ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಚಳಕಾಪುರ ಗ್ರಾಮದಲ್ಲಿ ಎರಡು ಸಮುದಾಯದವರ ನಡುವೆ ನಡೆದಿರುವ ಗುಂಪು ಘರ್ಷಣೆಯಿಂದ ತೀವ್ರ ಆಘಾತವಾಗಿದ್ದು, ಶಾಂತಿ ಮರು ಸ್ಥಾಪನೆಗೆ ಎಲ್ಲರೂ ಸಹಕರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮನವಿ ಮಾಡಿದ್ದಾರೆ.
‘ಹಿಂದೂ, ಮುಸ್ಲಿಂ, ಸಿಖ್, ಕ್ರೈಸ್ತರೆಲ್ಲರೂ ಸಹೋದರರಂತೆ ಬಾಳುತ್ತಿರುವ ಬೀದರ್ ಜಿಲ್ಲೆ ಸರ್ವ ಜನಾಂಗದ ಶಾಂತಿಯ ತೋಟವೆಂದು ಹೆಸರಾಗಿದೆ. ಜಾತಿಯತೆಯ ನಿರ್ಮೂಲನೆಗೆ ಶ್ರಮಿಸಿದ ಬಸವಾದಿ ಶರಣರ ನಾಡಿನಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಅಪಾರ ಗೌರವ ನೀಡಲಾಗುತ್ತದೆ. ಇಂತಹ ಭಾವೈಕ್ಯತೆಯ ನೆಲದಲ್ಲಿ ನಡೆಯುವ ಸಣ್ಣ ಘಟನೆಗಳು ಜಿಲ್ಲೆಯ ಖ್ಯಾತಿಗೆ ಕಳಂಕ ತರುತ್ತವೆ’ ಎಂದು ಬುಧವಾರ ತಿಳಿಸಿದ್ದಾರೆ.
‘ಚಳಕಾಪುರದಲ್ಲಿ ಆಗಿರುವ ಕಹಿ ಘಟನೆ ಮರೆತು ಎಲ್ಲರೂ ಶಾಂತಿ ಮರು ಸ್ಥಾಪನೆಗೆ ಪ್ರಯತ್ನಶೀಲರಾಗಬೇಕು. ಗ್ರಾಮದಲ್ಲಿ ನಡೆದಿರುವ ಘಟನೆ ಅತ್ಯಂತ ನೋವಿನ ಸಂಗತಿ. ಸಮಾಜದ ಸ್ವಾಸ್ಥ್ಯ ಕದಡದಂತೆ, ಶಾಂತಿಗೆ ಭಂಗ ಬಾರದಂತೆ ಪ್ರಜ್ಞಾವಂತರಾದ ಬೀದರ್ ಜಿಲ್ಲೆಯ ಜನತೆ ಸಹಕರಿಸಬೇಕು’ ಎಂದು ಕೋರಿದ್ದಾರೆ.
‘ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಘಟನಾ ಸ್ಥಳಕ್ಕೆ ಧಾವಿಸಿ, ಶಾಂತಿ ಸಭೆ ನಡೆಸಿ, ಶಾಂತಿ ಮರುಸ್ಥಾಪಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಚಳಕಾಪುರದ ಹನುಮಾನ ಜಾತ್ರೆ ಸಂದರ್ಭದಲ್ಲಿ ನ.3ರಂದು ಪರಿಶಿಷ್ಟ ಜಾತಿ ಹಾಗೂ ಸವರ್ಣಿಯರ ಮಧ್ಯೆ ಗುಂಪು ಘರ್ಷಣೆ ನಡೆದಿದ್ದು, ಎರಡೂ ಕಡೆಯವರ ವಿರುದ್ಧ ಖಟಕ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.