ಕರ್ನಾಟಕದಾದ್ಯಂತ 400ಕ್ಕೂ ಅಧಿಕ ಸರ್ಕಾರಿ ಪದವಿ ಕಾಲೇಜುಗಳಲ್ಲಿ 14,000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಳೆದ ಇಬ್ಬರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಡಿಮೆ ವೇತನ, ಅಭದ್ರತೆಯ ನಡುವೆಯೂ ಕೆಲಸ ಮಾಡುತ್ತಿದ್ದಾರೆ. ಎಲ್ಲ ಸರ್ಕಾರಗಳು ನಮ್ಮನ್ನು ಬಳಸಿ ಬಿಸಾಡುತ್ತಿವೆ. ನಮಗೆ ಉದ್ಯೋಗ ಭದ್ರತೆ ನೀಡದಿದ್ದರೆ, ಉಗ್ರ ಹೋರಾಟ ಎದುರಿಸಲು ಸಿದ್ದರಾಗಿ ಎಂದು ಸರ್ಕಾರಕ್ಕೆ ಅತಿಥಿ ಉಪನ್ಯಾಸಕ ಸಂಘದ ಮಸ್ಕಿ ತಾಲೂಕು ಅಧ್ಯಕ್ಷ ಸುರೇಶ ಬಳಗಾನೂರು ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಮಸ್ಕಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. “ಕಾಂಗ್ರೆಸ್ ಸರ್ಕಾರದ ಮೇಲೆ ನಾವು ಬಹುವಾಗಿ ನಂಬಿಕೆ ಇಟ್ಟಿದ್ದೇವೆ. ಏಕೆಂದರೆ ಕಳೆದ ಸರ್ಕಾರದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ, ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಅತಿಥಿ ಉಪನ್ಯಾಸಕರ ಪರ ಧ್ವನಿ ಎತ್ತಿದ್ದರು. ಸೇವಾ ಭದ್ರತೆ ನೀಡಿ ಸಾವಿರಾರು ಅತಿಥಿ ಉಪನ್ಯಾಸಕರ ಬದುಕಿಗೆ ದಾರಿದೀಪವಾಗಬೇಕೆಂದು ಅಂದಿನ ಸರ್ಕಾರವನ್ನು ಒತ್ತಾಯಿಸಿದ್ದರು. ಈಗ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ನಮಗೆ ಸೇವಾ ಭದ್ರತೆ ಒದಗಿಸಬೇಕು” ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷ ರಾಮಣ್ಣ ನಾಯಕ, ಅತಿಥಿ ಉಪನ್ಯಾಸಕರಾದ ಪಂಪಾಪತಿ ಗುತ್ತೇದಾರ್, ಡಾ. ಪಂಪಾಪತಿ ನಾಯಕ, ಸುಭಾಷ ಹರ್ವಾಪುರ, ಡಾ. ವಿಶ್ವನಾಥ, ಅಮರಣ್ಣ, ಶರಣಬಸವ, ರಾಮಣ್ಣ ಹಂಪರಗುಂದಿ, ಚನ್ನನಗೌಡ ಪ್ರಭುದೇವ ಸಾಲಿಮಠ, ಹುಚ್ಚೇಶ ನಾಗಲೀಕರ್, ಚನ್ನಪ್ಪ ವಸ್ತ್ರದ್, ಈರಣ್ಣ ಗೌಡ, ಚಾಂದಪಾಷ, ಅಶ್ವಿನಿ, ಶ್ರೀದೇವಿ, ಸೈಯದ್ ಅಲಿ, ಹಸೇನಪ್ಪ ಸೇರಿದಂತೆ ಹಲವು ಉಪನ್ಯಾಸಕರು ಇದ್ದರು.