ಪ್ರತಿ ಕ್ವಿಂಟಲ್ ತೊಗರಿಗೆ ಕೇಂದ್ರ ಸರ್ಕಾರ ₹7,550 ನೀಡುತ್ತಿದ್ದು, ರಾಜ್ಯ ಸರ್ಕಾರ ಅದಕ್ಕೆ ₹4,500 ಸಹಾಯ ಧನ ಸೇರಿಸಿ ಒಟ್ಟು ತೊಗರಿಗೆ ₹12,050 ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಆಗ್ರಹಿಸಿದರು.
ಈ ಸಂಬಂಧ ಸೋಮವಾರ ಸಿಎಂ ಸಿದ್ದರಾಮಯ್ಯನವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು.
ʼಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ತೊಗರಿ ಬೆಳೆ ಸಂಪೂರ್ಣ ಹಾಳಾಗಿದ್ದು, ಅದಕ್ಕೆ ಶೀಘ್ರದಲ್ಲಿ ಪರಿಹಾರ ಒದಗಿಸಬೇಕು. ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿದವರ ಸೋಯಾಬಿನ್ ಖರೀದಿಸಬೇಕು. ಉದ್ದು, ಸೋಯಾ, ತೊಗರಿ ಬೆಳೆಗೆ ವಿಮೆ ಕಟ್ಟಿದ ರೈತರಿಗೆ ಬೆಳೆ ವಿಮೆ ಪರಿಹಾರ ಶೀಘ್ರದಲ್ಲಿ ಪಾವತಿಸಬೇಕು. ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಡಿಸಿಸಿ ಬ್ಯಾಂಕಿನವರು ರೈತರಿಗೆ ಸೌಲ ಸೌಲಭ್ಯ ಒದಗಿಸಬೇಕು. ಜಿಲ್ಲೆಯ ಎಲ್ಲಾ ಪಿಕೆಪಿಎಸ್‌ಗಳಲ್ಲಿ ಖರೀದಿ ಕೇಂದ್ರ ಕಡ್ಡಾಯವಾಗಿ ಪ್ರಾರಂಭಿಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಪಿಎಂಎವೈ-ಜಿ : ಜಿಲ್ಲೆಗೆ 15 ಸಾವಿರ ಮನೆ ಮಂಜೂರು : ಸಂಸದ ಸಾಗರ ಖಂಡ್ರೆ
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ ಸೇರಿದಂತೆ ಪ್ರಮುಖರಾದ ಸುಭಾಷ ರಗಟೆ, ಬಾಬುರಾವ ಜೋಳದಾಬಕೆ, ಶಂಕರೆಪ್ಪಾ ಪಾರಾ, ಸಿದ್ರಾಮಪ್ಪಾ ಬಾಲಕುಂದೆ, ಪ್ರವೀಣ ಕುಲಕರ್ಣಿ, ನಾಗಯ್ಯಾ ಸ್ವಾಮಿ, ಬಸವಂತ ಡೊಂಗರಗಾ, ಬಸಪ್ಪಾ ಆಲೂರೆ, ಶಿವಾನಂದ ಹುಡಗೆ ಇದ್ದರು.