ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ಬಿಟ್ಟಂಗಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾಳುಗೋಡುವಿನಲ್ಲಿ ವಾಸವಾಗಿರುವ ಆದಿವಾಸಿ ಕುಟುಂಬಗಳಿಗೆ ನೆಲೆ ನಿಲ್ಲಲು ಸರಿಯಾದ ಸೂರಿಲ್ಲ. ಕೆಲವರಿಗೆ ನಿವೇಶನ ಸಿಕ್ಕಿದ್ದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಕ್ಕುಪತ್ರ ಮಾತ್ರ ಇನ್ನೂ ಸಿಕ್ಕಿಲ್ಲ.
ಕೊಡಗು ಜಿಲ್ಲಾಧಿಕಾರಿಗಳ ಕಚೇರಿಯಿಂದ ಅಧಿಕೃತವಾಗಿ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಆಗಿ ಸರ್ವೇ ನಂಬರ್ 337/1p ರಲ್ಲಿ 2 ಎಕರೆ 34 ಗಂಟೆ (85 ಸೆಂಟ್) ಭೂಮಿ ಕಾಯ್ದಿರಿಸಿ ನಿವೇಶನ ಹಂಚಿಕೆ ಮಾಡಲಾಗಿದೆ. ಅಲ್ಲದೆ ವಸತಿ ಉದ್ದೇಶದಿಂದ ನಕ್ಷೆ ಸಿದ್ಧಪಡಿಸಿ ಐಟಿಡಿಪಿ ಇಲಾಖೆಗೆ ಹಣ ಬಿಡುಗಡೆ ಮಾಡಿದ್ದು ಮನೆ ನಿರ್ಮಾಣಕ್ಕೆ ಮೀಸಲಿರಿಸಿ, ಸದರಿ ಜಾಗದಲ್ಲಿ ರಸ್ತೆ, ಅಂಗನವಾಡಿ, ವಿದ್ಯುತ್ ಸಂಪರ್ಕ, ಉದ್ಯಾನವನ, ಕುಡಿಯುವ ನೀರಿನ ಸಂಪರ್ಕ ಹಾಗೂ ನೀರಿನ ಟ್ಯಾಂಕ್ ಸೇರಿದಂತೆ ಮೂಲ ಸೌಕರ್ಯಗಳನ್ನು ನಿರ್ಮಿಸಲು
ಉದ್ದೇಶಿತ ಯೋಜನೆಯ ನಕ್ಷೆಯನ್ನು ಅಧೀಕ್ಷಕರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರವರ ಕಚೇರಿ, ವಿರಾಜಪೇಟೆ ಇವರಿಂದ ಸಲ್ಲಿಸಿದ ಸರ್ವೇ ನಕ್ಷೆ ಅನುಸಾರ ವಿನ್ಯಾಸ ನಕ್ಷೆ ಸಹ ಸಿದ್ಧಪಡಿಸಲಾಗಿದೆ. ಆದರೂ ಅಲ್ಲಿನ ಅಮಾಯಕ ಜೀವಗಳ ಸಮಸ್ಯೆಗಳನ್ನು ಕೇಳೋಕೆ ಅಧಿಕಾರಿಗಳಿಗೆ ಕಿವಿ ಇಲ್ಲದಂತಾಗಿದೆ.

ಆದಿವಾಸಿಗಳಿಗೆ ಅಗತ್ಯ ಮನೆ, ಮೂಲ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದ್ದು, ಜಿಲ್ಲಾಧಿಕಾರಿ ಆದೇಶದಂತೆ ಅಧಿಕೃತವಾಗಿ ಭೂ ಪರಿವರ್ತನೆ ಆಗಿ, ಸರ್ವೇ ಕಾರ್ಯ ನಡೆದು, ವಿನ್ಯಾಸ ನಕ್ಷೆ ಆಗಿದ್ದರೂ ಸದರಿ ಬಿಟ್ಟಂಗಾಲ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಇದುವರೆಗೆ ಹಕ್ಕುಪತ್ರ ಹಂಚಿಕೆ ಮಾಡಿಲ್ಲ. ಬಿಡುಗಡೆ ಆಗಿರುವ ಹಣದ ಅನುಸಾರ ಅಗತ್ಯ ಕ್ರಮ ಕೈಗೊಂಡು ಮನೆ ನಿರ್ಮಿಸುವ
ಕೆಲಸಕ್ಕೆ ಐಟಿಡಿಪಿ(ಇಂಟಿಗ್ರೇಟೆಡ್ ಟ್ರೈಬಲ್ ಡೆವಲಪ್ಮೆಂಟ್ ಪ್ರಾಜೆಕ್ಟ್) ಅಧಿಕಾರಿಗಳು ಇದುವರೆಗೆ ಮುಂದಾಗಿಲ್ಲ. ಸದರಿ ಜಾಗ ಆದಿವಾಸಿ ನಿರಾಶ್ರಿತರಿಗೆ ಮಂಜೂರಾತಿ ಆದೇಶ ಮಾಡಿದ್ದರೂ ಆ ಜಾಗದೊಳಗಿನ 50 ಸೆಂಟ್ ಜಾಗವನ್ನು ತಾಲೂಕು ಪಂಚಾಯ್ತಿ ಮುಖ್ಯ ಆಡಳಿತಾಧಿಕಾರಿ(ಇಓ) ಹೆಸರಿಗೆ ಮೀಸಲಿಟ್ಟು ಉದ್ದೇಶಿತ ಯೋಜನೆಯ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡ ಹೊರಟಿದೆ.

ದುರಾದೃಷ್ಟ ಸಂಗತಿ ಎಂದರೆ, ಆದಿವಾಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಆಗಿದೆ; ಹಕ್ಕುಪತ್ರ ಕೊಡಲಿಲ್ಲ, ಯೋಜನೆಯ ವಿನ್ಯಾಯ ನಕ್ಷೆ ತಯಾರಿದೆ; ಸಂಬಂಧಪಟ್ಟ ಇಲಾಖೆಗೆ ಹಣ ಬಿಡುಗಡೆ ಆಗಿದೆ; ಆದರೆ ಮನೆ ಕಟ್ಟಲಿಲ್ಲ. ರಾಜಕೀಯ ದುರುದ್ದೇಶದಿಂದ ಗ್ರಾಮದ ನಟ್ಟನಡುವಲ್ಲಿ ಪರಿಸರ, ವಾತಾವರಣ, ನೀರು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವಂತಹ ಕಸ ವಿಲೇವಾರಿ ಘಟಕವನ್ನು ಯಾರ ಗಮನಕ್ಕೂ ತರದೆ ಏಕಾಏಕಿ ಶಂಕುಸ್ಥಾಪನೆ ಮಾಡಿ ಶಾಸಕ ಪೊನ್ನಣ್ಣ ಅವರ ನೇತೃತ್ವದಲ್ಲಿ ಕಾಮಗಾರಿ ಕೆಲಸ ಆರಂಭಿಸಿದ್ದಾರೆ. ಆದರೆ ಅದೇ ಬಡ ಜನರ ಅಭಿವೃದ್ಧಿ ಕೆಲಸ ಇದುವರೆಗೆ ಆಗಲಿಲ್ಲ.

ಸದರಿ ಜಾಗದ ಹೋರಾಟ ಬಹು ವರ್ಷಗಳ ಕಾಲ ನಡೆದಿದೆ. ಅದರಲ್ಲೂ 2020ರ ಜನವರಿಯಲ್ಲಿ ಅಂದಿನ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಸ್ವಾತಂತ್ಯ ಹೋರಾಟಗಾರರಾದ ಹೆಚ್ ಎಸ್ ದೊರೆಸ್ವಾಮಿ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ(ರಿ)ಯ ನಿಯೋಗ ಚರ್ಚಿಸಿ ಜಿಲ್ಲಾಧಿಕಾರಿಗಳ ಆದೇಶದಂತೆ ಜಿಲ್ಲಾ ಉಪ ವಿಭಾಗಾಧಿಕಾರಿಯವರು ಕಾಯ್ದಿರಿಸಿ, ಭೂ ಪರಿವರ್ತನೆ ಮಾಡಲಾಗಿದೆ.
ಶಾಸಕ ಎ ಎಸ್ ಪೊನ್ನಣ್ಣ ಅವರಿಗೆ ಜನರ ಹಿತಕ್ಕಿಂತ ಕಸ ವಿಲೇವಾರಿ ಘಟಕವೇ ಮುಖ್ಯವಾಗಿದೆ. ಆದಿವಾಸಿ ನಿರಾಶ್ರಿತರಿಗೆ ಕಾಯ್ದಿರಿಸಲಾದ, ಪ್ರಸ್ತುತ ಗುಡಿಸಲುಗಳು ಇರುವಲ್ಲಿಯೇ, ಅದರಲ್ಲೂ ಅವೈಜ್ಞಾನಿಕವಾಗಿ ಈಗಾಗಲೇ ಅರ್ಧ ಕಿಮೀ ವ್ಯಾಪ್ತಿಯಲ್ಲಿ ಬೃಹತ್ ಕಸ ವಿಲೇವಾರಿ ಘಟಕ ಇದ್ದರೂ ವಸತಿ ಶಾಲೆಗಳು, ಅರಣ್ಯ, ಫಲವತ್ತಾದ ಕೃಷಿ ಭೂಮಿ, ಉತ್ತಮವಾದ ನೀರಿನ ಸೆಲೆ,
ಆದಿವಾಸಿ ಕುಟುಂಬಗಳು.. ಇವುಗಳನ್ನು ಲೆಕ್ಕಿಸದೆ ಇಂತಹದೊಂದು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದೇನಾ ಜನಪ್ರತಿನಿಧಿಗಳು ನಿರ್ವಹಿಸಬೇಕಾಗಿರುವ ಜವಾಬ್ದಾರಿ ಎಂದು ಕೇಳುವಂತಾಗಿದೆ.
ಆದೇಶ ಸಂಖ್ಯೆ ಜಾಗ (3)06/2020-21 ದಿನಾಂಕ 17/11/2020ರ ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ವಿರಾಜಪೇಟೆ ತಾಲೂಕು, ವಿರಾಜಪೇಟೆ ಹೋಬಳಿ, ಬಾಳುಗೋಡು ಗ್ರಾಮದ ಸರ್ವೆ ನಂಬರ್ 337/1 ರಲ್ಲಿ 2 ಎಕರೆ 34 ಗುಂಟೆ ಸರ್ಕಾರಿ ಜಾಗವನ್ನು ಸರ್ವೆಯಿಂದ ವಿಂಗಡಿಸಿದ ನಕಾಶೆಯಂತೆ ಬಿಟ್ಟಂಗಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಸಲುವಾಗಿ ಸಾರ್ವಜನಿಕ ಉದ್ದೇಶಕ್ಕಾಗಿ ಉಪಯೋಗಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ಕಲಂ 71 ರನ್ವಯ ಕಾರ್ಯ ನಿರ್ವಹಣಾಧಿಕಾರಿ(ಇಒ), ತಾಲ್ಲೂಕು ಪಂಚಾಯ್ತಿ ವಿರಾಜಪೇಟೆ ಇವರ ಹೆಸರಿಗೆ ಕಾಯ್ದಿರಿಸಿ ಜಾಗವನ್ನು ಸ್ವಾಧೀನ ಪಡಿಸಿಕೊಂಡು, ಯಾವ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸತಕ್ಕದ್ದು ಎಂಬ ಷರತ್ತನ್ನು ಸಹ ವಿಧಿಸಲಾಗಿದೆ.

ಇಷ್ಟೆಲ್ಲಾ ಸರ್ಕಾರ, ಇಲಾಖೆ ಮಟ್ಟದಲ್ಲಿ ಪ್ರಕ್ರಿಯೆಗಳು ನಡೆದರೂ, ಆದಿವಾಸಿಗಳಿಗೆ ಕಲ್ಪಿಸಬೇಕಾದ ಮೂಲಭೂತ ಸೌಲಭ್ಯವಾಗಲಿ, ಮನೆಗಳಾಗಲಿ ನಿರ್ಮಿಸದೆ ಈಗಲೂ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಲ್ಲಿ ಬದುಕುವಂತಹ ಪರಿಸ್ಥಿತಿ ಎದುರಾಗಿದೆ. ಆದಿವಾಸಿಗಳ ಅಭಿವೃದ್ಧಿ ಯೋಜನೆ ಇರುವ ಸ್ಥಳದಲ್ಲಿ ಇನ್ಯಾವುದೇ ಕಾಮಗಾರಿ ಕೈಗೊಳ್ಳುವಂತೆ ಇಲ್ಲ. ಆದರೆ ಸ್ಥಳಿಯ ತಾಲೂಕು ಆಡಳಿತ, ಇಒ, ಗ್ರಾಮ ಪಂಚಾಯ್ತಿ ಪಿಡಿಓ, ಜನಪ್ರತಿನಿಧಿಗಳು, ಶಾಸಕರು ನಿಯಮಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಆದಿವಾಸಿಗಳ ಅಭಿವೃದ್ಧಿ ಕೆಲಸ ಮಾಡುವುದಕ್ಕೂ ಮುಂಚೆ ಕಸ ವಿಲೇವಾರಿ ಘಟಕಕ್ಕೆ ಚಾಲನೆ ನೀಡಿದ್ದಾರೆ.
ಜನರ ಬದುಕಿಗಿಂತ ಕಸ ವಿಲೇವಾರಿ ಘಟಕಕ್ಕೆ ಮಹತ್ವ ಹೆಚ್ಚಾಗಿದೆ. ಅದರಲ್ಲೂ ಉಪಯೋಗಕ್ಕೆ ಬಾರದ, ಜನ ವಸತಿ ಇರದ, ಗ್ರಾಮದ ಪರಿಮಿತಿಯಿಂದ, ವಸತಿ ಶಾಲೆಗಳ ಪರಿಮಿತಿ ಪರಿಗಣಿಸಿ ದೂರದಲ್ಲಿ ಮಾಡಬೇಕಾದ ಕಾಮಗಾರಿ ಉದ್ದೇಶಪೂರ್ವಕವಾಗಿ ಜನವಸತಿ ಇರುವ ಪ್ರದೇಶದಲ್ಲಿ ಮಾಡುತ್ತಿರುವುದು ಅನುಮಾನಕ್ಕೆ ಎಡೆ ಮಾಡಿದೆ.
ಆದಿವಾಸಿ ಮಹಿಳೆ ಶೋಭಾ ಮಾತನಾಡಿ, “ನಿವೇಶನ ಕೊಟ್ಟು ವರ್ಷಗಳೇ ಕಳೆದು ಹೋದವು ಆದ್ರೆ ಹಕ್ಕು ಪತ್ರ ನೀಡಿ ಮನೆ ಕಟ್ಟಿಸಿ ಕೊಡಲಿಲ್ಲ. ಪೊನ್ನಣ್ಣ ಗೆಲ್ಲುವ ಮುಂಚೆ ಬಂದು ಭರವಸೆ ಕೊಟ್ಟು ಹೋದ್ರು. ಅದಾದ ಮೇಲೆ ಇದುವರೆಗೆ ಬಂದು ನಮ್ಮ ಕಷ್ಟ ಕೇಳಿಲ್ಲ. ಪ್ಲಾಸ್ಟಿಕ್ ಗುಡಿಸಲಲ್ಲಿ ಬದುಕು ನಡೆಸುತ್ತಿದ್ದೇವೆ. ಶೌಚಾಲಯ ಇಲ್ಲ. ಸ್ನಾನದ ಮನೆ ಕೇಳಲೇ ಬೇಡಿ. ಈಗಲಾದರು ಆದಿವಾಸಿಗಳ ಕಷ್ಟ ಅರಿತು ನೆರವಿಗೆ ಧಾವಿಸಬೇಕು” ಎಂದು ಮನವಿ ಮಾಡಿದರು.

“ನಮ್ಮ ಬಗ್ಗೆ ಹೇಳೋರು ಇಲ್ಲ ಕೇಳೋರು ಮೊದಲೇ ಇಲ್ಲ. ಜಾಗ ಕೊಟ್ರು, ಮನೆ ಕಟ್ಟಿಸ್ತೀವಿ ಅಂದ್ರು, ಐಟಿಡಿಪಿ ಅಧಿಕಾರಿಗಳು ದುಡ್ಡು ಬಂದಿದೆ ಮನೆ, ರಸ್ತೆ, ಕುಡಿಯೋ ನೀರು, ವಿದ್ಯುತ್ ಎಲ್ಲಾ ಮಾಡ್ತೀವಿ ಅಂದ್ರು. ಇವತ್ತಿಗೂ ಈ ಕಡೆ ತಿರುಗಿ ನೋಡಿಲ್ಲ. ಇನ್ನ ಪಂಚಾಯ್ತಿ, ಇಒ ಹಕ್ಕುಪತ್ರ ಕೊಡಿ ಅಂದ್ರೆ ಅದರ ಬಗ್ಗೆ ಮಾತಾಡೋದೂ ಇಲ್ಲ. ಹೀಗಾದರೆ ನಮ್ಮ ಕಷ್ಟ ಯಾರಿಗೆ ಹೇಳಬೇಕು” ಎನ್ನುತ್ತಾರೆ ಆದಿವಾಸಿ ಮುಖಂಡ ಕಾಕು.
ಈ ಸುದ್ದಿ ಓದಿದ್ದೀರಾ?: ಕೊಡಗು | ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭೇಟಿ; ಹಲವು ಪ್ರಶ್ನೆಗಳಿಗೆ ಉತ್ತರಿಸುವಂತೆ ಎಸ್ಡಿಪಿಐ ಮನವಿ
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆವಹಿಸಿ ಕಸ ವಿಲೇವಾರಿ ಘಟಕ ಕಾಮಗಾರಿ ನಿಲ್ಲಿಸಿ, ಈ ಕೂಡಲೇ ಸರ್ಕಾರಿ ಆದೇಶ, ಇಲಾಖೆಗಳ ಆದೇಶದನ್ವಯ ಆದಿವಾಸಿಗಳಿಗೆ ಹಕ್ಕುಪತ್ರ ನೀಡಿ. ಮನೆ, ಅಗತ್ಯ ಮೂಲ ಸೌಲಭ್ಯ ಕಲ್ಪಿಸಿಕೊಡಬೇಕಿದೆ. ಈ ಕುರಿತಾಗಿ ಈದಿನ ಡಾಟ್ ಕಾಮ್ ಅಧಿಕಾರಿಗಳ ಜತೆ ಮಾತನಾಡಿ ಹೆಚ್ಚಿನ ಮಾಹಿತಿಯೊಡನೆ ವರದಿ ಮಾಡಲಿದೆ.

