ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ಗ್ರಾಮಗಳ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರು ಮಲಪ್ರಭಾ ಜಲಾಶಯದಿಂದ ಮಲಪ್ರಭಾ ಬಲದಂಡೆ ಕಾಲುವೆಗೆ 750 ಕ್ಯೂಸೆಕ್ ನೀರನ್ನು ಸೆಪ್ಟೆಂಬರ್ 22ರಿಂದ 15 ದಿನಗಳವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ನೀರನ್ನು ಹರಿಸಲು ಸಭೆಯಲ್ಲಿ ನಿರ್ಣಯಿಸಿದ್ದಾರೆ.
“ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಬಲದಂಡೆ ಕಾಲುವೆಗೆ ಬಿಡಲಾದ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಬಳಸಿ, ಬೇರಾವುದೇ ಉದ್ದೇಶಕ್ಕೆ ಬಳಸಿಕೊಳ್ಳದಂತೆ ನಿಗಾ ವಹಿಸಬೇಕು. ಜೊತೆಗೆ ಮಲಪ್ರಭಾ ಬಲದಂಡೆ ಕಾಲುವೆಯ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ ದನಕರುಗಳನ್ನು ನದಿ/ಕಾಲುವೆಗೆ ಇಳಿಸುವುದಾಗಲೀ ಮಾಡದಂತೆ ಎಚ್ಚರ ವಹಿಸುವುದರ ಜೊತೆಗೆ ಈ ವೇಳೆ ರೈತ ಬಾಂಧವರು ನದಿದಂಡೆ ಕಾಲುವೆಗೆ ಅಳವಡಿಸಿರುವ ಪಂಪಸೆಟ್‍ಗಳಿಂದ ನೀರೆತ್ತುವುದನ್ನೂ ಕೂಡ ನಿಷೇಧಿಸಿದೆ” ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ತಿಳಿಸಿದ್ದಾರೆ.
“ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಬಲದಂಡೆ ಕಾಲುವೆಗೆ ಹರಿಬಿಡಲಾದ ನೀರನ್ನು ಯಾವುದೇ ಕಾರಣಕ್ಕೂ ಕೃಷಿಗೆ ಬಳಸಬಾರದು. ಕೇವಲ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಉಪಯೋಗಿಸಬೇಕು. ಹರಿಬಿಡಲಾದ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡುವ ಕುರಿತಂತೆ ಹಲವು ಇಲಾಖೆಗಳ ಅಧಿಕಾರಿಗಳ ತಂಡ ರಚನೆ ಮಾಡಿ ಅದರ ಸದುಪಯೋಗ ಕುರಿತು ಸೂಕ್ತ ನಿಗಾವಹಿಸಬೇಕು” ಎಂದು ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಾವೇರಿ ಪ್ರತಿಭಟನೆ | ಅಹಿತಕರ ಘಟನೆ ನಡೆದರೆ ಕಾನೂನು ಕ್ರಮ: ಸಚಿವ ಪರಮೇಶ್ವರ್ ಎಚ್ಚರಿಕೆ
“ದೈನಂದಿನ ವರದಿ ಸಲ್ಲಿಸುವುದು, ನೀರಿನ ಸದ್ಬಳಕೆ ಕುರಿತು ಸಾಕ್ಷಚಿತ್ರ ಪಡೆದು ಸಲ್ಲಿಸುವುದು ಸೇರಿದಂತೆ ನವಿಲುತೀರ್ಥ ಜಲಾಶಯದಿಂದ ಕಾಲುವೆಗಳಿಗೆ ಬಿಡುಗಡೆಗೊಳಿಸಲಾಗಿರುವ ನೀರು ಉದ್ದೇಶಿತ ಸ್ಥಳವನ್ನು ತಲುಪುವಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ನೀರಾವರಿ ಇಲಾಖಾ ಅಧಿಕಾರಿಗಳು ನೋಡಿಕೊಳ್ಳಬೇಕು ಹಾಗೂ ಬೇರಾವುದೇ ಕಾರಣಗಳಿಂದಾಗಿ ನೀರು ಪೋಲಾಗದಂತೆ ಕ್ರಮ ಜರುಗಿಸಬೇಕು. ಪ್ರಸ್ತಾಪಿತ ಸ್ಥಳದಲ್ಲಿ ನೀರು ಭರ್ತಿಯಾದಲ್ಲಿ ಅಥವಾ ನೀರು ಸಾಕೆನಿಸಿದಲ್ಲಿ ಕೂಡಲೇ ನೀರಿನ ಹರಿವನ್ನು ಸ್ಥಗಿತಗೊಳಿಸಲು ಕ್ರಮ ಜರುಗಿಸಬೇಕು. ಈ ಎಲ್ಲ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು” ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಸೂಚಿಸಿದ್ದಾರೆ.