ಪರಿಷ್ಕರಣೆ ಮಾಡಿರುವ ಕನಿಷ್ಟ ವೇತನ ಜಾರಿಗಾಗಿ ಹಾಗೂ ಖಾಯಂಗಾಗಿ ಮತ್ತು ಕೆಲಸದ ಭದ್ರತೆಗಾಗಿ ಒತ್ತಾಯಿಸಿ ಗದಗ ಪಟ್ಟಣದ ಜಿಲ್ಲಾಡಳಿತ ಎದುರು ಕರ್ನಾಟಕ ಸರ್ಕಾರಿ ಹಾಸ್ಟೆಲ್, ವಸತಿ ಶಾಲಾ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳು ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಸಂಘಟನೆಯ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಮಾತನಾಡಿ, “ಕಳೆದ 15-20 ವರ್ಷಗಳಿಂದ ಕಡಿಮೆ ಸಂಬಳಕ್ಕೆ ವಸತಿ ನಿಲಯ-ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಚತಾಗಾರರು, ಕಾವಲುಗಾರರು, ಡಿ ಗ್ರೂಪ್ ಅಟೆಂಡರ್, ಕಂಪ್ಯೂಟರ್ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್ಗಳು, ಹೊರಗುತ್ತಿ ಅತಿಥಿ ಶಿಕ್ಷಕರು ಯಾವುದೇ ಭದ್ರತೆ ಇಲ್ಲದೆ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುತ್ತಾರೆ. ಗುತ್ತಿಗೆದಾರರು, ವಾರ್ಡನ್ರವರು, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹೊರಗುತ್ತಿಗೆ ಸಿಬ್ಬಂದಿಗಳನ್ನು ಶೋಷಣೆ ಮಾಡುತ್ತಿರುತ್ತಾರೆ” ಎಂದು ಆರೋಪಿಸಿದರು.
“ಮನಸ್ಸಿಗೆ ಬಂದ ಹಾಗೆ ಕೆಲಸದಿಂದ ತೆಗೆದುಹಾಕುವುದು ಮತ್ತು ಕಿರುಕುಳ ಕೊಡುವುದು ನಿರಂತರವಾಗಿ ನಡೆಯುತ್ತಿದೆ. ಹಾಗಾಗಿ ಪರಿಷ್ಕರಣೆ ಮಾಡಿರುವ ಕನಿಷ್ಟ ವೇತನ ಜಾರಿಗಾಗಿ ಹಾಗೂ ಖಾಯಂಗಾಗಿ ಮತ್ತು ಕೆಲಸದ ಭದ್ರತೆಕೊಡಬೇಕು” ಎಂದು ಒತ್ತಾಯಿಸಿದರು.
ರಾಜ್ಯ ಜಂಟಿ ಕಾರ್ಯದರ್ಶಿಯಾದ ಹುಲುಗಪ್ಪ ಚಲವಾದಿ ಮಾತನಾಡಿ, “2026 ಮೇ 22ರಂದು ರಂದು ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಪರಿಷ್ಕರಣೆ ಕರಡು ಅಂತಿಮ ಅಧಿಸೂಚನೆ ಹೊರಡಿಸಿರುವ ಕನಿಷ್ಠ ವೇತನವನ್ನು ವಿಳಂಬ ಮಾಡದೆ ತಕ್ಷಣ ಜಾರಿ ಮಾಡಬೇಕು. ತಿಂಗಳಿಗೆ ಕನಿಷ್ಠ ವೇತನ ಮಾಸಿಕ ರೂ.36 ಸಾವಿರ ಕೊಡಬೇಕು. ಎಲ್ಲಾ ಹಾಸ್ಟೆಲ್ ಮತ್ತು ವಸತಿ ನಿಲಯ ಹೊರಗುತ್ತಿಗೆ ಸಿಬ್ಬಂದಿಗಳಿಗೆ ನಿವೃತ್ತಿವರೆಗೆ ಸೇವಾ ಭದ್ರತೆ ಮತ್ತು ಕೆಲಸ ಮಾಡುವ ಸ್ಥಳಗಳಲ್ಲೇ ಖಾಯಂ ನೇಮಕ ಮಾಡಬೇಕು” ಎಂದು ಒತ್ತಾಯಿಸಿದರು.
“ಕಾರ್ಮಿಕ ಕಾನೂನು ಪ್ರಕಾರ ಕಡ್ಡಾಯವಾಗಿ ವಾರಕ್ಕೆ ಒಂದು ರಜೆ ಕೊಡಬೇಕು. ಕೆಲಸದ ಸಮಯ ನಿಗಧಿ ಆಗಬೇಕು. ಅಪಘಾತವಾದಾಗ ಇಲಾಖೆಯೆ ಚಿಕಿತ್ಸೆ ಹಾಗೂ ಪರಿಹಾರ ಕೊಡಬೇಕು. ಪ್ರತಿ ತಿಂಗಳು 5ನೇ ತಾರೀಖು ಸಂಬಳ ಕೊಡಬೇಕು. ಬಾಕಿ ಇರುವ ಸಂಬಳವನ್ನು ತಕ್ಷಣ ಪಾವತಿ ಮಾಡಬೇಕು” ಎಂದು ಒತ್ತಾಯಿಸಿದರು.
“ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಚತಾಗಾರರಿಂದ ಶೌಚಾಲಯ ಸ್ವಚ್ಛ ಮಾಡಿಸಬಾರದು. ವಸತಿ ನಿಲಯ ಮತ್ತು ಹಾಸ್ಟೆಲ್ಗಳಿಗೆ ವಾರ್ಡನ್ ರವರು ಮಕ್ಕಳ ಅಡುಗೆಗೆ ಅಗತ್ಯವಾಗಿ ಬೇಕಾದ ಗುಣಮಟ್ಟದ ಅಹಾರ ಸಾಮಾಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ತಂದು ಕೊಡಬೇಕು. ನಿವೃತ್ತಿ ನಂತರ ಜೀವನ ನಿರ್ವಹಣೆಗೆ ರೂ10 ಲಕ್ಷ ಪರಿಹಾರ ಕೊಡಬೇಕು” ಎಂದು ಆಗ್ರಹಿಸಿದರು.
ಕೃಷಿ ಕೂಲಿಕಾರ ಸಂಘದ ಜಿಲ್ಲಾ ಮುಖಂಡರಾದ ಬಾಲು ರಾಠೋಡ ಮಾತನಾಡಿ, “ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು. ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಆರೋಗ್ಯ ಸಂಜೀವಿನಿ ಯೋಜನೆಯನ್ನು ತಕ್ಷಣ ಜಾರಿ ಮಾಡಬೇಕು. ಮಹಿಳಾ ಹೊರಗುತ್ತಿಗೆ ನೌಕರರಿಗೆ ಋತುಚಕ್ರದ ರಜೆಯನ್ನು ಕೊಡಬೇಕು. ಮಹಿಳಾ ಹೊರಗುತ್ತಿಗೆ ನೌಕರರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು” ಎಂದು ಒತ್ತಾಯಿಸಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಲಕ್ಷ್ಮೇಶ್ವರದಲ್ಲಿ ಹೊರಗುತ್ತಿಗೆ ಸಿಬ್ಬಂದಿಯನ್ನು ಯಾವುದೇ ನೋಟಿಸ ಇಲ್ಲದೆ ಕೆಲಸದಿಂದ ತಗೆದುಹಾಕಿದ್ದು, ಅವರನ್ನು ಕೆಲಸದಲ್ಲಿ ಮುಂದುವರೆಸಬೇಕು” ಎಂದು ಆಗ್ರಹಿಸಿದರು.
“ಪ್ರತಿಭಟನೆಯಲ್ಲಿ ಮಹಾಂತೇಶ ಶಿರಸೂರ, ರಾಮಚಂದ್ರ ಕಡೆಮನಿ, ಮಹ್ಮದಸಾಬ ಕರ್ನಾಚೆ ಬಸವರಾಜ ಪೂಜಾರಿ, ಮಹಾಂತೇಶ ಅಂಗಡಿ, ಮಂಜುನಾಥ ವಡ್ಡರ, ಹಣಮಂತ ವಡ್ಡರ, ರಾಘವೇಂದ್ರ ಆದೋನಿ, ದುರಗಮ್ಮ ವಡ್ಡರ, ಕಸ್ತೂರಿ ಅಂಜಗಿ, ಅರ್ಜುನ ತಳವಾರ, ಹನಮಕ್ಕ ಮಾದರ, ರೂಪಣ್ಣ ಜಾಟೋತರ ಮುಂತಾದವರು ಭಾಗವಹಿಸಿದ್ದರು.




