ಗೌರಿಬಿದನೂರು ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಸೆ.9 ಸೋಮವಾರ ಉಪವಿಭಾಗಾಧಿಕಾರಿ ಅಶ್ವಿನ್ ರವರ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಗೌರಿಬಿದನೂರು ನಗರಸಭೆ ಪಕ್ಷೇತರರ ಪಾಲಾಯಿತು. ನೂತನ ಅಧ್ಯಕ್ಷರಾಗಿ ಪಕ್ಷೇತರ ಸದಸ್ಯ ಲಕ್ಷ್ಮಿನಾರಾಯಣಪ್ಪ ಮತ್ತು ಉಪಾಧ್ಯಕ್ಷರಾಗಿ ಫಜ್ಲುಲ್ಲಾ ಫೀರ್ (ಫರೀದ್) ಆಯ್ಕೆಯಾಗಿದ್ದಾರೆ.
ಗೌರಿಬಿದನೂರು ನಗರಸಭೆಯಲ್ಲಿ ಒಟ್ಟು 31 ಸದಸ್ಯರ ಬಲವಿದ್ದು, ಅದರಲ್ಲಿ ಕಾಂಗ್ರೆಸ್ 15, ಜೆಡಿಎಸ್ 6, ಬಿಜೆಪಿ 3 ಉಳಿದಂತೆ 7 ಮಂದಿ ಪಕ್ಷೇತರ ಸದಸ್ಯರಿದ್ದರು. ಚುನಾವಣಾ ಕಣದಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಸಕ್ರೀಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಗೆ ಮಾಜಿ ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹಾಗೂ ಪಕ್ಷೇತರ ಅಭ್ಯರ್ಥಿಗೆ ಹಾಲಿ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬೆನ್ನೆಲುಬಾಗಿ ನಿಂತಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಕೆ.ಎಚ್.ಪುಟ್ಟಸ್ವಾಮಿಗೌಡ ರ ಬೆಂಬಲಿತವಾಗಿ 28 ನೇ ವಾರ್ಡಿನ ಪಕ್ಷೇತರ ಸದಸ್ಯ ಲಕ್ಷ್ಮಿನಾರಾಯಣಪ್ಪ ಹಾಗೂ ಎನ್.ಎಚ್.ಶಿವಶಂಕರರೆಡ್ಡಿ ರವರ ಬೆಂಬಲಿತವಾಗಿ 29 ನೇ ವಾರ್ಡಿನ ಸುಬ್ಬರಾಜು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ 15 ನೇ ವಾರ್ಡಿನ ಫಜ್ಲುಲ್ಲಾ ಫೀರ್ (ಫರೀದ್) ಮತ್ತು 12 ನೇ ವಾರ್ಡಿನ ವಿ.ಅಮರನಾಥ್
ನಾಮಪತ್ರ ಸಲ್ಲಿಸಿದ್ದರು.

ಚುನಾವಣೆ ವೇಳೆಗೆ 31 ಸದಸ್ಯರಲ್ಲಿ 29 ಮಂದಿ ಮಾತ್ರ ಹಾಜರಿದ್ದರು, ಉಳಿದಂತೆ ಬಿಜೆಪಿ ಬೆಂಬಲಿತ ಸದಸ್ಯೆ ಪುಣ್ಯವತಿಜಯಣ್ಣ ಮತ್ತು ಜೆಡಿಎಸ್ ಬೆಂಬಲಿತ ಸದಸ್ಯೆ ಸುಬ್ಬಮ್ಮ ಗೈರಾಗಿದ್ದರು. ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಸೇರಿದಂತೆ ಒಟ್ಟು 30 ಮಂದಿ ಮತದಾರರು ಮಾತ್ರ ಚುನಾವಣಾ ಅಧಿಕಾರಿಯ ಮುಂದೆ ಹಾಜರಿದ್ದರು.
ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಲಕ್ಷ್ಮಿನಾರಾಯಣಪ್ಪ ರಿಗೆ ಪಕ್ಷೇತರರು, ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಸೇರಿದಂತೆ ಒಟ್ಟು 17 ಮಂದಿ ಬೆಂಬಲ ಸೂಚಿಸಿದರು. ಕಾಂಗ್ರೆಸ್ ಅಭ್ಯರ್ಥಿ ಸುಬ್ಬರಾಜು ಗೆ ಕಾಂಗ್ರೆಸ್ ನ 13 ಸದಸ್ಯರು ಮಾತ್ರ ಬೆಂಬಲ ಸೂಚಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಫಜ್ಲುಲ್ಲಾ ಫೀರ್ ಗೆ 16 ಮತ್ತು ಕಾಂಗ್ರೆಸ್ ಅಭ್ಯರ್ಥಿ ವಿ.ಅಮರನಾಥ್ ಗೆ 13 ಮಂದಿ ಒಮ್ಮತದ ಸಹಕಾರ ನೀಡಿದ್ದಾರೆ. ಬಿಜೆಪಿ ಬೆಂಬಲಿತ ಸದಸ್ಯರಾದ ಮಾರ್ಕೆಟ್ ಮೋಹನ್ ತಮ್ಮ ಬೆಂಬಲವನ್ನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿಗೆ ಮಾತ್ರ ಸೂಚಿಸಿದ್ದು, ಪಕ್ಷೇತರ ಉಪಾಧ್ಯಕ್ಷರಿಗೆ ಬೆಂಬಲ ಸೂಚಿಸಲಿಲ್ಲ. ಅಂತಿಮವಾಗಿ ಹೆಚ್ಚು ಮತಗಳನ್ನು ಪಡೆದಿದ್ದ ಪಕ್ಷೇತರ ಅಭ್ಯರ್ಥಿಗಳಾದ ಲಕ್ಷ್ಮಿನಾರಾಯಣಪ್ಪ ರನ್ನು ಅಧ್ಯಕ್ಷರನ್ನಾಗಿ ಮತ್ತು ಫಜ್ಲುಲ್ಲಾ ಫೀರ್ ರನ್ನು ಉಪಾಧ್ಯಕ್ಷರನ್ನಾಗಿ ಚುನಾವಣಾಧಿಕಾರಿಗಳು ಘೋಷಣೆ ಮಾಡಿದ್ದಾರೆ.
ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ರ ಬೆಂಬಲಿತ ಕಾರ್ಯಕರ್ತರು ಮತ್ತು ಮುಖಂಡರು ನಗರಸಭೆಯ ಮುಂಭಾಗದ ಎಂ.ಜಿ ವೃತ್ತದಲ್ಲಿ ಪಟಾಕಿಗಳನ್ನು ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.
ತಮ್ಮ ನೆಚ್ಚಿನ ಶಾಸಕರು ಹೊರಬರುತ್ತಿದ್ದಂತೆ ಪುಷ್ಪಮಾಲೆಗಳನ್ನು ಹಾಕಿ ಜೈಕಾರ ಕೂಗುತ್ತಾ ಕೆಎಚ್ ಪಿ ಬಾವುಟಗಳನ್ನು ರಾರಾಜಿಸಿ ಸಂಭ್ರಮಿಸಿದರು. ಈ ಬಾರಿಯ ನಗರಸಭೆ ಚುನಾವಣೆಯು ಕಾಂಗ್ರೆಸ್ ಬೆಂಬಲಿತ ಮುಖಂಡರಿಗೆ ಮುಖಭಂಗವಾಗಿದ್ದು, ಮತ್ತೊಮ್ಮೆ ಅಧಿಕಾರ ಕೈ ಪಾಳಯದಿಂದ ದೂರಸರಿದಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಬಾಹ್ಯ ಬೆಂಬಲಿತ ಹಾಲಿ ಮತ್ತು ಆಂತರಿಕ ಬೆಂಬಲಿತ ಮಾಜಿ ಶಾಸಕರಿದ್ದರೂ ಕೂಡ ಇಬ್ಬರು ಕಾಂಗ್ರೆಸ್ ಸದಸ್ಯರುಗಳಿಗೆ ಆಮಿಷವೊಡ್ಡಿ ಪಕ್ಷ ವಿರುದ್ಧ ಬೆಂಬಲ ಘೋಷಿಸಲು ಸಹಕಾರಿಯಾಗಿದ್ದಾರೆ. ಇದರಿಂದ ನಗರಸಭೆ ಅಧಿಕಾರವು ಪಕ್ಷೇತರರ ಪಾಲಾಗಿರುವ ಬಗ್ಗೆ ನಾಗರೀಕ ವಲಯದಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ.

ಸಂಸದ ಡಾ.ಕೆ.ಸುಧಾಕರ್ ಗೈರು: ಗೌರಿಬಿದನೂರು ನಗರಸಭೆಯಲ್ಲಿ ಬಿಜೆಪಿ ಬೆಂಬಲಿತ 3, ಜೆಡಿಎಸ್ ಬೆಂಬಲಿತ 6 ಮತ್ತು ಓರ್ವ ಬಿಜೆಪಿ ಸಂಸದ ಸೇರಿದಂತೆ ಒಟ್ಟು 10 ಮಂದಿ ಮೈತ್ರಿ ಸದಸ್ಯರಿದ್ದರು. ಆದರೆ ಸೋಮವಾರ ನಡೆದ ನಗರಸಭೆ ಚುನಾವಣೆಗೆ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ರವರು ಗೈರಾಗಿದ್ದರು. ಇದರಿಂದಾಗಿ ಮೈತ್ರಿ ಬೆಂಬಲಿತ ಸದಸ್ಯರು ಪಕ್ಷೇತರ ಅಭ್ಯರ್ಥಿಗಳಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.
ನಗರಸಭೆಗೆ ಪೊಲೀಸ್ ಸರ್ಪಗಾವಲು : ಸೋಮವಾರ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಚುನಾವಣಾ ಪ್ರಕ್ರಿಯೆ ನಡೆಯುವ ಕಾರಣ ಬೆಳಿಗ್ಗೆ 11 ಗಂಟೆಯಿಂದಲೇ ನಗರಸಭೆಯ ಸುತ್ತಲೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸರ್ವಗಾವಲನ್ನು ನಿಯೋಜನೆ ಮಾಡಿತ್ತು. ಚುನಾವಣೆಯಲ್ಲಿ ಮತಚಲಾವಣೆಗೆ ಬಂದ ನಗರಸಭೆ ಸದಸ್ಯರು ಮತ್ತು ಸ್ಥಳೀಯ ಶಾಸಕರಿಗೆ ಸೂಕ್ತ ಬಂದೋಬಸ್ತು ವ್ಯವಸ್ಥೆ ಮಾಡಿದ್ದರು.
ಮಗನ ಮಿಸ್ಸಿಂಗ್ ದೂರು ನೀಡಿದ ತಂದೆ : ನಗರಸಭೆ ವ್ಯಾಪ್ತಿಯ 22 ನೇ ವಾರ್ಡಿನ ಸದಸ್ಯ ಗಿರೀಶ್ ಕಳೆದ ಎರಡು ದಿನಗಳಿಂದ ಕಾಣೆಯಾಗಿರುವ ಬಗ್ಗೆ ಅವರ ತಂದೆ ಬಲರಾಂ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ನಗರಸಭೆ ಚುನಾವಣೆಯ ಪ್ರಯುಕ್ತ ವಿರೋಧಿ ಪಾಳಯದ ನಾಯಕರು ತಮ್ಮ ಮಗ, ನಗರಸಭೆ ಸದಸ್ಯ ಗಿರೀಶ್ ರನ್ನು ಅಪಹರಿಸಿರಬಹುದು ಎಂಬುದಾಗಿ ಬಲರಾಂ ತಿಳಿಸಿದ್ದಾರೆ.
ವಲಸಿಗರಿಗೆ ಮನ್ನಣೆ ನೀಡಿದ ಕ್ಷೇತ್ರದ ಜನತೆ : ಗೌರಿಬಿದನೂರು ವಿಧಾನಸಭೆ ಕ್ಷೇತ್ರದ ಜನತೆ ಕಳೆದ 5-6 ದಶಕಗಳ ರಾಜಕಾರಣದಲ್ಲಿ 1985 ರಲ್ಲಿ ಹೊರಗಿನಿಂದ ಕ್ಷೇತ್ರಕ್ಕೆ ಬಂದಿದ್ದ ಚಿತ್ರನಟ ಮುಖ್ಯಮಂತ್ರಿ ಚಂದ್ರುಗೆ ಅಧಿಕಾರ ನೀಡಿದ್ದರು. ನಂತರದ ದಿನಗಳಲ್ಲಿ 2023 ರ ವಿಧಾನಸಭೆ ಚುನಾವಣೆಯಲ್ಲಿ ಹೊರಗಿನಿಂದ ವಾಣಿಜ್ಯೋದ್ಯಮಕ್ಕಾಗಿ ಕ್ಷೇತ್ರಕ್ಕೆ ಆಗಮಿಸಿದ್ದ ‘ಲಕ್ಷ್ಮೀಪುತ್ರ’, ಕೋಟಿ ಕುಳವಾಗಿದ್ದ ಕೆ.ಎಚ್.ಪುಟ್ಟಸ್ವಾಮಿಗೌಡರಿಗೆ ಅತ್ಯಧಿಕ ಮತಗಳನ್ನು ನೀಡುವ ಮೂಲಕ ಶಾಸಕರನ್ನಾಗಿ ಮಾಡಿ ಅಧಿಕಾರ ನೀಡಿದ್ದರು. ಇದೀಗ ಮತ್ತೆ ವರಸೆ ಮರುಕಳಿಸಿದ್ದು ದಶಕದ ಹಿಂದೆ ನೆರೆಯ ಆಂದ್ರಪ್ರದೇಶದ ಪೆನುಗೊಂಡದಿಂದ ಉದ್ಯೋಗ ಹರಸಿ ಬಂದಿದ್ದ ಲಕ್ಷ್ಮಿನಾರಾಯಣಪ್ಪ ರಿಗೆ 28 ನೇ ವಾರ್ಡ್ ನ ಜನತೆ ನಗರಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯನ್ನಾಗಿ ಗೆಲ್ಲಿಸಿದ್ದರು. ಇದೀಗ 16 ಮಂದಿ ಸದಸ್ಯರು ಮತ್ತು ಓರ್ವ ಪಕ್ಷೇತರ ಶಾಸಕರ ಬೆಂಬಲ ಪಡೆದು ನಗರಸಭೆಯ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಪಡೆದಿದ್ದಾರೆ. ಕ್ಷೇತ್ರದ ಜನತೆ ಸ್ಥಳೀಯರಲ್ಲದೆ ವಲಸಿಗರಿಗೂ ಮನ್ನಣೆ ನೀಡಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ ಎನ್ನುತ್ತಾರೆ ಪ್ರಜ್ಞಾವಂತ ನಾಗರೀಕರು.
ಸೋಲಿನ ಕಹಿ ನೆನಪಿನಲ್ಲಿ ಮಾಜಿ ಶಾಸಕರು: 2023 ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಚ್.ಪುಟ್ಟಸ್ವಾಮಿಗೌಡ ರವರ ಎದುರು ಸೋಲನ್ನು ಕಂಡ ಎನ್.ಎಚ್.ಶಿವಶಂಕರರೆಡ್ಡಿ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ‘ಮಾಜಿ’ ಎಂಬ ಬಿರುದು ಪಡೆದರು. ಬಳಿಕ ಪಕ್ಷವನ್ನು ಸಂಘಟನೆ ಮಾಡುವಲ್ಲಿ ಸಾಕಷ್ಟು ಶ್ರಮಿಸುತ್ತಿದ್ದರೂ ಕೂಡ ಪ್ರಯತ್ನಗಳು ಸಾಕಾರಗೊಳ್ಳುತ್ತಿಲ್ಲ. 2024 ರಲ್ಲಿ ಲೋಕಸಭೆ ಗೆ ಆಕಾಂಕ್ಷಿಯಾಗಿದ್ದರು, ಆದರೆ ಹೈಕಮಾಂಡ್ ಟಿಕೆಟ್ ನೀಡಲಿಲ್ಲ, ಟಿಕೆಟ್ ಗಿಟ್ಟಿಸಿಕೊಂಡಿದ್ದ ರಕ್ಷಾರಾಮಯ್ಯ ರನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾದರು. ಇದೀಗ ನಗರಸಭೆಯ ಎರಡನೇ ಅವಧಿಗೆ ಕಾಂಗ್ರೆಸ್ ಬೆಂಬಲಿತ 15 ಮಂದಿ ಸದಸ್ಯರು ಮತ್ತು ಓರ್ವ ಕಾಂಗ್ರೆಸ್ ಬೆಂಬಲಿತ ಶಾಸಕರಿದ್ದರೂ ಕೂಡ ನಗರಸಭೆ ಅಧಿಕಾರವು ಕೈ ತಪ್ಪಿ ಪಕ್ಷೇತರರ ಪಾಲಾಗಿದೆ. ಇದರಿಂದಾಗಿ ಮತ್ತೊಂದು ಹಿನ್ನಡೆಯಾದಂತಿದೆ. ಶೀಘ್ರದಲ್ಲೇ ಎದುರಾಗುವ ನಗರ ಯೋಜನಾಪ್ರಾಧೀಕಾರವು ರಾಜಕೀಯವಾಗಿ ಮತ್ತೊಂದು ಸವಾಲಾಗಿದೆ. ಇದನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಅಧಿಕಾರ ಕೊಡಿಸದಿದ್ದಲ್ಲಿ ರಾಜಕೀಯವಾಗಿ ಶನಿದೆಸೆ ಆರಂಭವಾಗಿದೆ ಎಂಬ ಎಲ್ಲ ಸೂಚನೆಗಳು ಕಾಣುತ್ತವೆ. ಪಕ್ಷದಲ್ಲಿನ ನಿಷ್ಟಾವಂತ ಕಾರ್ಯದರ್ಶರ ಅತೃಪ್ತಿಗೆ ಕಾರಣವಾಗುತ್ತದೆ ಎನ್ನುತ್ತಾರೆ ನಾಗರೀಕರು.
(ವರದಿ: ಜಗನ್ನಾಥ್.ಎ.ಎಸ್. ಆರ್ಕುಂದ, ಗೌರಿಬಿದನೂರು)