- ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ: ಯತ್ನಾಳ್
- ಸಾಕ್ಷಿ ಕೇಳಿದ್ದಾರೆ, ನಿಮ್ಮ ಬಳಿ ಇದ್ದರೆ ಕೊಟ್ಟುಬಿಡಿ: ಖಾದರ್
ನಮ್ಮ ಪ್ರಧಾನ ಮಂತ್ರಿಗಳನ್ನು ಧೈರ್ಯವಾಗಿ ನಾವೇ ಕೇಳುತ್ತೇವೆ. ಆ ಧೈರ್ಯ ನಮಗಿದೆ. ಪ್ರತಿಯೊಬ್ಬರಿಗೂ 15 ಲಕ್ಷ ರೂ. ಹಾಕುತ್ತೇವೆ ಎಂದು ನರೇಂದ್ರ ಮೋದಿ ಅವರು ಎಲ್ಲಿ ಹೇಳಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆ ನೀಡಿ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.
ಗುರುವಾರ ಸದನ ಆರಂಭವಾಗುತ್ತಿದ್ದಂತೆ ರಾಜ್ಯಪಾಲರ ಭಾಷಣದ ಮೇಲೆ ಸಭಾಧ್ಯಕ್ಷ ಯು ಟಿ ಖಾದರ್ ಅವರು ಎನ್ ಎಚ್ ಕೋನರೆಡ್ಡಿ ಅವರಿಗೆ ಮಾತನಾಡಲು ಅನುವು ಮಾಡಿಕೊಟ್ಟರು. ಸಚಿವ ಕೆ ಜೆ ಜಾರ್ಜ್ ಅವರು “ಮೋದಿ ಅವರು 15 ಲಕ್ಷ ಕೊಡುತ್ತಾರೆ ಎಂದಿದ್ದರು. ಕೊಟ್ರಾ?” ಎಂದು ಪ್ರತಿಪಕ್ಷದ ನಾಯಕರನ್ನು ಪ್ರಶ್ನಿಸಿದರು.
ಇದಕ್ಕೆ ಯತ್ನಾಳ್ ಎದ್ದುನಿಂತು, “ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಜೀವಂತವಾಗಿದೆ. ನಮ್ಮ ಪ್ರಧಾನಿಯವರು ಹೇಳಿರುವ ಸೂಕ್ತ ಸಾಕ್ಷಿ ನೀಡಿ, ನಾವೇ ಹೋಗಿ ಮೋದಿ ಅವರನ್ನು ಕೇಳುತ್ತೇವೆ. ಅವರು ಹೇಳಿದ್ದು ನಿಜವಿದ್ದರೆ 15 ಲಕ್ಷ ರೂ. ಪ್ರಧಾನಿಗಳಿಂದ ತರುತ್ತೇವೆ” ಎಂದರು.
ಅಭಯ್ ಪಾಟೀಲ್ ಮಧ್ಯ ಪ್ರವೇಶಿಸಿ, “ನಿಮ್ಮ ಧೈರ್ಯವನ್ನು ರಾಜ್ಯದ ಜನ ನೋಡಿದ್ದಾರೆ. ಮೊದಲು ಜಿಎಸ್ಟಿ ಪಾಲನ್ನು ಮೋದಿ ಅವರಿಂದ ಕೇಳಿ ಪಡೆಯಿರಿ” ಎಂದು ಲೇವಡಿ ಮಾಡಿದರು.
ಬಿ ವೈ ವಿಜಯೇಂದ್ರ ಮಧ್ಯ ಪ್ರವೇಶಿಸಿ, “ಸದನದಿಂದ 15 ಲಕ್ಷ ವಿಚಾರ ಕಡತದಿಂದ ತೆಗೆದುಹಾಕಿ. ಇಲ್ಲವಾದರೆ ಆ ಬಗ್ಗೆ ಮಾತನಾಡಿರುವ ಬಗ್ಗೆ ದಾಖಲೆ ನೀಡಿ” ಎಂದು ಆಡಳಿತ ಪಕ್ಷದ ಸದಸ್ಯರನ್ನು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯದಲ್ಲಿ ಮತ್ತೆ ಶುರುವಾಯಿತು ಹೆಣ ರಾಜಕಾರಣ
ಸಭಾಧ್ಯಕ್ಷರು ಪ್ರತಿಕ್ರಿಯಿಸಿ, “ಇದೇ ವಿಚಾರದಲ್ಲಿ ಕಾಲಹರಣ ಮಾಡಬೇಡಿ. 15 ಲಕ್ಷ ವಿಚಾರದ ಬಗ್ಗೆ ಪ್ರಸ್ತಾಪಿಸಿದವರು ಸೂಕ್ತ ದಾಖಲೆ ನೀಡಿ. ಈ ವಿಷಯ ಎಳೆಯುತ್ತ ಸದನ ಹಾಳು ಮಾಡಬೇಡಿ. ಸಾಕ್ಷಿ ಕೇಳಿದ್ದಾರೆ, ನಿಮ್ಮ ಬಳಿ ಇದ್ದರೆ ಕೊಟ್ಟುಬಿಡಿ” ಎಂದು ಕಾಂಗ್ರೆಸ್ ಸದಸ್ಯರಿಗೆ ಸೂಚಿಸಿದರು.
ಕೆ ಎನ್ ರಾಜಣ್ಣ ಪ್ರತಿಕ್ರಿಯಿಸಿ, “15 ಲಕ್ಷ ಕೊಡುವ ಬಗ್ಗೆ ಇಡೀ ಜಗತ್ತೇ ಕೇಳಿದೆ. ಆ ವಿಡಿಯೋ ನಾವೆಲ್ಲರೂ ನೋಡಿದ್ದೇವೆ. ಇದಕ್ಕಿಂತ ಸಾಕ್ಷಿ ಬೇಕಾ?” ಎಂದರು.
“ಮೋದಿ ಅವರು ಮಾತನಾಡಿದ್ದು ಕೇವಲ ಕಪ್ಪು ಹಣದ ಬಗ್ಗೆ ಅಷ್ಟೇ. ಆದರೆ, ಅದನ್ನು 15 ಲಕ್ಷ ಕೊಡುತ್ತಾರೆ ಎಂದು ತಿರುಚಲಾಗಿದೆ” ಎಂದು ಬಿಜೆಪಿ ಸದಸ್ಯರು ಪ್ರತಿಕ್ರಿಯಿಸಿದರು.