ಕರ್ನಾಟಕ ಸಮಸ್ತ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 1ರಿಂದ 8ರ ತನಕ ಬೆಂಗಳೂರಿನಿಂದ ಬೆಳಗಾವಿಯವರೆಗೆ ದೇಶ ಉಳಿಸಿ ಸಂಕಲ್ಪ ಯಾತ್ರೆ ಆರಂಭಿಸಿದ್ದು, ಮೈಸೂರು, ಕುಶಾಲನಗರ ದಾರಿಯಾಗಿ ಆಗಮಿಸಿದ ಜಾಥಾ ತಂಡವನ್ನು ಕೊಡಗು ನಗರದ ಸುದರ್ಶನ್ ವೃತದಲ್ಲಿ ಸ್ವಾಗತಿಸಲಾಯಿತು.
ನಗರದ ಸುದರ್ಶನ ವೃತ್ತದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸೇರಿದ ಪ್ರಗತಿಪರ ಸಂಘಟನೆಯ ಮುಖಂಡರು ಹಾಗೂ ಜಾಥಾದಲ್ಲಿ ಆಗಮಿಸಿದ ಪ್ರಮುಖರು ಸಭೆ ನಡೆಸಿ, ಬಿಜೆಪಿ ಪಕ್ಷ ʼಇಸ್ ಬಾರ್ ಚಾರ್ ಸೌ ಪಾರ್ʼ ಎಂಬ ಹುಸಿ ಪ್ರಚಾರದಲ್ಲಿ ನಿರತವಾಗಿದೆ. ಇಂತಹ ಸಮಯದಲ್ಲಿ ಮತದಾರರು ಎಚ್ಚೆತ್ತು ʼಇಸ್ ಬಾರ್ ಬಿಜೆಪಿಕಿ ಹಾರ್ʼ ಎನ್ನುವ ಸಂದೇಶ ಸಾರಿದರು.
ಸಭೆಯಲ್ಲಿ ಜಾತಿ ಜಾತಿಗಳ ನಡುವೆ ಜಗಳ ಹಚ್ಚುವ, ಧರ್ಮ ಧರ್ಮಗಳ ನಡುವೆ ದ್ವೇಷ ಬೆಳೆಸುವ, ದೇಶವನ್ನು ಭಾವೋಧ್ರೇಕಗೊಳಿಸಿ ವಾಮ ಮಾರ್ಗದ ಮೂಲಕ ಜನರ ಮತ ಪಡೆದು, ಅಧಿಕಾರ ಪಡೆದು ಸಂವಿಧಾನವನ್ನೇ ಬದಲಾಯಿಸುತ್ತೇವೆ ಎನ್ನುವ ಕುತಂತ್ರಿಗಳಿಗೆ ಸೋಲಿನ ರುಚಿ ತೋರಿಸಬೇಕು ಎಂದು ನಿರ್ಧರಿಸಿದರು.
ಜಮಾ ಅತೆ ಇಸ್ಲಾಮೀ ಜಿಲ್ಲಾ ಅಧ್ಯಕ್ಷ ಅಬ್ದುಲ್ ರೆಹಮಾನ್, ಕಾರ್ಯದರ್ಶಿ ಮೊಹಮ್ಮದ್ ಮುಸ್ತಪಾ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮುಖಂಡ ಅಬ್ದುಲ್ ಗಪೂರ್, ನಗರ ಸಭಾ ಸದಸ್ಯರುಗಳಾದ ಅಮೀನ್ ಮೊಹ್ಸಿನ್ ಹಾಗೂ ಮನ್ಸೂರ್, ದಲಿತಪರ ಹೋರಾಟಗಾರ ನಿರ್ವಾಣಪ್ಪ, ಲಕ್ಷ್ಮಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.