ಸಜ್ಜನಿಕೆಯ ರಾಜಕಾರಣ ಎಸ್.ಎಂ.ಕೃಷ್ಣ ಸಾವಿನೊಂದಿಗೆ ಕೊನೆಯಾಗಿದೆ. ಹಲವು ತೊಂದರೆ ತೊಡಕುಗಳನ್ನು ನಿವಾರಿಸಿಕೊಂಡು ದಿಟ್ಟತನದ ಆಡಳಿತ ನೀಡಿದ ಸಜ್ಜನ ರಾಜಕಾರಣಿಗಳಲ್ಲಿ ಇವರು ಅಗ್ರಗಣ್ಯರು. ಅಸ್ಖಲಿತ ಕನ್ನಡ, ಇಂಗ್ಲೀಷ್ ಭಾಷೆ, ನಗು ಮೊಗ, ಉತ್ತಮ ವಸ್ತ್ರಗಳನ್ನು ಧರಿಸುವುದು ಇವೆಲ್ಲವೂ ಅವರ ವ್ಯಕ್ತಿತ್ವದ ಭಾಗವಾಗಿದ್ದವು ಎಂದು ಸಾಹಿತಿ ಡಾ ಎಂ.ಬೈರೇಗೌಡ ನುಡಿದರು.

ಅವರು ರಾಮನಗರ ಜಿಲ್ಲಾ ಕಸಾಪ ಕಛೇರಿಯಲ್ಲಿ ಮಂಗಳವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ರಾಜ್ಯಪಾಲರುಗಳಾದ ಎಸ್.ಎಂ. ಕೃಷ್ಣ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಕರ್ನಾಟಕವನ್ನು ಮರೆತ ಮುಖ್ಯಮಂತ್ರಿ ಎಂಬ ಆರೋಪ ಮಾಡುವವರಿಗೆ ಅರ್ಥ ಆಗಬೇಕು. ಕರ್ನಾಟಕದ ಹಳ್ಳಿಗಾಡಿನ ಮಕ್ಕಳು ಐಟಿ ಬಿಟಿ ಹೆಸರಿನಲ್ಲಿ ಪ್ರಪಂಚ ಪರ್ಯಟನೆ ಮಾಡಲು ಎಸ್.ಎಂ.ಕೃಷ್ಣ ಅನುವು ಮಾಡಿಕೊಟ್ಟರು. ಬರಗಾಲ, ವರನಟ ರಾಜಕುಮಾರ್ ಅಪಹರಣ ಇತ್ಯಾದಿ ಸವಾಲುಗಳನ್ನು ಎದುರಿಸಿದ ರೀತಿ ಗಮನಾರ್ಹ ಎಂದರು.
ನಿವೃತ್ತ ಪ್ರಾಂಶುಪಾಲರ ಸಂಘದ ಅಧ್ಯಕ್ಷ ವನರಾಜ್ ಮಾತನಾಡಿ, ಬಿಸಿಯೂಟದ ಯೋಜನೆ, ಸ್ತ್ರೀಶಕ್ತಿ ಸಂಘದ ಸ್ಥಾಪನೆಯಂಥ ಹತ್ತು ಹಲವು ಸಾಧನೆಯ ಮೈಲಿಗಲ್ಲು ಅವರ ಹೆಸರಿನಲ್ಲಿ ಇವೆ ಎಂಬ ವಿಚಾರಗಳನ್ನು ನುಡಿದರು.
ಇದನ್ನು ಓದಿದ್ದೀರಾ? ಮಂಡ್ಯ | ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ; ಸ್ಪಷ್ಟ ನಿಲುವು ತಿಳಿಸದ ಸಚಿವ
ತಾಲ್ಲೂಕು ಕ.ಸಾ.ಪ ಅಧ್ಯಕ್ಷ ಬಿ.ಟಿ.ದಿನೇಶ್ ಬಿಳಗುಂಬ ಮಾತನಾಡಿ, ಎಸ್.ಎಂ.ಕೃಷ್ಣ ಅವರ ಜನ್ಮದಿನವನ್ನು ಐಟಿ ಬಿಟಿ ದಿನವನ್ನಾಗಿ ಆಚರಿಸಲು ಕರ್ನಾಟಕ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಟಿ. ನಾಗೇಶ್ ಸಮಗ್ರ ಅಭಿವೃದ್ಧಿಯ ಹರಿಕಾರ. ಇಡೀ ದೇಶವೇ ಮೆಚ್ಚುವ ರಾಜಕಾರಣಿ ಎಸ್.ಎಂ.ಕೃಷ್ಣ ಎಂದು ಶ್ಲಾಘಿಸಿದರು.
ಇದೆ ಸಂದರ್ಭದಲ್ಲಿ ನಮ್ಮನಗಲಿದ ನೀರಾವರಿ ತಜ್ಞ ವೆಂಕಟೇಗೌಡ, ನಾಡು ನುಡಿ ಹೋರಾಟಗಾರ ಲಿಂಗೇಗೌಡ, ವೃಕ್ಷ ಮಾತೆ ತುಳಸಿಗೌಡ ರವರುಗಳಿಗೂ ನುಡಿ ನಮನ ಸಲ್ಲಿಸಲಾಯಿತು.
ಇದನ್ನು ನೋಡಿದ್ದೀರಾ? ತುಮಕೂರು | ಹಾಸ್ಟೆಲ್ ಅವ್ಯವಸ್ಥೆ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿನಿಯರು!
ಹಿರಿಯ ಸಮಾಜ ಸೇವಕ ವೆಂಕಟೇಶ್, ಕನ್ನಡ ಸಮದ್, ತಾಲೂಕು ಕಸಾಪ ಸಂಚಾಲಕ ಬಿ.ಟಿ ರಾಜೇಂದ್ರ, ಚಕ್ರಬಾವಿ ಸುರೇಶ್, ಕವಿ ಕಿರಣ್ ರಾಜ್ ತುಂಬೇನಹಳ್ಳಿ, ತಾಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಕಿರಣ್, ಗೌರವ ಕೋಶಾಧ್ಯಕ್ಷ ನಂಜುಂಡಿ ಬಾನಂದೂರು ಮಾತನಾಡಿದರು.
ನಿವೃತ್ತ ಪ್ರಾಧ್ಯಾಪಕ ಕರಿಯಪ್ಪ, ಅಬ್ದುಲ್ ಝಬಿ, ಕೂಟಗಲ್ಲು ಹೋಬಳಿ ಘಟಕದ ಅಧ್ಯಕ್ಷ ಕ್ಯಾಸಾಪುರ ದೇವರಾಜ್, ಡಾ.ಹೇಮಂತ್ ಗೌಡ, ಪ್ರಕಾಶ್, ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.