ಪೌರ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದೆ.
“ಗಂಗಾವತಿ ನಗರಸಭೆಯಲ್ಲಿ ದುಡಿಯುತ್ತ ಮೃತಪಟ್ಟ ಪೌರಕಾರ್ಮಿಕರು ಸುಮಾರು 15 ರಿಂದ 20 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ಅಸ್ತಮಾ, ಜಾಂಡೀಸ್‌ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗಿ ಮೃತಪಟ್ಟಿರುತ್ತಾರೆ. ಒಬ್ಬ ಕಾರ್ಮಿಕರು ಅಪಘಾತದಿಂದ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಿರುತ್ತಾರೆ. ಈ ಕಾರ್ಮಿಕರ ಕುಟುಂಬಗಳು ಅವರ ದುಡಿಮೆಯ ಮೇಲೆ ಅವಲಂಬಿತರಾಗಿದ್ದರು. ಅವರ ಅಗಲಿಕೆಯ ನಂತರ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರದಿಂದ ಯಾವುದೇ ಪರಿಹಾರವಾಗಲೀ, ಸೌಲಭ್ಯವಾಗಲಿ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಜೊತೆಗೆ ಆರ್ಥಿಕವಾಗಿ ತೀರ ಹಿಂದುಳಿದಿದ್ದಾರೆ. ತಮ್ಮ ನಗರಸಭೆಯಲ್ಲಿ ಯು.ಜಿ.ಡಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಈಗಾಗಲೇ ಸುಮಾರು ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಆ ಸಂದರ್ಭದಲ್ಲಿ ನಮ್ಮ ಸಂಘಟನೆಯ ಮೃತಪಟ್ಟ ಪೌರಕಾರ್ಮಿಕರ ಅವಲಂಬಿತರಿಗೆ ಮಾನವೀಯತೆ ದೃಷ್ಟಿಯಿಂದ ಕೆಲಸ ನೀಡುವಂತೆ ಹಲವಾರು ಬಾರಿ ಮೌಖಿಕವಾಗಿ, ಪತ್ರಗಳ ಮೂಲಕ ಮನವಿ ಮಾಡಲಾಗಿತ್ತು. ಆದರೆ ಮನವಿಗೆ ಸ್ಪಂದಿಸದಿರುವುದನ್ನು ಸಂಘಟನೆ ಬಲವಾಗಿ ಖಂಡಿಸುತ್ತದೆ. ಕೂಡಲೇ ಮೃತಪಟ್ಟ ಪೌರಕಾರ್ಮಿಕರ ಕುಟುಂದ ವರ್ಗದವರಿಗೆ ಮಾನವೀಯತೆ ದೃಷ್ಟಿಯಿಂದ ನಗರಸಭೆಯ ಯಾವುದಾದರೂ ವಿಭಾಗದಲ್ಲಿ ಕೆಲಸ ನೀಡಬೇಕೆಂದು” ಸಂಘಟನೆಯ ಮುಖ್ಯಸ್ಥರು ಒತ್ತಾಯಿಸಿದರು.
ನಗರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತಾ ಸಿಬ್ಬಂದಿಗಳಿಗೆ ಎರಡು ತಿಂಗಳು ಹಾಗೂ ವಾಹನ ಚಾಲಕರಿಗೆ ಕಳೆದ ನಾಲ್ಕೈದು ತಿಂಗಳಿನಿಂದ ಹಾಗೂ ಗಾರ್ಡನರ್ ಗಳಿಗೆ ಕಳೆದ 6 ತಿಂಗಳಿಂದ ವೇತನ ನೀಡಿರುವುದಿಲ್ಲ. ಹೊಸದಾಗಿ ನೇರ ನೇಮಕಾತಿ ಹೊಂದಿರುವ ಒಂಬತ್ತು ಜನ ಪೌರಕಾರ್ಮಿಕರಿಗೆ ಕಳೆದ 8 ತಿಂಗಳಿಂದ ವೇತನ ನೀಡಿರುವುದಿಲ್ಲ. 2021-22ನೇ ಸಾಲಿನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ತ್ಯಾಜ್ಯ ಸಾಗಿಸುವ ವಾಹನ ಚಾಲಕರು ಹಾಗೂ ಗಾರ್ಡನರ್ ಗಳಿಗೆ ಇಲ್ಲಿಯವರೆಗೂ ಪಿ.ಎಫ್ ಹಾಗೂ ಇ.ಎಸ್.ಐ ಸೌಲಭ್ಯಗಳನ್ನು ನೀಡಿರುವುದಿಲ್ಲ. ಹಾಗೂ ಕನಿಷ್ಟ ವೇತನ ಕಾಯ್ದೆಯಡಿ ವೇತನ ನೀಡಲು ಆಗ್ರಹಿಸಿದರು.
ಪೌರಕಾರ್ಮಿಕರ ಆರೋಗ್ಯ ತಪಾಸಣೆ ಹಾಗೂ ವೈದ್ಯಕೀಯ ವೆಚ್ಚವನ್ನು ಭರಿಸಲು ಎಸ್.ಎಫ್.ಸಿ ಮುಕ್ತನಿಧಿ, ನಗರ ಸ್ಥಳೀಯ ನಿಧಿಯ ಶೇ 24.10 ಎಸ್.ಸಿ.ಎಸ್.ಪಿ/ಟಿ.ಎಸ್.ಪಿ ಯೋಜನೆಯಡಿ ಸರ್ಕಾರ ಅವಕಾಶ ಕಲ್ಪಿಸಿರುತ್ತದೆ. ಆದರೆ ಗಂಗಾವತಿ ನಗರಸಭೆಯಲ್ಲಿ ದುಡಿಯುತ್ತಿರುವ ಯಾವುದೇ ಕಾರ್ಮಿಕರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿಲ್ಲ. ಅದೇರೀತಿ ಸ್ಥಳೀಯ ಸಂಸ್ಥೆ/ಮಹಾನಗರ ಪಾಲಿಕೆ ನೌಕರರಿಗೆ 21 ದಿನಗಳ ವಿಶೇಷ ರಜಾ ವೇತನ ನೀಡಲು ಸರ್ಕಾರ ಆದೇಶಿಸಿದ್ದು, ಆದರೆ ಸದರಿ 21 ದಿನಗಳ ವಿಶೇಷ ರಜಾ ವೇತನವನ್ನು ಇದುವರೆಗೂ ನೀಡಿರುವುದಿಲ್ಲ. ಮೊದಲು ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವತ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸರ್ಕಾರದ ಆದೇಶದಂತೆ ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುದಾನದಲ್ಲಿ ಶೇ 20 ರಷ್ಟನ್ನು ಮೀಸಲಿರಿಸಿ ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸ ಹಾಗೂ ವಿವಿಧ ಸೌಲಭ್ಯಕ್ಕೆ ಅನುಕೂಲ ಕಲ್ಪಿಸಿಕೊಡಬೇಕು. ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೆ ಮೂರು ತಿಂಗಳಿಗೊಮ್ಮೆ ಹೆಲ್ತ್ ಚೆಕಪ್ ಹಾಗೂ ಆರು ತಿಂಗಳಿಗೊಮ್ಮೆ ಮಾಸ್ಟರ್ ಹೆಲ್ತ್ ಚೆಕಪ್ ಮಾಡಿಸಬೇಕು, ಸರಿಯಾದ ಸಮಯಕ್ಕೆ ಸಮವಸ್ತ್ರ ನೀಡಬೇಕು, ಸಾಧನ ಸಲಕರಣೆಗಳನ್ನು ನೀಡಬೇಕು. ಖಾಯಂ ಪೌರಕಾರ್ಮಿಕರಿಗೆ ನೀಡುವಂತೆ ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಕರ್ಯ ಕಲ್ಪಿಸಬೇಕು.
ಈ ಸುದ್ದಿ ಓದಿದ್ದೀರಾ?: ಗಂಗಾವತಿ | ಶಾಲೆಯ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್‌ಗೆ ಬೆಂಕಿ; 150 ಮಕ್ಕಳು ಅಪಾಯದಿಂದ ಪಾರು
ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕೆಂದು ಈಗಾಗಲೇ ಎರಡು ಮನವಿ ಪತ್ರಗಳನ್ನು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಪೌರಕಾರ್ಮಿಕರ ಬೇಡಿಕೆಗಳನ್ನು ನಿರ್ಲಕ್ಷಿಸಲಾಗಿದ್ದು, ಕೂಡಲೇ ಮೇಲಿನ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇಲ್ಲವಾದಲ್ಲಿ ಎಲ್ಲಾ ನೇರಪಾವತಿ ಪೌರಕಾರ್ಮಿಕರು ಸೇರಿದಂತೆ ವಾಹನ ಚಾಲಕರು, ಲೋಡರ್ಸ್, ಗಾರ್ಡನರ್‌ಗಳು ಸೇರಿ ಅನಿರ್ದಾಷ್ಟಾವಧಿ ಧರಣಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
