ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದ ಬಳಿ ನಡೆದಿದ್ದ ಇಬ್ಬರು ಮಹಿಳೆಯರ (ಇಸ್ರೇಲ್ ದೇಶದ ಒಬ್ಬರು, ಸ್ಥಳೀಯ ಒಬ್ಬರು) ಅತ್ಯಾಚಾರ ಹಾಗೂ ಒಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್. ಎಲ್ ಅರಸಿದ್ಧಿ ತಿಳಿಸಿದ್ದಾರೆ.
ಶನಿವಾರ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಸಾಯಿನಗರದ ಗೌಂಡಿ ಕೆಲಸ ಮಾಡುವ ಮಲ್ಲೇಶ್ ಅಲಿಯಾಸ್ ಹಂದಿ ಮಲ್ಲೇಶ(22) ಹಾಗೂ ಮಿಷನ್ ಕೆಲಸ ಮಾಡುವ ಚೇತನ ಸಾಯಿ (21) ಎಂಬ ಇಬ್ಬರು ಯುವಕರನ್ನು ಬಂಧಿಸಲಾಗಿದೆ ಎಂದರು.
ಇನ್ನೊಬ್ಬ ಯುವಕ ತಲೆಮರೆಸಿಕೊಂಡಿದ್ದು, ಆತನ ಸುಳಿವು ಸಿಕ್ಕಿದೆ. ಶೀಘ್ರದಲ್ಲಿ ಬಂಧಿಸಲಾಗುವುದು. ಆರೋಪಿಗಳ ಪತ್ತೆಗೆ ಐಜಿ ಲೋಕೇಶ ಅವರ ಸೂಚನೆ ಮೇರೆಗೆ ಗಂಗಾವತಿ ಡಿವೈಎಸ್ಪಿ ನೇತೃತ್ವದಲ್ಲಿ ಒಟ್ಟು ಆರು ತಂಡಗಳನ್ನು ರಚಿಸಲಾಗಿತ್ತು ಎಂದು ಎಸ್‌ಪಿ ರಾಮ್. ಎಲ್ ಅರಸಿದ್ಧಿ ಮಾಹಿತಿ ನೀಡಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಣಾಪುರದ ಬಳಿ ನಡೆದಿದ್ದ ಇಬ್ಬರು ಮಹಿಳೆಯರ ಅತ್ಯಾಚಾರ, ಒಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿರುವುದಾಗಿ ಎಸ್ಪಿ ರಾಮ್. ಎಲ್ ಅರಸಿದ್ಧಿ ತಿಳಿಸಿದ್ದಾರೆ. ಗಂಗಾವತಿ ಸಾಯಿನಗರದ ಮಲ್ಲೇಶ ಅಲಿಯಾಸ್ ಹಂದಿ ಮಲ್ಲೇಶ (22) ಹಾಗೂ ಚೇತನಸಾಯಿ (21) ಬಂಧಿತ ಆರೋಪಿಗಳು pic.twitter.com/Vu7ucmdASg
— eedina.com ಈ ದಿನ.ಕಾಮ್ (@eedinanews) March 8, 2025
ಆರೋಪಿಗಳು ಸಮೀಪದ ಬಾರ್ ಒಂದರಲ್ಲಿ ಮದ್ಯ ಸೇವಿಸಿದ್ದಾರೆ. ಬಳಿಕ ಸುತ್ತಾಡುವ ಉದ್ದೇಶದಿಂದ ಬೈಕ್ನಲ್ಲಿ ತೆರಳಿದ್ದು, ಈ ಸಂದರ್ಭದಲ್ಲಿ ಇಬ್ಬರು ವಿದೇಶಿಗರು, ಇಬ್ಬರು ಹೊರ ರಾಜ್ಯದ ಪ್ರವಾಸಿಗರು ಸೇರಿದಂತೆ ಸ್ಥಳೀಯ ಒಬ್ಬ ಮಹಿಳೆಯರನ್ನೊಳಗೊಂಡ ತಂಡ ಸಿಕ್ಕಿದೆ. ನಂತರ ಅವರಿಗೆ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ಕೊಲೆ ಮಾಡುವ, ಸುಲಿಗೆ ಮಾಡುವ ಉದ್ದೇಶ ಈ ಆರೋಪಿಗಳಿಗೆ ಇರಲಿಲ್ಲ. ಹಣಕ್ಕೆ ಡಿಮ್ಯಾಂಡ್ ಇಟ್ಟ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ವಿಚಾರಣೆಯ ವೇಳೆ ಇಸ್ರೇಲ್ ಹಾಗೂ ಸ್ಥಳೀಯ ಯುವತಿ ಸೇರಿ ಇಬ್ಬರ ಮೇಲೂ ಅತ್ಯಾಚಾರ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಎಸ್ಪಿ ತಿಳಿಸಿದ್ದಾರೆ.
ಆರೋಪಿಗಳು ಇದಕ್ಕೂ ಮುನ್ನ ಯಾವುದಾದರೂ ಪ್ರಕರಣದಲ್ಲಿ ಭಾಗಿಯಾಗಿದ್ದರೆ? ಎಂಬುವುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಎಸ್‌ಪಿ ರಾಮ್ ಅರಸಿದ್ಧಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯ ವೇಳೆ ಹೆಚ್ಚುವರಿ ಎಸ್ಪಿ ಹೇಮಂತಕುಮಾರ್, ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಸೇರಿದಂತೆ ಇತರರಿದ್ದರು.
