ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಝೀರೋ ಟ್ರಾಫಿಕ್ ಮೂಲಕ ಬಳ್ಳಾರಿಯ ಜಿಂದಾಲ್ ಕಡೆಗೆ ಹೋಗುವಾಗ, ದಾರಿ ಮಧ್ಯೆಯಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಪ್ರಯಾಣಿಸುತ್ತಿದ್ದ ಕಾರು ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿದ ಘಟನೆ ನಡೆದಿದೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ರಾಯಚೂರು ಪ್ರವಾಸ ಮುಗಿಸಿ ಶನಿವಾರ ಸಂಜೆ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಸಿಎಂ ಸಿದ್ದರಾಮಯ್ಯ ಇದ್ದ ವಾಹನ ತೆರಳುತ್ತಿದ್ದಾಗ ಈ ಬೆಳವಣಿಗೆ ನಡೆದಿದೆ. ಗಂಗಾವತಿ ನಗರದ ಸಿಬಿಎಸ್ ವೃತ್ತದಲ್ಲಿ ಶನಿವಾರ ರಾತ್ರಿ ಗಾಲಿ ಜನಾರ್ದನ್ ರೆಡ್ಡಿ ಅವರು ಟ್ರಾಫಿಕ್ ಜಾಮ್ ಆಗಿದ್ದರಿಂದ ಡಿವೈಡರ್ ಹತ್ತಿಸಿ ವಿರುದ್ಧ ದಿಕ್ಕಿಗೆ ತೆರಳಿದ್ದಾರೆ. ಇದೇ ವೇಳೆ ಸಿಎಂ ಅವರ ಕಾರು ಬಂದಿದೆ.
ಸಿಎಂ ಸಿದ್ದರಾಮಯ್ಯ ರಾಯಚೂರು ಜಿಲ್ಲೆಗೆ ಎರಡು ದಿನದ ಪ್ರವಾಸದಲ್ಲಿರುವುದರಿಂದ ಝೀರೋ ಟ್ರಾಫಿಕ್ ಮಾಡಲಾಗಿದೆ. ಈ ನಡುವೆ ಸುಮಾರು 30 ನಿಮಿಷ ಟ್ರಾಫಿಕ್ ಜಾಮ್ ಆಗಿದ್ದರಿಂದ ರೆಡ್ಡಿ ಅವರ ಕಾರು ಚಾಲಕ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿದ್ದಾರೆ.
ವಡ್ಡರಹಟ್ಟಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಮುಗಿಸಿಕೊಂಡು ಶಾಸಕ ರೆಡ್ಡಿ ನಗರದತ್ತ ಪ್ರಯಾಣ ಮಾಡುತ್ತಿದ್ದರು. ಸಿಎಂ ಬರುತ್ತಿರುವ ಹಿನ್ನೆಲೆಯಲ್ಲಿ ಸಾಮಾನ್ಯ ನಾಗರಿಕರಂತೆಯೇ ಪೊಲೀಸರ ಸೂಚನೆ ಪಾಲಿಸಿದರು. ಆದರೆ ಕೆಲವು ನಿಮಿಷಗಳ ಕಾಲ ಕಾಯ್ದ ಅವರು, ಬಳಿಕ ತಮ್ಮ ವಾಹನವನ್ನು ರಸ್ತೆ ಡಿವೈಡರ್ ಹತ್ತಿಸಿ, ಕೊಂಡೊಯ್ದರು. ಈ ವೇಳೆ ಶಾಸಕ ರೆಡ್ಡಿ ಚಾಲಕನ ಪಕ್ಕದಲ್ಲಿನ ಸೀಟ್ನಲ್ಲಿ ಕುಳಿತಿದ್ದರು. ರೆಡ್ಡಿ ವಾಹನ ಸಂಚರಿಸುತ್ತಿದ್ದಂತೆಯೇ, ಎದುರಿನಿಂದ ಅದೇ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿದ್ದ ವಾಹನ ತೆರಳಿತು.
ರಾತ್ರಿ ವೇಳೆ ಸ್ವಲ್ಪ ವ್ಯತ್ಯಾಸವಾಗಿದ್ದರೆ ಭಾರೀ ಅನಾಹುತ ಸಂಭವಿಸಬಹುದಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನು ಓದಿದ್ದೀರಾ? ಸುಬ್ರಹ್ಮಣ್ಯ | ಇಂದಿನಿಂದ ಕುಮಾರ ಪರ್ವತಕ್ಕೆ ಚಾರಣ: ಆನ್‌ಲೈನ್ ನೋಂದಣಿ ಮಾಡಿದರಷ್ಟೇ ಅವಕಾಶ
ಝೀರೋ ಟ್ರಾಫಿಕ್ ಭದ್ರತೆಯ ವೇಳೆ ಶಾಸಕ ಜನಾರ್ದನ ರೆಡ್ಡಿ ನಿಯಮ ಮುರಿದಿದ್ದಾರೆ. ಅವರಿಗೊಂದು ನ್ಯಾಯ, ಜನ ಸಾಮಾನ್ಯರಿಗೂ ಒಂದು ನ್ಯಾಯನಾ ಎಂದು ಸಾರ್ವಜನಿಕರು ಪ್ರಶ್ನಿಸಿದರು.
