ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವು ಭಾಗಗಳಲ್ಲಿ ಅರೆಭಾಷೆ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿಯೂ ‘ಅರೆಭಾಷೆ ದಿನಾಚರಣೆ’ಯನ್ನು ಆಯೋಜಿಸುವಂತಾಗಬೇಕು ಎಂದು ಭಾಗಮಂಡಲ ಗ್ರಾಮ ಪಂಚಾಯತಿ ಅಧ್ಯಕ್ಷ ಕಾಳನ ರವಿ ಹೇಳಿದ್ದಾರೆ.
ಭಾಗಮಂಡಲದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ವಿವಿಧ ಸಂಘಟನೆಗಳು ಒಗ್ಗೂಡಿ ಆಯೋಜಿಸಿದ್ದ ‘ಅರೆಭಾಷೆ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಕನ್ನಡ ಉಪ ಭಾಷೆಯಾದ ಅರೆಭಾಷೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮನೆಗಳಲ್ಲಿ ಅರೆಭಾಷೆಯನ್ನು ಮಾತನಾಡುವಂತಾಗಬೇಕು. ಇದರಿಂದ ಮಕ್ಕಳಿಗೆ ಭಾಷೆ ಕಲಿಸಲು ಸಾಧ್ಯವಾಗಲಿದೆ” ಎಂದು ಅಭಿಪ್ರಾಯಪಟ್ಟರು.
“ಭಾಗಮಂಡಲ ವ್ಯಾಪ್ತಿಯಲ್ಲಿ ಶೇ.75ಕ್ಕೂ ಹೆಚ್ಚು ಜನರು ಅರೆಭಾಷೆ ಮಾತನಾಡುವವರು ವಾಸಿಸುತ್ತಿದ್ದಾರೆ. ಅರೆಭಾಷೆ ದಿನಾಚರಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸುವಂತಾಗಬೇಕು. ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ನಿಕಟ ಪೂರ್ವ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಮಾತನಾಡಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆಗೆ ಹಲವರು ಶ್ರಮಿಸಿದ್ದಾರೆ” ಎಂದರು.
“ಅರೆಭಾಷೆಯು ವಿಶಿಷ್ಟ ಮಾತೃ ಹೃದಯ ಭಾಷೆಯಾಗಿದ್ದು, ಈ ಭಾಷೆಯ ಅಸ್ತಿತ್ವ ಉಳಿಸುವಂತಾಗಬೇಕು ಎಂದರು. ಸಾಂಸ್ಕøತಿಕ ಸಮಾವೇಶಗಳು, ಸಾಹಿತ್ಯ ಸಮ್ಮೇಳನಗಳು, ಹೀಗೆ ಹಲವು ಕಾರ್ಯಕ್ರಮಗಳನ್ನು ಹೊರಜಿಲ್ಲೆಗಳಲ್ಲೂ ಸಹ ಆಯೋಜಿಸಿ ಅರೆಭಾಷೆ ಬೆಳವಣಿಗೆಗೆ ಶ್ರಮಿಸಲಾಗಿತ್ತು” ಎಂದರು.
‘ಹಿಂಗಾರು ತ್ರೈಮಾಸಿಕ’ ಪತ್ರಿಕೆಯನ್ನು ಪ್ರಕಟಿಸುವ ನಿಟ್ಟಿನಲ್ಲಿ ‘ಸಂಪಾದಕೀಯ ಸಲಹಾ ಸಮಿತಿ’ ರಚಿಸಿಕೊಂಡು ಹೊರ ತರುವಂತಾಗಬೇಕು ಎಂದು ಕೊಲ್ಯದ ಗಿರೀಶ್ ಅವರು ಸಲಹೆ ಮಾಡಿದರು.
ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, “ಅರೆಭಾಷೆ ಬೆಳವಣಿಗೆಗೆ ಪ್ರತಿಯೊಬ್ಬರೂ ಅರೆಭಾಷೆ ಮಾತಾಡುವುದರ ಜೊತೆಗೆ, ಓದುವ ಮತ್ತು ಬರೆಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಲೇಖನ, ಕಥೆ, ಕವನ, ಬರೆಯುವ ಮೂಲಕ ಅರೆಭಾಷೆ ಬೆಳವಣಿಗೆಗೆ ಮುಂದಾಗಬೇಕಿದೆ” ಎಂದು ಸಲಹೆ ಮಾಡಿದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಆರ್.ಸೋಮಣ್ಣ ಮಾತನಾಡಿ, “ಅರೆಭಾಷೆ ಅಕಾಡೆಮಿ ಸ್ಥಾಪನೆಗೆ ಎಲ್ಲರೂ ಶ್ರಮಿಸಿದ್ದಾರೆ. ಅರೆಭಾಷೆಯನ್ನು ಮುಂದಿನ ಜನಾಂಗಕ್ಕೂ ತಿಳಿಸುವ ನಿಟ್ಟಿನಲ್ಲಿ ಅರೆಭಾಷೆ ಮಾತನಾಡುವಂತಾಗಬೇಕು” ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧೀಕ್ಷಕ ಚೊಕ್ಕಾಡಿ ಅಪ್ಪಯ್ಯ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅಮೆ ದಮಯಂತಿ, ಉಪಾಧ್ಯಕ್ಷೆ ಬೈತಡ್ಕ ಜಾನಕಿ ಬೆಳ್ಯಪ್ಪ, ಕುದುಪಜೆ ರೋಹಿಣಿ, ಪೇರಿಯನ ಮುತ್ತಮ್ಮ, ನಾರೋಲನ ಭಾಗೀರಥಿ, ಬಾರನ ಶೋಭಾ, ಮೂಲೆಮಜಲು ಅಮಿತಾ, ಕಟ್ರತನ ಲಲಿತ ಐಯ್ಯಣ್ಣ, ಬೈಮನ ಜ್ಯೋತಿ, ಜಿಲ್ಲೆಯ ಕೊಡಗು ಗೌಡ ವಿವಿಧ ಸಮಾಜ ಹಾಗೂ ಸಂಘಟನೆಗಳ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಇತರರು ಇದ್ದರು.