- ಮುಸ್ಲಿಂ ಎಂಬ ಕಾರಣಕ್ಕೆ ಬಿಜೆಪಿ ಸರ್ಕಾರವು ಆ ಕಡೆ ಗಮನಹರಿಸಲಿಲ್ಲ
- ನಾಲ್ಕು ಮುಸ್ಲಿಂ ಕುಟುಂಬಗಳಿಗೆ ಪರಿಹಾರ ಘೋಷಿಸಿದ್ದು ಉತ್ತಮ ಕೆಲಸ
ಕೋಮು ದಳ್ಳುರಿಗೆ ಬಲಿಯಾದ ಸಮೀರ ಶಹಾಪುರ, ನಬಿಸಾಬ ಎಂ ಕಿಲ್ಲೇದಾರ ಕುಟುಂಬಗಳಿಗೂ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಸಾಹಿತಿ ಬಸವರಾಜ್ ಸೂಳಿಬಾವಿ ಒತ್ತಾಯಿಸಿದ್ದಾರೆ.
ಕೋಮು ದ್ವೇಷಕ್ಕೆ ಬಲಿಯಾದ ದಕ್ಷಿಣ ಕನ್ನಡ ಜಿಲ್ಲೆಯ ಮಸೂದ್, ಫಾಜಿಲ್, ಅಬ್ದುಲ್ ಖಲೀಲ್, ದೀಪಕರಾವ್ ಎಂಬ ನಾಲ್ಕು ಕುಟುಂಬಗಳಿಗೆ ಪರಿಹಾರದಲ್ಲಿ ಆದ ತಾರತಮ್ಯ ಸರಿ ಪಡಿಸಿ ಈ ನಾಲ್ಕು ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದು, ತುಂಬ ಒಳ್ಳೆಯ ಕೆಲಸ ಎಂದು ಸಾಹಿತಿ ಬಸವರಾಜ ಸೂಳಿಬಾವಿ ಹೇಳಿದರು.
2022ರ ಜನವರಿ 14 ರಂದು ಕೋಮುದಳ್ಳುರಿಗೆ ಬಲಿಯಾದ ಗದಗ ಜಿಲ್ಲೆಯ ನರಗುಂದದ ಸಮೀರ್ ಶಹಾಪುರ ಕುಟುಂಬವನ್ನು ಸರ್ಕಾರ ಮರೆತು ಬಿಟ್ಟಿದೆ. ಸಮೀರ್ ಕುಟುಂಬಕ್ಕೆ ಪರಿಹಾರ ಘೋಷಿಸಿ ತಲುಪಿಸಬೇಕು. ಎಚ್ ಕೆ ಪಾಟೀಲ ಅವರು ಕೂಡ ಈ ಸಂಗತಿಯನ್ನು ಸರ್ಕಾರದ ಗಮನಕ್ಕೆ ತರಬೇಕಿತ್ತು. ಈಗಲಾದರೂ ಈ ಬಗ್ಗೆ ಅವರು ಗಮನ ಹರಿಸಬೇಕು. ಸಿಎಂ ಸಿದ್ಧರಾಮಯ್ಯ ಅವರು ಕೋಮುದಳ್ಳುರಿಗೆ ಬಲಿಯಾದ ನರಗುಂದದ ಸಮೀರ್ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಘಟನೆ ನಡೆದಾಗ ನರಗುಂದ ಶಹರಕ್ಕೆ ಸತ್ಯ ಶೋಧನಾ ಗೆಳೆಯರ ತಂಡ ಭೇಟಿ ಮಾಡಿತ್ತು. ಸಮೀರ ಶಹಾಪುರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಲ್ಲದೆ, ನಡೆದ ಘಟನೆಯ ಎಲ್ಲ ವಿವರವನ್ನು ಕಲೆ ಹಾಕಿತ್ತು. ಆ ವಿಷಯವಾಗಿ ನರಗುಂದದ ಡಿವೈಎಸ್ಪಿ ಅವರೊಡನೆ ಮಾತುಕತೆ ನಡೆಸಲಾಗಿತ್ತು. ಡಿವೈಎಸ್ಪಿ ಕೂಡ ನಮ್ಮೆದುರು ಕೋಮುಶಕ್ತಿ ದುಷ್ಕೃತ್ಯವನ್ನು ಒಪ್ಪಿಕೊಂಡು ತನಿಖೆಯ ವರದಿ ಸಲ್ಲಿಸುವದಾಗಿ ಹೇಳಿದ್ದರು ಎಂದು ತಿಳಿಸಿದ್ದಾರೆ.
ಸತ್ಯ ಶೋಧನಾ ವರದಿಯನ್ನು ಬಿಡುಗಡೆ ಮಾಡಲಾಗಿತ್ತು. ಸಮೀರ್ ಕುಟುಂಬಕ್ಕೆ ಸೂಕ್ತ ಪರಿಹಾರ ಸಿಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದೇವು. ಬಿಜೆಪಿ ಸರ್ಕಾರವು ಸತ್ತವನು ಮುಸ್ಲಿಂ ಎಂಬ ಕಾರಣಕ್ಕೆ ಆ ಕಡೆ ಗಮನವನ್ನೇ ಹರಿಸಿರಲಿಲ್ಲ. ಇದನ್ನು ಗಮನಕ್ಕೆ ತಂದುಕೊಂಡು ಸಿಎಂ ಸಿದ್ಧರಾಮಯ್ಯ ಅವರು ನರಗುಂದದ ಸಮೀರ ಶಹಾಪುರ ಕುಟುಂಬಕ್ಕೆ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗದಗ ಜಿಲ್ಲಾಧಿಕಾರಿಗಳು ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಮೀರ್ ಕುಟುಂಬಕ್ಕೆ ಪರಿಹಾರ ಸಿಗುವ ಹಾಗೆ ಕ್ರಮ ಕೈಗೊಳ್ಳಬೇಕು ಎಂದಯ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಪೊಲೀಸರಿಂದ ಹಲ್ಲೆ ಆರೋಪ; ನೊಂದ ಯುವಕ ಆತ್ಮಹತ್ಯೆ
2022ರ ಎಪ್ರಿಲ್ 9 ರಂದು ಧಾರವಾಡದ ನುಗ್ಗಿಕೇರಿ ಹನುಮಂತನ ಗುಡಿಯ ಪೌಳಿಯಲ್ಲಿ ಹದಿನೈದು ವರ್ಷಗಳಿಂದ ಕಲ್ಲಂಗಡಿ ಹಣ್ಣು ಮತ್ತು ಇತರೆ ಹಣ್ಣುಗಳನ್ನು ಮಾರುತ್ತಿದ್ದ ಬಡ ವ್ಯಾಪಾರಿ ನಬಿಸಾಬ ಎಂ ಕಿಲ್ಲೇದಾರ ಅವರ ಅಂಗಡಿಯ ಮೇಲೆ ಶ್ರೀರಾಮ ಸೇನೆಯ ಪುಂಡರ ಗುಂಪು ದಾಳಿ ನಡೆಸಿ 5 ಕ್ವಿಂಟಲ್ ಹಣ್ಣು ನಾಶ ಮಾಡಿ ಅವರ ಬದುಕನ್ನು ಬೀದಿಪಾಲು ಮಾಡಿತು ಎಂದು ವಿವರಿಸಿದ್ದಾರೆ.
ಈ ದುಷ್ಕೃತ್ಯ ನಡೆದ ಮೇಲೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಆ ಕಡೆ ತಿರುಗಿಯೂ ನೋಡಲಿಲ್ಲ. ಅದು ರಾಷ್ಟ್ರೀಯ ಸುದ್ಧಿಯಾದರೂ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಿ ಚಲನಚಿತ್ರ ನೋಡಿ ಅತ್ತರೆ ವಿನಃ ಬೀದಿಪಾಲಾದ ನಬೀಸಾಬರ ಅಳಲನ್ನು ಒಂದಿಷ್ಟೂ ಕೇಳಿಸಿಕೊಳ್ಳಲಿಲ್ಲ. ನಬೀಸಾಬ ಮುಸಲ್ಮಾನ ಅನ್ನುವ ಕಾರಣಕ್ಕಾಗಿ ಈ ಸಾಮಾನ್ಯ ಮನುಷ್ಯನ ಕಣ್ಣೀರು ಅಂದಿನ ರಾಜ್ಯ ಸರ್ಕಾರಕ್ಕೆ ಏನೂ ಅನ್ನಿಸಲಿಲ್ಲ ಎಂಬುದನ್ನು ಇಡೀ ರಾಜ್ಯವೇ ನೋಡಿದೆ. ಅಂದು ಬೀದಿಪಾಲಾದ ನಬೀಸಾಬರ ಬದುಕನ್ನು ಸರಿಪಡಿಸುವ ಅಗತ್ಯ ಈಗಿನ ರಾಜ್ಯ ಸರ್ಕಾರದ ಮೇಲಿದೆ. ನಬೀಸಾಬರಿಗೆ ಪರಿಹಾರ ನೀಡಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂಬುದು ಆಗ್ರಹಿಸಿದ್ದಾರೆ.