ಶಹಾಬಾದ್ ತಾಲೂಕಿನ ದೇವನ ತೆಗನೂರ ಗ್ರಾಮದಲ್ಲಿ ಯುವಕ ಮತ್ತು ಅಪ್ರಾಪ್ತ ಬಾಲಕಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಗ್ರಾಮದ ಶಿವಪ್ಪ ಸಾಬಣ್ಣ (23) ಹಾಗೂ 16 ವರ್ಷದ ಬಾಲಕಿ ಎಂದು ಗುರುತಿಸಲಾಗಿದೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದ ಕಾರಣ ಕುಟುಂಬದವರ ವಿರೋಧ ಎದುರಾಗುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಗುರುವಾರ ಬೆಳಗ್ಗೆ ಗ್ರಾಮದ ಹೊರವಲಯದ ರೈಲು ಹಳಿಯ ಮೇಲೆ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ವಾಡಿ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಾಥಮಿಕ ತನಿಖೆಯಲ್ಲಿ ಪ್ರೇಮ ಪ್ರಕರಣವೇ ಘಟನೆಗೆ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ರಸಗೊಬ್ಬರ ಕಾಳಸಂತೆ ವಿರುದ್ಧ ಕ್ರಮಕ್ಕೆ ಆಗ್ರಹ; ಜೂನ್ 8ರಂದು ಬೃಹತ್ ಪ್ರತಿಭಟನೆ ಕರೆ
ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ವೀರಭದ್ರಪ್ಪ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.





