ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ಗೂಳೂರು ಗ್ರಾಮ ಪಂಚಾಯಿತಿ 2023-2024ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ.
ತಾಲೂಕಿನ 25 ಗ್ರಾಮ ಪಂಚಾಯಿತಿ ಪೈಕಿ ಜನರ ಜೀವನ ಮಟ್ಟ ಸುಧಾರಿಸಲು ಸರ್ಕಾರದ ಅನುದಾನದ ಸಮರ್ಪಕ ಬಳಕೆ, ಗ್ರಾಮ ಪಂಚಾಯಿತಿ ಕಟ್ಟಡದ ಜೀರ್ಣೋದ್ದಾರ, ಪಂಚಾಯಿತಿ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳ ಅಭಿವೃದ್ಧಿ, ಡಿಜಿಟಲ್ ಗ್ರಂಥಾಲಯ, ಮಕ್ಕಳ ಗ್ರಾಮ ಸಭೆ, ಮಹಿಳಾ ಗ್ರಾಮ ಸಭೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಗೂಳೂರು ಗ್ರಾಮ ಪಂಚಾಯಿತಿ ಯಶಸ್ವಿಯಾಗಿ ಕಾರ್ಯಗತಗೊಳಿಸಿದೆ.
ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಸ್ವಚ್ಛತೆ, ನರೇಗಾ ಯೋಜನೆಯಡಿ ಪ್ರಗತಿ, ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯಗಳ ನಿರ್ಮಾಣ, ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳುವ ಮೂಲಕ ತಾಲ್ಲೂಕಿಗೆ ಮಾದರಿ ಗ್ರಾಮ ಪಂಚಾಯತಿ ಎನಿಸಿಕೊಂಡಿದೆ.

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಜನರಿಗೆ ತಲುಪಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಪ್ರಶಸ್ತಿ ಪ್ರೇರಣೆ ನೀಡಿದೆ ಎಂದು ಮಾಜಿ ತಾಲ್ಲೂಕು ಪಂಚಾಯತಿ ಅದ್ಯಕ್ಷ ಎಸ್. ಎಸ್.ರಮೇಶ್ ಬಾಬು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಗೂಳೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೃಷ್ಣಮೂರ್ತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮದ ಅಭಿವೃದ್ಧಿ ಕೆಲಸಗಳಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಳ್ಳುವ ಗ್ರಾಮ ಪಂಚಾಯತಿಗಳನ್ನು ಗುರ್ತಿಸಿ ಈ ಪುರಸ್ಕಾರ ನಿಡಲಾಗುತ್ತದೆ. ಬಳಿಕ ಇಂತಹ ಗ್ರಾಮ ಪಂಚಾಯಿತಿಗಳಿಗೆ 5 ಲಕ್ಷ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಸ್ವಚ್ಛತೆ, ಘನ ತ್ಯಾಜ್ಯ ನಿರ್ವಹಣೆ,. ಅಗತ್ಯವಿರುವ ಉಪಕರಣಗಳ ಪೂರೈಕೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಾಗಿ ಉತ್ತೇಜನ ನೀಡಲಾಗುತ್ತದೆ. ಗ್ರಾಮಪಂಚಾಯತಿ ವ್ಯಾಪ್ತಿಗೆ ಬರುವ ಹಳ್ಳಿಗಳ ಪ್ರತಿ ಮನೆ, ಅಂಗನವಾಡಿ, ಶಾಲೆಗಳಲ್ಲಿ ಶೌಚಾಲಯವಿರಬೇಕು. ಒಟ್ಟಿನಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 80% ಶೌಚಗೃಹ ನಿರ್ಮಾಣ, 60% ಕಟ್ಟುನಿಟ್ಟಾದ ಕಂದಾಯ ವಸೂಲಿ, ನರೇಗಾ ಯೋಜನೆಯಲ್ಲಿ ಗಮನಾರ್ಹ ಸಾಧನೆ, ಗ್ರಾಮ ಸಭೆ, ಮಕ್ಕಳ ವಿಶೇಷ ಗ್ರಾಮ ಸಭೆ, ಕಡತಗಳ ಸಮರ್ಪಕ ನಿರ್ವಹಣೆ, ಕುಡಿಯುವ ನೀರಿನ ಸೌಕರ್ಯ, ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕೆ ಪ್ರೋತ್ಸಾಹ, ವಸತಿ ಯೋಜನೆ ಅನುಷ್ಠಾನ ಮತ್ತಿತರ ಮಾನದಂಡಗಳ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಹಳ್ಳಿಗಳ ಉದ್ದಾರವೇ ದೇಶದ ಉದ್ದಾರವೆಂದು ಮಹಾತ್ಮ ಗಾಂಧೀಜಿಯವರ ಮಹತ್ವಕಾಂಕ್ಷೆಯ ಕನಸು. ಅದನ್ನು ಸಾಕಾರಗೊಳಿಸುವಲ್ಲಿ ಪ್ರಸ್ತುತ ಸಮಾಜದಲ್ಲಿ ಬಾಗೇಪಲ್ಲಿ ತಾಲೂಕಿನ ಗೂಳೂರು ಗ್ರಾಪಂ ಅಭಿವೃದ್ಧಿ ಪಥದಲ್ಲಿ ದಿಟ್ಟ ನಿಲುವು ಸಂಕಲ್ಪ ತಾಳಿ ಸಾಧನೆಗೈದು ಜನಪರ ಮೂಲಸೌಲಭ್ಯಗಳನ್ನು ಕಲ್ಪಿಸಿ ಪ್ರಗತಿಯಲ್ಲಿ ಸಾಗುತಿದೆ. ಆ ಹಿನ್ನೆಲೆಯಲ್ಲಿ ತಾಲೂಕಿನ ಗೂಳೂರು ಗ್ರಾ.ಮ ಪಂಚಾಯತಿಗೆ ಪ್ರಸಕ್ತ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಥಮ ಬಾರಿಗೆ ಲಭಿಸಿದ್ದು, ಗ್ರಾಮಸ್ಥರು, ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರಿಗೆ ಸಂತಸ ತಂದಿದೆ ಎಂದು ಗೂಳೂರು ಪಂಚಾಯತಿ ಅಧ್ಯಕ್ಷೆ ಅನುರಾಧ ರಮೇಶ್ ಬಾಬು ಅಭಿಪ್ರಾಯಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.