ತಮ್ಮ ಜೀವನದಲ್ಲಿ ವಿಶೇಷ ಸಾಧನೆ ಮಾಡಬೇಕೆನ್ನುವವರು, ವಿದ್ಯಾರ್ಥಿ ಜೀವನದ ಪ್ರಾರಂಭದ ಹಂತದಲ್ಲೇ ಉತ್ತಮ ಭವಿಷ್ಯತ್ತಿನ ಕನಸು ಕಾಣಬೇಕು. ಆ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಬೇಕು ಎಂದು ನಿವೃತ್ತ ಸೈನಿಕ ದತ್ತಾತ್ರೇಯ ವಿ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗದಗ ಪಟ್ಟಣದ ವಿದ್ಯಾದಾನ ಸಮಿತಿ ಬಾಲಕರ ಪದವಿ ಪೂರ್ವ ಕಾಲೇಜಿನ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ, ಪ್ರತಿಭಾ ಪುರಸ್ಕಾರ ಹಾಗೂ ಮತದಾರ ಜಾಗೃತಿ ಸಂಘದ(ಇಎಲ್‌ಸಿ) ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
“ನಿಮ್ಮ ಪಾಲಕರು ಹಾಗೂ ಉಪನ್ಯಾಸಕರ ಜೀವನ ನಿಮಗೆ ಪ್ರೇರಣೆಯಾಗಬೇಕು. ಆ ಮೂಲಕ ನಿಮ್ಮ ಸಾಮರ್ಥ್ಯವನ್ನು ಅರಿಯುವದರ ಮೂಲಕ ಜೀವನವನ್ನು ಕಟ್ಟಿಕೊಳ್ಳವಂಥ ಕೆಲಸ ನಿಮ್ಮದಾಗಬೇಕು. ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡರೆ ಮಾತ್ರ ಉತ್ತಮ ಜೀವನ ನಿರ್ಮಾಣವಾಗಲು ಸಾಧ್ಯ” ಎಂದರು.
ಅಧ್ಯಕ್ಷ ಸ್ಥಾನದಲ್ಲಿ ವಿದ್ಯಾದಾನ ಸಮಿತಿ ಅಧ್ಯಕ್ಷ ಶ್ರೀನಿವಾಸ ಹುಯಿಲಗೋಳ ಮಾತನಾಡಿ, “ಸಾಧನೆ ಎನ್ನುವುದು ಸಾಧಕನ ಸ್ವತ್ತೇ ವಿನಃ ಸೋಮಾರಿಯ ಸ್ವತ್ತಲ್ಲ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ಜತೆಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು” ಎಂದರು.
“ದತ್ತಾತ್ರೇಯ ಜೋಶಿಯವರಿಗೆ ಕಾಲೇಜಿನ ಪರವಾಗಿ ಪ್ರೀತಿ ಹಾಗೂ ಗೌರವದ ಪ್ರತೀಕವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕಾಲೇಜಿನ ಪ್ರಾಚಾರ್ಯ ಎಂ. ಸಿ. ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅತಿಥಿ ಗಣ್ಯರನ್ನು ಇಂಗ್ಲಿಷ್ ಉಪನ್ಯಾಸಕ ಹಾಗೂ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಕಿಶೋರಬಾಬು ಜೆ. ನಾಗರಕಟ್ಟಿ ಪರಿಚಯಿಸಿದರು.
ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ಸಂಘಕ್ಕೆ ಆಯ್ಕೆಯಾದ ಪ್ರತಿನಿಧಿಗಳಿಗೆ ಹಾಗೂ ಮತದಾರರ ಜಾಗೃತಿ ಸಂಘದ ಸದಸ್ಯರಿಗೆ ರಾಜ್ಯಶಾಸ್ತ್ರದ ಹಿರಿಯ ಉಪನ್ಯಾಸಕರಾದ ಎಸ್. ಐ. ಮೇಟಿ ಪ್ರಮಾಣ ವಚನ ಬೋಧನೆ ಮಾಡಿದರು.
ಈ ಸುದ್ದಿ ಓದಿದ್ದೀರಾ? ಜಮಖಂಡಿ | ಜು.19ರಂದು ಗೋಟೆಯಲ್ಲಿ ಬಸವ-ಭೀಮ ಸಂಗಮ ಸಹೋದರತ್ವ ಸಮಾವೇಶ
ಕಾರ್ಯಕ್ರಮದ ಆರಂಭದಲ್ಲಿ ಯಲ್ಲಮ್ಮಾ ಈರಗಾರ ಹಾಗೂ ಸಂಗಡಿಗರು ಪ್ರಾರ್ಥನೆ ಮಾಡಿದರು. ಸಮಾಜಶಾಸ್ತ್ರದ ಉಪನ್ಯಾಸಕ ಜೆ. ಡಿ. ಸಂಶಿ ವಂದಿಸಿದರು. ಸಿದ್ದಮ್ಮ ಪೀಚಿ ಹಾಗೂ ಶಂಕ್ರಮ್ಮ ಹೊಸಳ್ಳಿ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರಾದ ಟಿ. ಎಮ್. ನದಾಫ, ದೈಹಿಕ ಶಿಕ್ಷಣ ಉಪನ್ಯಾಸಕ ಎಸ್. ಪಿ. ಪಮ್ಮಾರ, ಕಚೇರಿ ಸಿಬ್ಬಂದಿಯವರಾದ ವಿನಾಯಕ ಹಂಚಾಟೆ, ಶರಣಪ್ಪ ಸೋನಕೊಪ್ಪ, ಉಪನ್ಯಾಸಕರಾದ ಪಿ. ಜೆ. ಕಟ್ಟಿಮನಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯ ಮೇಲೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ ತಿಮ್ಮನಟ್ಟಿ, ಮಹಿಳಾ ಪ್ರಧಾನ ಕಾರ್ಯದರ್ಶಿ ಮಧು ಚಲವಾದಿ ಇದ್ದರು.





