ಅಪಾಯಕಾರಿ ಗುಹೆಯೊಂದರಲ್ಲಿ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತದ್ದ ರಷ್ಯಾದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬಳಿಯ ರಾಮತೀರ್ಥ ಬೆಟ್ಟದ ಗುಹೆಯಲ್ಲಿದ್ದ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಗೋಕರ್ಣ ಪೊಲೀಸರು ತಿಳಿಸಿದ್ದಾರೆ.
ಜುಲೈ 9 ರಂದು ಸಂಜೆ 5:00 ಗಂಟೆ ಸುಮಾರಿಗೆ ಗೋಕರ್ಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀಧರ್ ಎಸ್‌ಆರ್ ಮತ್ತು ಅವರ ತಂಡವು ಪ್ರವಾಸಿಗರ ಸುರಕ್ಷತೆಯನ್ನು ಹಿತದೃಷ್ಟಿಯಿಂದ ರಾಮತೀರ್ಥ ಬೆಟ್ಟದ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಅವರು ಪತ್ತೆಯಾಗಿದ್ದಾರೆ. ಮಹಿಳೆಯನ್ನು ಗಮನಿಸಿದ ಪೊಲೀಸರು ಕಾಡಿನಲ್ಲಿ ಶೋಧ ನಡೆಸಿದಾಗ, ಮಹಿಳೆಯು ಅಪಾಯಕಾರಿ, ಭೂಕುಸಿತ ಪೀಡಿತ ವಲಯದಲ್ಲಿರುವ ಗುಹೆಯಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.
ರಕ್ಷಿಸಲಾದ ಮೂವರನ್ನು ರಷ್ಯಾ ಮೂಲದ ಮಹಿಳೆ ನೀನಾ ಕುಟಿನಾ (40 ವರ್ಷ) ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳಾದ ಪ್ರೇಮಾ (6 ವರ್ಷ), ಅಮಾ (4 ವರ್ಷ) ಎಂದು ಹೆಸರಿಸಲಾಗಿದೆ.
ಆಕೆಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, “ತಾನು ಗೋವಾದಿಂದ ಗೋಕರ್ಣಕ್ಕೆ ಆಧ್ಯಾತ್ಮಿಕ ಏಕಾಂತತೆಗೆ ಬಂದಿದ್ದೇನೆ. ನಗರ ಜೀವನದ ಜಂಜಾಟದಿಂದ ದೂರವಿದ್ದು, ಧ್ಯಾನ ಮತ್ತು ಪ್ರಾರ್ಥನೆಯಲ್ಲಿ ತೊಡಗಲು ಅರಣ್ಯ ಗುಹೆಯಲ್ಲಿ ವಾಸಿಸಲು ನಿರ್ಧರಿಸಿದ್ದೆ” ಎಂದು ನೀನಾ ಹೇಳಿಕೊಂಡಿದ್ದಾರೆ.
ಆಕೆಯ ಉದ್ದೇಶವು ಆಧ್ಯಾತ್ಮಿಕವೇ ಆಗಿದ್ದರೂ, ಅಂತಹ ವಾತಾವರಣವು ಮಕ್ಕಳಿಗೆ ಸುರಕ್ಷತವಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಹೆ ಇರುವ ರಾಮತೀರ್ಥ ಬೆಟ್ಟದಲ್ಲಿ 2024ರ ಜುಲೈನಲ್ಲಿ ದೊಡ್ಡ ಭೂಕುಸಿತವಾಗಿತ್ತು. ಈ ಪ್ರದೇಶವು ವಿಷಪೂರಿತ ಹಾವುಗಳು ಸೇರಿದಂತೆ ಅಪಾಯಕಾರಿ ವನ್ಯಜೀವಿಗಳ ನೆಲೆಯಾಗಿದೆ. ಇದು ಅಪಾಯಕಾರಿ ಸ್ಥಳವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?:ʼಗುಜರಾತ್ ಮಾಡೆಲ್ʼ : ಸುಳ್ಳಿನ ಸೌಧ ಕುಸಿಯುತ್ತಿದೆ, ಬಿಜೆಪಿ ಬೆತ್ತಲಾಗುತ್ತಿದೆ!
ಆ ಪ್ರದೇಶದ ಅಪಾಯಗಳ ಕುರಿತು ಮಹಿಳೆಗೆ ತಿಳಿಸಿದ ಬಳಿಕ, ಆಕೆ ಆ ಪ್ರದೇಶದಿಂದ ಹೊರಬಂದಿದ್ದಾರೆ. ಆಕೆಗೆ ಕುಮಟಾ ತಾಲೂಕಿನ ಬಂಕಿಕೋಡ್ಲಾ ಗ್ರಾಮದಲ್ಲಿ ಮಹಿಳಾ ಸನ್ಯಾಸಿ ಸ್ವಾಮಿ ಯೋಗರತ್ನ ಸರಸ್ವತಿ ನಡೆಸುತ್ತಿದ್ದ ಆಶ್ರಮದಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಹಿಳೆ ಮತ್ತು ಅವರ ಇಬ್ಬರು ಮಕ್ಕಳನ್ನು ರಷ್ಯಾಕ್ಕೆ ಮರಳಿ ಕಳಿಸಲು ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (FRRO) ಜೊತೆ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಅಧಿಕೃತ ಪತ್ರವ್ಯವಹಾರ ನಡೆಸುತ್ತಿದ್ದಾರೆ. ಶೀಘ್ರವೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.