‘ನೀರು ಕೊಡಿ, ಇಲ್ಲವೇ ನಮ್ಮನ್ನು ಸಾಯಲು ಬಿಡಿ’ ಎಂದು ರೈತರು ಜೀವಂತ ಸಮಾಧಿಗೆ ಯತ್ನಿಸಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದಿದೆ.
ನಾರಾಯಣಪುರ ಜಲಾಶಯದ ಎಡದಂಡೆ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ಶಹಾಪುರದ ಭೀಮರಾಯನಗುಡಿಯಲ್ಲಿರುವ ಕೆಬಿಜೆಎನ್‌ಎಲ್ ಆಡಳಿತ ಕಚೇರಿ ಎದುರು ರೈತರು ಕಳೆದ 21 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಆದರೆ, ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ, ಬೇಸತ್ತ ರೈತರು ಗುರುವಾರ ಬೃಹತ್ ಗುಂಡಿ ತೋಡಿ, ಅದರೊಳಗೆ ಕುಳಿತು ಸಾಮೂಹಿಕವಾಗಿ ಜೀವಂತ ಸಮಾಧಿಗೆ ಯತ್ನಿಸಿದ್ದಾರೆ. ಅವರನ್ನು ಅಧಿಕಾರಿಗಳು ತಡೆಯುವಲ್ಲಿ, ಮತ್ತೊಬ್ಬ ರೈತ ಕಚೇರಿಯ 4ನೇ ಮಹಡಿಗೆ ಏರಿ, ಅಲ್ಲಿಂದ ಬೀಳಲು ಯತ್ನಿಸಿದ್ದಾರೆ. ಅದರ ಬೆನ್ನಲ್ಲೇ ಇನ್ನೋರ್ವ ರೈತ ವಿಷದ ಬಾಟಲಿ ಹಿಡಿದು ವಿಷ ಕುಡಿಯಲು ಯತ್ನಿಸಿದ್ದಾರೆ.
ನಾಲೆಗೆ ನೀರು ಹರಿಸದ ಪರಿಣಾಮ, ರೈತರು ಬೆಳೆದಿರುವ ಮೆಣಸಿನಕಾಯಿ ನೀರಿಲ್ಲದೆ ಒಣಗುತ್ತಿದೆ. ರೈತರು ನಷ್ಟಕ್ಕೆ ಸಿಲುಕಿದ್ದಾರೆ. ಆದರೂ, ಅಧಿಕಾರಿಗಳು ರೈತರ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಧರಣಿನಿರತರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ತುರ್ತುಸಭೆಯಲ್ಲಿ ಕಾಲುವೆಗೆ ನೀರು ಹರಿಸಲು ಸಾಧ್ಯವಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಹತಾಶೆಗೊಂಡ ರೈತರು, ನೀರು ಕೊಡದಿದ್ದರೆ ಬೃಹತ್ ಗುಂಡಿಯಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಮೇಲೆ ಮಣ್ಣು ಹಾಕಿ ಎಂದು ಗುಂಡಿಯಲ್ಲಿ ಕುಳಿತು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಡಿವೈಎಸ್‌ಪಿ ಜಾವೀದ್ ಇನಾಂದಾರ್ ಹಾಗೂ ತಹಸೀಲ್ದಾರ್ ಉಮಾಕಾಂತ ಹಳ್ಳೆ ತೆರಳಿ ರೈತರ ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ಕಾಲುವೆಗೆ ನೀರು ಹರಿಸುವವರೆಗೂ ಧರಣಿ ಕೈಬಿಡುವುದಿಲ್ಲವೆಂದು ರೈತರು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಬಂದ ಎಸ್‌ಪಿ ಜಿ ಸಂಗೀತಾ ರೈತರನ್ನು ಗುಂಡಿಯಿಂದ ಮೇಲೇಳುವಂತೆ ಮನವಿ ಮಾಡಿದ್ದು, ಶಾಂತಿಯುತ ಧರಣಿ ನಡೆಸುವಂತೆ ತಿಳಿಸಿದ್ದಾರೆ.
ಗುಂಡಿಯಿಂದ ಹೊರಬಂದಿರುವ ರೈತರು ಧರಣಿ ಮುಂದುವರೆಸಿದ್ದಾರೆ. ಧರಣಿಯಲ್ಲಿ ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ, ನಾಗರತ್ನ ಮಾಲಿಪಾಟೀಲ, ಮಹೇಶಗೌಡ ಸುಬೇದಾರ ಸೇರಿದಂತೆ ನೂರಾರು ರೈತರಿದ್ದಾರೆ.