ಬಾಲಕನಿಗೆ ಆಟೊ ನೀಡಿ, ಒಬ್ಬರ ಸಾವಿಗೆ ಕಾರಣನಾಗಿದ್ದ ಪ್ರಕರಣದಲ್ಲಿ ಆಟೋ ಮಾಲೀಕನಿಗೆ 1.41 ಕೋಟಿ ರೂ. ದಂಡ ವಿಧಿಸಿ ಕೊಪ್ಪಳ ಜಿಲ್ಲೆಯ ಗಂಗಾವತಿ ನ್ಯಾಯಾಲಯ ಆದೇಶಿಸಿದೆ.
2021ರ ಮಾರ್ಚ್ 10ರಂದು ಯಲಬುರ್ಗಾದಲ್ಲಿ 17 ವರ್ಷದ ಬಾಲಕ ಆಟೋ ಚಾಲನೆ ಮಾಡುವಾಗ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಪ್ರಾಧ್ಯಾಪಕ ರಾಜಶೇಖರ್ ಪಾಟೀಲ್ ಎಂಬವರು ಮೃತಪಟ್ಟಿದ್ದರು. ಘಟನೆಗೆ ಬಾಲಕ ನಿರ್ಲಕ್ಷ್ಯತನದಿಂದ ಆಟೋ ಚಲಾಯಿಸಿದ್ದೇ ಕಾರಣ ಎಂದು ಆರೋಪಿಸಲಾಗಿತ್ತು. ಬಾಲಕ ಮತ್ತು ಬಾಲಕನಿಗೆ ಆಟೋ ಕೊಟ್ಟಿದ್ದ ಆಟೋ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣದ ವಿಚಾರಣೆಯನ್ನು ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಎಸ್ ಗಾಣಿಗೇರ ಅವರು ನಡೆಸಿದ್ದಾರೆ. ಬಾಲಕನಿಗೆ ಆಟೋ ಚಲಾಯಿಸಲು ಕೊಟ್ಟಿದ್ದ ಮಾಲೀಕನಿಗೆ ಭಾರೀ ಮೊತ್ತದ ದಂಡ ವಿಧಿಸಿದ್ದಾರೆ.
ದಂಡದ ಮೊತ್ತವನ್ನು ಮೃತ ಪ್ರಾಧ್ಯಾಪಕನ ಕುಟುಂಬಕ್ಕೆ ಪರಿಹಾರವಾಗಿ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.