ಗಂಗಾವತಿ ನಗರದಲ್ಲಿರುವ ಹಲವು ದಶಕಗಳ ಇತಿಹಾಸ ಹೊಂದಿರುವ ನೆಹರೂ ಉದ್ಯಾನವನ ಪ್ರಸ್ತುತ ನಗರ ಸಭೆಯ ದಿವ್ಯ ನಿರ್ಲಕ್ಷದಿಂದಾಗಿ ಮದ್ಯ ವ್ಯಸನಿಗಳ ಗೂಡಾಗಿದೆ. ರಾತ್ರಿ ಸಮಯದಲ್ಲಿ ಅನೈತಿಕ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಆದರೆ ನಗರಸಭೆ ಮಾಡಬೇಕಿದ್ದ ಉದ್ಯಾನವನದ ಸ್ವಚ್ಛತೆ ಕೆಲಸವನ್ನು ಪರಿಸರವಾದಿಗಳು, ವಿವಿಧ ಸಂಘಟನೆಗಳು ಹಾಗೂ ಸಮಾನ ಮನಸ್ಕರು ಮಾಡಲು ಮುಂದಾದರು.
ಗಂಗಾವತಿಯ ಚಾರಣ ಬಳಗ, ರೋಟರಿ ಕ್ಲಬ್, ಕಟ್ಟಡ ನಿರ್ಮಾಣ ಸಂಘ, ಪರಿಸರ ಸೇವಾ ಟ್ರಸ್ಟ್ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರುಗಳು ಒಟ್ಟಾಗಿ ಸ್ವಚ್ಛತೆಗೆ ಅಗತ್ಯ ಇರುವ ಪರಿಕರಗಳನ್ನೂ ತಂದು ಉದ್ಯಾನವನದ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಿದರು.
ಡಾ. ಶಿವಕುಮಾರ್ ಮಾಲಿಪಾಟೀಲ್ ಮಾತನಾಡಿ, “ನಗರಕ್ಕೆ ಇರುವುದು ಒಂದೇ ಇದೊಂದೇ ಉದ್ಯಾನವನ. ನಗರಸಭೆಯ ನಿರ್ಲಕ್ಷ್ಯತೆ ಹಾಗೂ ಸಮರ್ಪಕವಾದ ನಿರ್ವಹಣೆಯ ಕೊರತೆಯಿಂದಾಗಿ ಉದ್ಯಾನವನ ಸಂಪೂರ್ಣ ಹದಗೆಟ್ಟಿದೆ” ಎಂದರು.
ಟಿ ಆಂಜನೇಯ ಮಾತನಾಡಿ, “ಒಂದು ಕಾಲದಲ್ಲಿ ಸದಾ ಹಚ್ಚ ಹಸಿರಿನಿಂದ ಕೂಡಿದ, ಕಾರಂಜಿಯಿಂದ ಕಂಗೊಳಿಸುತ್ತಿದ್ದ ಹಾಗೂ ಉದ್ಯಾನವನಕ್ಕೆ ಆಗಮಿಸುವ ಜನರಿಗೆ ಟಿವಿ ಸಹಿತ ವೀಕ್ಷಣೆಗೆ ಅವಕಾಶ ನೀಡುತ್ತಿದ್ದ ನೆಹರು ಉದ್ಯಾನವನ ಈಗ ಕಸದ ಕೊಂಪೆಯಾಗಿದೆ. ಆಳವಾದ ತಗ್ಗು ಗುಂಡಿಗಳಿಂದ ನೀರು ಸಂಗ್ರಹಗೊಂಡು ಸಾಂಕ್ರಾಮಿಕ ರೋಗಗಳ ಮೂಲ ಕೇಂದ್ರವಾಗಿದೆ. ಈ ಹಿನ್ನೆಲೆ ನಗರಸಭೆಯ ಪೌರಾಯುಕ್ತರು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರುಗಳು ಉದ್ಯಾನವನದ ಸ್ವಚ್ಛತೆಗೆ ಮುಂದಾಗಬೇಕು. ಬೆಳಗ್ಗೆ ಸೇರಿದಂತೆ ಸಂಜೆ ಸಮಯ ನಿಗದಿಪಡಿಸಿ ಅಚ್ಚುಕಟ್ಟಿನ ನಿರ್ವಹಣೆಗಾಗಿ ಸಿಬ್ಬಂದಿಯನ್ನು ನೇಮಿಸಬೇಕು. ಬೇಸಿಗೆ ಹಾಗೂ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಸೌಂದರ್ಯೀರಣಕ್ಕೆ ವಿಶೇಷ ಅನುದಾನ ಕಲ್ಪಿಸಬೇಕೆಂದು ಮನವಿ ಮಾಡಿದರು.
ಒಟ್ಟಾರೆ, ಸಮಾನ ಮನಸ್ಕರಿಂದ ನಡೆದ ಪರಿಸರ ಸ್ವಚ್ಛತಾ ಕಾರ್ಯಕ್ರಮ ವಿಶೇಷ ಗಮನ ಸೆಳೆಯುವುದರ ಜೊತೆಗೆ ಅಧಿಕಾರಿ ವರ್ಗಕ್ಕೆ ಬಿಸಿ ಮುಟ್ಟಿಸುವಂತಿತ್ತು.
ಇದನ್ನೂ ಓದಿ: ಗಂಗಾವತಿ | ನೆಹರೂ ಉದ್ಯಾನದ ಸ್ವಚ್ಛತೆ ಕುರಿತು ಶಾಸಕರ ಮಾತಿಗೂ ಕಿಮ್ಮತ್ತು ನೀಡದ ಪೌರಾಯುಕ್ತ: ಐಲಿ ನಾಗರಾಜ
ಈ ವೇಳೆ ಡಾ. ಶಿವಕುಮಾರ್ ಮಾಲಿ ಪಾಟೀಲ್, ಆಂಜನೇಯ, ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷ ರಫೀಕ್, ಮಂಜುನಾಥ್ ಗುಡ್ಲಾನೂರು, ಪಂಪಾಪತಿ ಇಂಗಳಗಿ, ಸೌಮ್ಯ ಸೇರಿದಂತೆ ಚಿಕ್ಕ ಮಕ್ಕಳು ಸಹ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.
