾಮುಕ್ತ ದೇಶ ನಿರ್ಮಾಣಕ್ಕೆ ಯುವಕರನ್ನು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ₹10 ಲಕ್ಷ ಅನುದಾನ ನೀಡಲಾಗುವುದು. ಅನುದಾನವನ್ನು ಬಳಸಿಕೊಂಡು ಯುವಕರಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಜತೆಗೆ ನಾಯಕತ್ವ ಗುಣ ಬೆಳೆಸುವ ಕಾರ್ಯಕ್ರಮಗಳನ್ನು ರೂಪಿಸಲಾಗುವುದು” ಎಂದು ಹೇಳಿದರು.
‘ತೇಗದ ಸಿರಿ’ ಯೋಜನೆ ಜಾರಿ: “ರಾಜ್ಯ ಸರ್ಕಾರದಿಂದ ‘ತೇಗದ ಸಿರಿ’ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ರಸ್ತೆ ಬದಿಗಳಲ್ಲಿ ಹಾಗೂ ರೈತರ ಜಮೀನುಗಳಲ್ಲಿ ತೇಗದ ಮರಗಳನ್ನು ಬೆಳೆಸುವ ಮೂಲಕ ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚುವರಿ ಆದಾಯ ದೊರೆಯುವಂತೆ ಮಾಡುವ ಉದ್ದೇಶವನ್ನು ಯೋಜನೆ ಹೊಂದಿದೆ” ಎಂದು ಮುಖ್ಯಮಂತ್ರಿ ವಿವರಿಸಿದರು.
“ಸರ್ಕಾರಿ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ಸಾರ್ವಜನಿಕರಿಗೆ ಲಭ್ಯವಿರಬೇಕು. ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ. ಆದ್ದರಿಂದ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು” ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೂಚನೆ ನೀಡಿದರು.





