ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ರಸ್ತೆ ಗುಂಡಿಗಳದ್ದೇ ಹಾವಳಿ ಹೆಚ್ಚಾಗಿದೆ. ಗುಂಡಿಗಳಿಲ್ಲದ ರಸ್ತೆಗಳಿಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಗುಂಡಿಗಳ ವಿರುದ್ಧ ಹಲವರು ನಾನಾ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದೀಗ, ರಸ್ತೆಯೊಂದರಲ್ಲಿ, ‘ಎಚ್ಚರಿಕೆ… ನಿಧಿ ಹುಡುಕಲು ರಸ್ತೆಯಲ್ಲಿ ಗುಂಡಿ ತೋಡಿದೆ ಸರ್ಕಾರ’ ಎಂಬ ಬರಹವುಳ್ಳ ಬ್ಯಾನರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ಮತ್ತು ಕೈಕಂಬದ ನಡುವಿನ ರಸ್ತೆಯಲ್ಲಿ ರಸ್ತೆಗುಂಡಿಗಳೇ ಹೆಚ್ಚಾಗಿದ್ದು, ವಾಹನ ಸವಾರರು ವಾಹನ ಚಲಾಯಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಹಲವು ಬಾರಿ ಒತ್ತಾಯಿಸಿದರೂ ಯಾವುದೇ ಪ್ರಯೋಜವಾಗಿಲ್ಲ ಎಂಬ ಆರೋಪಗಳೂ ಇವೆ.
ಈ ಹಿನ್ನೆಲೆಯಲ್ಲಿ, ಬೇಸತ್ತ ಸ್ಥಳೀಯರು, “ಎಚ್ಚರಿಕೆಯ ಫಲಕ; ಯಾರೋ ಮಾಂತ್ರಿಕರು ಕೈಕಂಬದಿಂದ-ಕುಕ್ಕೆ ಸುಬ್ರಮಣ್ಯವರೆಗಿನ ರಸ್ತೆಯಲ್ಲಿ ನಿಧಿ ಇದೆ ಎಂದು ಹೇಳಿದ ಕಾರಣ ಎಚ್ಚೆತ್ತ ರಾಜ್ಯ ಸರ್ಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕಿಸುವ ಕಾರಣದಿಂದ ಅಲ್ಲಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಹೊಂಡಗಳನ್ನು ತೋಡಿಸಿ ಹಾಗೆಯೇ ಬಿಟ್ಟಿದ್ದಾರೆ, ಹಾಗಾಗಿ ನಿಧಾನವಾಗಿ ಚಲಿಸಿ” ಎಂದು ಬರೆದಿರುವ ಬ್ಯಾನರ್‌ವೊಂದನ್ನು ರಸ್ತೆ ಬದಿಯಲ್ಲಿ ಹಾಕಿದ್ದಾರೆ.
ಆ ಬ್ಯಾನರ್‌ನ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವರು ಪೋಸ್ಟ್ ಕಮೆಂಟ್ ಮಾಡಿದ್ದು, ʼನಿಧಿ ಇದ್ದರೂ ಇರಬಹುದುʼ ಎಂದು ಗೇಲಿ ಮಾಡಿದ್ದಾರೆ.