ಪುಸ್ತಕಗಳು ಜ್ಞಾನದ ದಿಗಂತವನ್ನು ವಿಸ್ತರಿಸುತ್ತವೆ. ತನ್ಮಯತೆಯಿಂದ ಪುಸ್ತಕ ಓದಿದರೆ ಮಾನವನಿಗೆ ವಿಶ್ವಮಾನವನ್ನಾಗಿಸುತ್ತವೆ. ಉತ್ತಮ ಪುಸ್ತಕಗಳು ಮನುಷ್ಯನ ನಿಜವಾದ ಸಂಗಾತಿಗಳು ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ನುಡಿದರು.
ಮಂಗಳವಾರ ಬೀದರ ವಿಶ್ವವಿದ್ಯಾಲಯದಲ್ಲಿ ಇದಾರ-ಎ-ಅದಬ್-ಎ-ಇಸ್ಲಾಮಿ-ಹಿಂದ್ ಕರ್ನಾಟಕ ಘಟಕದ ವತಿಯಿಂದ ಪ್ರಕಟವಾದ ಮೊಹಮ್ಮದ್ ಯುಸೂಫ್ ರಹೀಂ ಬಿದರಿ ಅವರ ವಿರಚಿತ ʼತಂಜ್ಹಿಮ್ ಸಾಝಿʼ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ʼಇಂದಿನ ಆಧುನಿಕ ಯುಗದಲ್ಲಿ ಪುಸ್ತಕಗಳ ಅಧ್ಯಯನದ ಅವಶ್ಯಕತೆಯಿದೆ. ತಂಜ್ಹಿಮ್ ಸಾಝಿ ಕೃತಿಯು ಒಂದು ಸಂಘಟನೆಯ ರಚನೆಯಾಗಿದೆ. ಸಂಘಟನೆ ಮಾಡಬೇಕಾದ ಕೆಲಸ ಹಾಗೂ ಅದರ ಸಾಮಾಜಿಕ ಜವಾಬ್ದಾರಿ, ಕುರಾನ್, ಹದೀಸ್ ಹಾಗೂ ಪ್ರವಾದಿ ಪೈಗಂಬರ್ ಅವರ ತತ್ವ ನಿಲುವಿನ ಬಗ್ಗೆ ಈ ಕೃತಿ ತಿಳಿಸುತ್ತದೆʼ ಎಂದರು.
ʼಕೃತಿಯ ಲೇಖಕ ಮೊಹಮದ್ ಯುಸೂಫ್ ರಹೀಂ ಬಿದರಿ ಅವರು ಗಹನವಾದ ಅಧ್ಯಯನ ನಡೆಸಿ ಪ್ರಸಕ್ತ ಸಮಯದಲ್ಲಿ ಸಾಹಿತ್ಯ ಹಾಗೂ ಸಂಘಟನೆ ಕಟ್ಟವ ರೀತಿ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ. ಇದು ಕೇವಲ ಒಂದು ಭಾಷೆ, ಧರ್ಮ, ಮತ, ಪಂಥಕ್ಕೆ ಸೀಮಿತವಾಗಿರದೆ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸಂಘಟನೆಗಳ ಕಾರ್ಯವೈಖರಿ ಬಗ್ಗೆ ತಿಳಿಸುತ್ತದೆʼ ಎಂದರು.
ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಮಗ ಮೃತಪಟ್ಟಿರುವುದು ತಿಳಿಯದೆ 4 ದಿನ ಶವದೊಂದಿಗೆ ಕಳೆದ ಅಂಧ ದಂಪತಿ!
ಕಾರ್ಯಕ್ರಮದಲ್ಲಿ ಇದಾರ-ಎ-ಅದಬ್-ಎ-ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಫಯಾಜ್ ಖುರೇಶಿ, ಇದಾರ-ಎ-ಅದಬ್-ಎ-ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಕಾರ್ಯದರ್ಶಿ ಅಬ್ದುಲ್ ಖದೀರ್, ಲೇಖಕರು ಹಾಗೂ ಇದಾರ-ಎ-ಅದಬ್-ಎ-ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಉಪಾಧ್ಯಕ್ಷ ಮೊಹಮದ್ ಯುಸುಫ್ ರಹೀಂ ಬಿದರಿ, ಜಮಾಅತೆ ಇಸ್ಲಾಮಿ ಹಿಂದ್ ಬೀದರ ನಗರ ಘಟಕದ ಅಧ್ಯಕ್ಷಮೊಹಮ್ಮದ್ ಮುಅಜ್ಜಮ್, ಇದಾರ-ಎ-ಅದಬ್-ಎ-ಇಸ್ಲಾಮಿ ಹಿಂದ್ ಬೀದರ ಘಟಕದ ಕಾರ್ಯದರ್ಶಿ ಅಸ್ಲಂ ಪಾಷಾ ಖಾದ್ರಿ, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಹಾಗೂ ಟೀಮ್ ಯುವಾ ಸಂಸ್ಥೆ ಸಂಯೋಜಕ ವಿನಯಕುಮಾರ ಮಾಳಗೆ, ಟೀಮ್ ಯುವಾ ಸಂಸ್ಥೆಯ ಹರ್ಷವರ್ಧನ್ ರಾಠೋಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.