ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ ಬೆಳೆ ತಳಿಗಳನ್ನು ಬಳಸಿಕೊಳ್ಳುವ ಮೂಲಕ ರೈತರು ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಹೈದರಾಬಾದ್ನ ಅಂತರರಾಷ್ಟ್ರೀಯ ಅರೆ ಒಣ ಪ್ರದೇಶಗಳ ಬೆಳೆ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಜಾಬಾ ಜಗದೀಶ ಹೇಳಿದರು.
ಬಸವಕಲ್ಯಾಣದ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ, ನಾಡಹಬ್ಬ ಹಾಗೂ ಹುತಾತ್ಮ ದಿನಾಚರಣೆಯ ಐದನೇ ದಿನದ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಅವರು ‘ಶರಣ ವಿಜ್ಞಾನಿ’ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.
“ಇಕ್ರಿಸ್ಯಾಟ್ ಸಂಸ್ಥೆಯು ಭೂಮಿ, ಕೃಷಿ ಮತ್ತು ಆಹಾರ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಲಾಭರಹಿತ ಸಂಸ್ಥೆಯಾಗಿದೆ. ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಬೆಳೆಯುವ ಬೆಳೆಗಳ ಇಳುವರಿ ಮತ್ತು ಗುಣಮಟ್ಟ ಹೆಚ್ಚಿಸಲು ಸಂಶೋಧನೆ ನಡೆಸುತ್ತಿದೆ. ಮಣ್ಣಿನ ಆರೋಗ್ಯ ಸುಧಾರಣೆ, ಜಲಾನಯನ ಅಭಿವೃದ್ಧಿ ಹಾಗೂ ನೀರಿನ ಸಮರ್ಪಕ ಬಳಕೆಯ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ರೈತರು ಈ ತಂತ್ರಜ್ಞಾನಗಳ ಪ್ರಯೋಜನ ಪಡೆದುಕೊಳ್ಳಬೇಕು” ಎಂದು ಸಲಹೆ ನೀಡಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಬಸವರಾಜ ಬುಳ್ಳಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಬಸವತತ್ವದಲ್ಲಿ ಪ್ರಜಾಪ್ರಭುತ್ವದ ಆಶಯಗಳು ಅಡಕವಾಗಿವೆ. ಬಸವಾದಿ ಶರಣರು ಕೃಷಿ ಮತ್ತು ರೈತರ ಶ್ರಮಕ್ಕೆ ವಿಶೇಷ ಗೌರವ ನೀಡಿದ್ದರು. ರೈತರ ತನು, ಮನ ಹಾಗೂ ಭಾವನೆಗಳು ಶುದ್ಧವಾಗಿರುತ್ತವೆ ಎಂಬ ಆಶಯವನ್ನು ವಚನ ಸಾಹಿತ್ಯದಲ್ಲಿ ಕಾಣಬಹುದು. ಲಿಂಗಾಯತ ಧರ್ಮದಲ್ಲಿ ದೇಹವನ್ನೇ ದೇವಾಲಯವೆಂದು ಪರಿಗಣಿಸಲಾಗಿದೆ. ಪ್ರಸ್ತುತ ರೈತರು ಸಂಕಷ್ಟಗಳನ್ನು ಎದುರಿಸುತ್ತಿದ್ದು, ಅವರ ಅನುಕೂಲಕ್ಕಾಗಿ ಹೊಲಗಳಲ್ಲಿ ಕೃಷಿ ಕುಟೀರಗಳನ್ನು ನಿರ್ಮಿಸಿಕೊಡಲು ಸರ್ಕಾರ ಮುಂದಾಗಬೇಕು” ಎಂದು ಒತ್ತಾಯಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಡಾ.ಗಂಗಾಂಬಿಕಾ ಅಕ್ಕ ಮಾತನಾಡಿ, “ಕೃಷಿ ದೇಶದ ಜೀವನಾಡಿಯಾಗಿದ್ದು, ರೈತರು ದೇಶದ ಬೆನ್ನೆಲುಬಾಗಿದ್ದಾರೆ. ವಚನ ಸಾಹಿತ್ಯದಲ್ಲಿ ಕಾಯಕ, ದಾಸೋಹ, ಸತ್ಯ, ಸಮಾನತೆ ಮತ್ತು ಪ್ರಾಮಾಣಿಕ ದುಡಿಮೆಗೆ ವಿಶೇಷ ಸ್ಥಾನವಿದೆ. ಈ ಮೌಲ್ಯಗಳು ರೈತರ ಬದುಕಿಗೆ ದಾರಿದೀಪವಾಗಿವೆ” ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಪೂಜ್ಯ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, “ಬಸವಣ್ಣನವರೇ ಗುರು, ವಚನ ಸಾಹಿತ್ಯವೇ ಧರ್ಮಗ್ರಂಥ ಹಾಗೂ ಇಷ್ಟಲಿಂಗವೇ ದೇವರು” ಎಂಬ ತತ್ವವನ್ನು ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಮಹೇಶ ಪಾಟೀಲ ಮಾತನಾಡಿ, “ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡರೆ ರೈತರು ಹೆಚ್ಚಿನ ಲಾಭ ಗಳಿಸಲು ಸಾಧ್ಯ. ಅನ್ನದಾತರ ಶ್ರಮದಿಂದಲೇ ಇಡೀ ಜಗತ್ತು ಬದುಕುತ್ತಿದೆ. ಮಹಿಳೆಯರು ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಿ, ಸದ್ಭಾವನೆ, ಸದ್ವಿಚಾರ ಹಾಗೂ ಉತ್ತಮ ಸಂಸ್ಕಾರಗಳನ್ನು ಬೆಳೆಸಬೇಕು” ಎಂದು ಹೇಳಿದರು.
ಮಿಲೆಟ್ ಮ್ಯಾನ್ ವೀರಶೆಟ್ಟಿ ಅವರು ತೊಗರಿ ತಳಿಗಳ ಕುರಿತು ಮಾಹಿತಿ ನೀಡಿದರು. ಪುನರ್ವೈಭವ ಸಂಸ್ಥೆಯ ಸಂಸ್ಥಾಪಕ ಆಕಾಶ ಮೊಳಕೆರಿ ಅವರು ಗೋವುಗಳ ಮಹತ್ವವನ್ನು ವಿವರಿಸಿದರು.
ಪ್ರಮುಖರಾದ ರೇವಣಪ್ಪ ರಾಯವಾಡೆ, ಕೆಎಂಎಫ್ ಮಾಜಿ ನಿರ್ದೇಶಕ ಡಾ.ಮಲ್ಲಿಕಾರ್ಜುನ ಬುಕ್ಕಾ, ಬೀದರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಜಶೇಖರ ಬಸನಾಯಕ, ನೀಲಗಂಗಾ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಡಾ. ಶಂಕರಗೌಡ ಪಾಟೀಲ, ಮಾಜಿ ಬಿಡಿಎ ಅಧ್ಯಕ್ಷ ರಾಜಕುಮಾರ ಬಿರಾದಾರ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡೆ, ತಾಲೂಕು ಅಧ್ಯಕ್ಷ ಸುಭಾಷ ರಗಟೆ, ಶಂಕರಗೌಡ ಪಾಟೀಲ, ಜಯಪ್ರಕಾಶ ಸದಾನಂದೆ, ವಿದ್ಯಾವತಿ ಶೇರಿಕಾರ, ರೇವಣಸಿದ್ಧ ಯರಬಾಗ, ಸುಜಾತಾ ತೊಗರಖೇಡೆ, ಮಲ್ಲಿಕಾರ್ಜುನ ಉಳ್ಳೆ, ವನಮಾಲಾ ಜೋಕಾರೆ ಹಾಗೂ ರಾಜೇಂದ್ರ ಜೊನ್ನಿಕೇರಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ ದಕ್ಷಿಣ | ಜಿಪಂ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿಗೆ ಅನ್ಯಾಯ: ಜನಪ್ರತಿನಿಧಿಗಳಿಗೆ ಎಚ್ಚರಿಕೆ
ರೇವಣಸಿದ್ಧೇಶ್ವರ ಭಜನಾ ಮಂಡಳಿಯಿಂದ ವಚನ ಭಜನೆ ನಡೆಯಿತು. ಹಿರಿಯ ರಂಗಕರ್ಮಿ ದೇವಿದಾಸ ಚಿಮಕೋಡ ಮತ್ತು ಸಂಗಡಿಗರು ಪ್ರಸ್ತುತಪಡಿಸಿದ ರೈತಗೀತೆಗಳು ಜನಮನ ಸೆಳೆದವು. ಬಸವ ಸೇವಾ ಸಮಿತಿಯಿಂದ ರೈತಗೀತೆಗಳು ಪ್ರಸ್ತುತಗೊಂಡವು. ಹಣಮಂತ ಧನಶೆಟ್ಟಿ ಸ್ವಾಗತಿಸಿದರು. ತ್ರಿವೇಣಿ ನಾಗರಾಳೆ ನಿರೂಪಿಸಿದರು.





