ಜಿಲ್ಲೆಯ ವಿವಿಧೆಡೆ ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಜಮೀನಿನಲ್ಲಿ ಜಾನುವಾರುಗಳ ಮೇಯಿಸುತ್ತಿದ್ದ ತಮ್ಮನಿಗೆ ಸಿಡಿಲು ಬಡಿದು 19 ವರ್ಷದ ಯುವಕ ಸಾವನ್ನಪ್ಪಿರುವುದು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ಘಟನೆ ನಡೆದಿದೆ.
ಮೃತ ಯುವಕನನ್ನು ಪ್ರಶಾಂತ್ ಶರಣಪ್ಪ ಹುಡೇದ (19) ಎಂದು ಗುರುತಿಸಲಾಗಿದೆ. ಜಮೀನಿನಲ್ಲಿ ಜಾನುವಾರುಗಳ ಮೇಯಿಸಲು ಇಬ್ಬರು ಸಹೋದರರು ತೆರಳಿದ್ದರು. ಈ ವೇಳೆ ಏಕಾಏಕಿ ಗುಡುಗು-ಸಿಡಿಲು ಸಹಿತ ಮಳೆ ಆರಂಭವಾಗಿದೆ. ತಮ್ಮ ಪ್ರಶಾಂತ್ಗೆ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಅಣ್ಣನ ಕಣ್ಮುಂದೆಯೇ ತಮ್ಮ ಮೃತಪಟ್ಟ ದೃಶ್ಯ ಕಂಡು ಆತ ಬೆಚ್ಚಿಬಿದ್ದಿದ್ದು, ಬಳಿಕ ತಮ್ಮನ ಶವವನ್ನು ಹೊತ್ತುಕೊಂಡೇ ಊರಿಗೆ ಕರೆತಂದ ಘಟನೆ ಗ್ರಾಮಸ್ಥರ ಮನಕಲಕುವಂತಿತ್ತು.
ಘಟನೆ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಗಜೇಂದ್ರಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





