ಅಲೆಮಾರಿ ಸಮುದಾಯದ ವಸತಿ ವಂಚಿತ ಕುಟುಂಬಗಳಿಗೆ ನಿವೇಶನ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಅಲೆಮಾರಿಗಳು ಆಗ್ರಹಿಸಿದ್ದಾರೆ.
ಬೀದರ್ ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂಭಾಗದಲ್ಲಿ ವಿಶ್ವಕ್ರಾಂತಿ ದಿವ್ಯ ಪೀಠದ ಅಧ್ಯಕ್ಷ ಓಂಪ್ರಕಾಶ್ ರೊಟ್ಪೆ ನೇತೃತ್ವದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಿಸಿ ಅಲೆಮಾರಿಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಮುಂಭಾಗ ಕೆಲ ಹೊತ್ತು ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮುಖಾಂತರ ತೆರಳಿ ಜಿಲ್ಲಾಧಿಕಾರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಬೀದರ್ ತಹಸೀಲ್ದಾರ್ ದಿಲ್ಸಾದ್ ಮೆಹತ್ ಅವರಿಗೆ ಸಲ್ಲಿಸಿದರು.
‘ಕಳೆದ 25 ವರ್ಷಗಳಿಂದ ನೌಬಾದ್‌ನ ಚೌಳಿ ಕಮಾನ್ ಬಳಿ ಖಾಸಗಿ ನಿವೇಶನದಲ್ಲಿ ತಾತ್ಕಾಲಿಕ ಗುಡಿಸಲಿನಲ್ಲಿ ವಾಸಿಸುವ 50ಕ್ಕೂ ಅಧಿಕ ಅಲೆಮಾರಿ, ಅರೆ ಅಲೆಮಾರಿ ಕುಟುಂಬಗಳಿಗೆ ಕನಿಷ್ಠ ಮೂಲ ಸೌಕರ್ಯದಿಂದ ವಂಚಿತರಾಗಿದ್ದೇವೆ. ಬಿಸಿಲು, ಮಳೆ, ಚಳಿ ಎನ್ನದೇ ಮಕ್ಕಳು, ವೃದ್ಧರು, ಗರ್ಭಿಣಿಯರು ನರಕಯಾತನೆ ಬದುಕು ಸಾಗಿಸುತ್ತಿದ್ದೇವೆ. ಆದರೆ, ಅಲೆಮಾರಿಗಳಿಗೆ ಸೂರು, ಮೂಲಭೂತ ಸೌಕರ್ಯ ಒದಗಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ’ ಎಂದು ಅಲೆಮಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

‘2017 ರಲ್ಲಿ ಎರಡು ಎಕರೆ ನಿವೇಶನವನ್ನು ನಗರಸಭೆಯಿಂದ ಮಂಜೂರಿಗಾಗಿ ಠರಾವು ಪಾಸು ಮಾಡಲಾಗಿತ್ತು. ಆದರೆ, ಆ ನಿವೇಶನ ಅಲೆಮಾರಿಗಳಿಗೆ ಹಸ್ತಾಂತರ ಮಾಡದೇ ಅನ್ಯ ಯೋಜನೆಗೆ ಬಳಸಿ ಮತ್ತೆ ನಮ್ಮನ್ನು ಕೊಡ್ತೀವಿ ಎನ್ನುತ್ತಾ ಭರವಸೆಯಲ್ಲೇ ಅಲೆದಾಡುವಂತೆ ಮಾಡುತ್ತಿದ್ದಾರೆ. ಇದರಿಂದ ಇಡೀ ಬದುಕು ಬೀದಿಯಲ್ಲಿ ಕಳೆಯುಂತಾಗಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳು ಎಚ್ಚೆತ್ತುಕೊಂಡು ಸಂಬಂಧಿಸಿದ ಇಲಾಖೆಗಳಿಂದ ಅಲೆಮಾರಿ ಸಮುದಾಯದ ಕುರಿತಾದ ಸಂಪೂರ್ಣ ಮಾಹಿತಿ ಪಡೆದು ಶೀಘ್ರದಲ್ಲೇ ಅಲೆಮಾರಿ, ಅರೆಅಲೆಮಾರಿ ಜನಾಂಗಕ್ಕೆ 3 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಇಲ್ಲದಿದ್ದರೆ ಇಡೀ ಜಿಲ್ಲೆಯ ಅಲೆಮಾರಿ ಜನಾಂಗದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಎಡಿಜಿಪಿ ಎಂ.ಚಂದ್ರಶೇಖರ್ ಅಮಾನತಿಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ
ಈ ಸಂದರ್ಭದಲ್ಲಿ ವಿಶ್ವಕ್ರಾಂತಿ ದಿವ್ಯ ಪೀಠದ ಅಧ್ಯಕ್ಷ ಓಂಪ್ರಕಾಶ್ ರೊಟ್ಟೆ, ರಿಶೈನ್ ಸಂಸ್ಥೆಯ ರೋಹನ್ ಕುಮಾರ್ ಸೇರಿದಂತೆ ಅಲೆಮಾರಿ ಸಮುದಾಯದವರು ಇದ್ದರು.