ಯುವಜನತೆ ನಿಷ್ಠೆ, ಛಲದೊಂದಿಗೆ ನಿರಂತರವಾಗಿ ಪ್ರಯತ್ನಿಸಿದರೆ ಜೀವನದಲ್ಲಿ ಗೆಲುವು ಸಾಧಿಸಬಹುದು. ಆದರೆ ಗುರಿ ತಲುಪಲು ತಾಳ್ಮೆ ಮತ್ತು ಬದ್ಧತೆ ಮುಖ್ಯವಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅಭಿಪ್ರಾಯಪಟ್ಟರು.
ಬೀದರ್ ತಾಲೂಕಿನ ಘೋಡಂಪಳ್ಳಿ ಗ್ರಾಮದ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 2023-24ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ವಿದ್ಯಾರ್ಥಿಗಳ ಅಭ್ಯಾಸದ ಕುರಿತು ಚರ್ಚಿಸಿ, ಅಹವಾಲು ಸ್ವೀಕರಿಸಿ ಮಾತನಾಡಿದರು.
“ಎಲ್ಲಿ ಗುರಿ ಇದೆಯೋ ಅಲ್ಲಿ ಸುಲಭವಾಗಿ ಉನ್ನತಿ ಸಾಧ್ಯ ಎಂಬ ಮಾತಿದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ʼಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿʼ ಎಂಬ ಸಾಲುಗಳು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುತ್ತವೆ. ಶ್ರದ್ಧೆ, ಆತ್ಮವಿಶ್ವಾಸ, ಪರಿಶ್ರಮ ಮತ್ತು ನಿಶ್ಚಿತ ಗುರಿಯಿದ್ದಲ್ಲಿ ಮಾತ್ರವೇ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ” ಎಂದರು.
“ವಿದ್ಯಾರ್ಥಿಗಳಿಗೆ ಹೊಸ ಸವಾಲು, ಕಷ್ಟ-ನಷ್ಟಗಳು ಎದುರಾಗುವುದು ಸಹಜ. ಆದರೆ ಮಾಡುವ ಕೆಲಸದಲ್ಲಿ ಶ್ರದ್ಧೆ, ಗುರಿ, ನಿಷ್ಠೆಯಿದ್ದರೆ ಎಲ್ಲವೂ ಮೆಟ್ಟಿನಿಲ್ಲಬಹುದು. ನಿಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಸಾಧನೆಗೈದು ಪ್ರಸಿದ್ಧಿ ಪಡೆಯಬೇಕು. ಈ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಸಮಸ್ಯೆಗಳು ಬಗೆಹರಿಸಲಾಗುವುದು ಎಂದು ಭರವಸೆ” ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ಗಣತಿ ವಿರೋಧ- ಅಂದು ಅಪ್ಪ, ಇಂದು ಮಗ
ಈ ಸಂದರ್ಭದಲ್ಲಿ ಪರಿಶಿಷ್ಟ ಪಂಗಡ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಪ್ರೇಮಸಾಗರ ದಾಂಡೇಕರ, ಗ್ರಾಪಂ ಅಧ್ಯಕ್ಷೆ ಪುಲಮ್ಮ ಸುಮಂತ, ಉಪಾಧ್ಯಕ್ಷ ನರಸಪ್ಪ, ಪ್ರಾಂಶುಪಾಲ ಪ್ರೊ. ದೇವಿದಾಸ ತುಮಕುಂಟೆ ಉಪನ್ಯಾಸಕರಾದ ಪ್ರೊ, ವೇದ ಪ್ರಕಾಶ್ ಆರ್ಯ, ಪ್ರೊ ಸಚ್ಚಿದಾನಂದ್ ರುಮ್ಮಾ, ಪ್ರೊ ಅಂಜಲಿ,ಪ್ರೊ ಸಂತೋಷ್ ಕುಮಾರ್, ಪ್ರೊ, ಭಾಗ್ಯವಂತಿ ಸೇರಿದಂತೆ ಗ್ರಾಮಸ್ಥರು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.