ಕರ್ನಾಕದಲ್ಲಿ ಕೆಲವೇ ಕೆಲವು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿವೆ. ರಾಜ್ಯದಲ್ಲಿರುವ 17 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಗದಗ ಜಿಲ್ಲೆಯ ನರಗುಂದ ಪಟ್ಟಣದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕೂಡ ಒಂದು. ಆದರೆ, ಕಾಲೇಜು ಸುಸಜ್ಜಿತ ಕಟ್ಟಡ, ಮೂಲಭೂತ ಸೌಕರ್ಯಗಳು ಹಾಗೂ ಆಟದ ಮೈದಾನಗಳಿಲ್ಲದೆ ಆರಂಭದಲ್ಲೇ ಸೊರಗುತ್ತಿದೆ.
ನರಗುಂದ ಪಟ್ಟಣದಿಂದ 3 ಕಿ.ಮೀ ದೂರದಲ್ಲಿರುವ ಇಂಜಿನಿಯರಿಂಗ್ ಕಾಲೇಜು 2022ರಲ್ಲಿ ಉದ್ಘಾಟನೆಗೊಂಡಿತ್ತು. 2023ರ ಶೈಕ್ಷಣಿಕ ವರ್ಷದಿಂದ ತರಗತಿಗಳು ಆರಂಭವಾಗಿದ್ದವು. ಮೊದಲ ಶೈಕ್ಷಣಿಕ ವರ್ಷದಲ್ಲಿ ಎರಡು ಕೋರ್ಸ್ ಆರಂಭವಾಗಿದ್ದು, 2024ರ ಶೈಕ್ಷಣಿಕ ವರ್ಷದಿಂದ ಮತ್ತೆರಡು ಕೋರ್ಸುಗಳು ಆರಂಭವಾಗಿವೆ. ಈ ನಾಲ್ಕು ಕೋರ್ಸುಗಳಲ್ಲಿ ಒಟ್ಟು 230 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಆರಂಭದಲ್ಲಿ, ದೆಹಲಿಯ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ಸಂಸ್ಥೆಯ (ಎಐಸಿಟಿಇ) ಅನುಮತಿಯೊಂದಿಗೆ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಹಾಗೂ ಆರ್ಟಿಫಿಷಿಯಲ್ ಇಂಟಲಿಜನ್ಸ್ ಆಂಡ್ ಡಾಟಾ ಸೈನ್ಸ್ ಎರಡು ಕೋರ್ಸುಗಳು ಆರಂಭಗೊಂಡಿದ್ದವು. ತಲಾ ಕೋರ್ಸುಗಳಲ್ಲಿ 60 ವಿದ್ಯಾರ್ಥಿಗಳು ಪ್ರವೇಶಕ್ಕೆ ಅವಕಾಶ ಪಡೆದಿದ್ದರು. 2024ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿನಲ್ಲಿ ಒಟ್ಟು 230 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಆದರೆ, ಇಷ್ಟು ಸಂಖ್ಯೆಯ ವಿದ್ಯಾರ್ಥಿಗಳಿದ್ದರೂ, ಕೇವಲ ಒಬ್ಬರು ಮಾತ್ರವೇ ಖಾಯಂ ಪ್ರಾಧ್ಯಾಪಕರಿದ್ದಾರೆ. ಅವರೇ ಪ್ರಾಂಶುಪಾಲರೂ ಆಗಿದ್ದಾರೆ. ಉಳಿದ ಎಲ್ಲ ಉಪನ್ಯಾಸಕರು ಅತಿಥಿ ಪ್ರಾಧ್ಯಾಪಕರಾಗಿದ್ದಾರೆ. ಈ 2024ನೇ ಶೈಕ್ಷಣಿಕ ವರ್ಷದಿಂದ ಎಐಸಿಟಿಇ ಸಂಸ್ಥೆಯಿಂದ ಇನ್ನೂ ಎರಡು ಕೋರ್ಸ್‌ಗಳು ಅನುಮತಿಯೊಂದಿಗೆ ಆರಂಭವಾಗಿವೆ. ಎಲೆಕ್ಟ್ರಾನಿಕ್ ಆಂಡ್ ಕಮಿನಿಕೇಶನ್ ಇಂಜಿನಿಯರಿಂಗ್ ಕೋರ್ಸಿನಲ್ಲಿ 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಇನ್ನೊಂದು, ಸಿವಿಲ್ ಇಂಜನೀಯರಿಂಗ್ ಕೋರ್ಸ್ ಆರಂಭವಾಗಿದ್ದು, 30 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವಿದೆ.
ಪಟ್ಟಣದಿಂದ ಕಾಲೇಜಿಗೆ ಹೋಗುವ ರಸ್ತೆ ದುಸ್ಥಿತಿಯಲ್ಲಿತ್ತು. ವಿದ್ಯಾರ್ಥಿಗಳಿಗೆ ನಡೆದುಕೊಂಡು ಹೋಗಲು ಕಷ್ಟವಾಗುತ್ತಿತ್ತು. ಈಗಿನ ನರಗುಂದ ಶಾಸಕ ಸಿ.ಸಿ ಪಾಟೀಲ್ ಅವರು ಹಿಂದೆ ಸಚಿವರಾಗಿದ್ದಾಗ ಕಾಲೇಜಿಗೆ ಹೋಗುವ ರಸ್ತೆಯನ್ನು ಕಾಂಕ್ರೀಟ್ ರಸ್ತೆ ಮಾಡಿಸಿದ್ದು, ಈಗ ವಿದ್ಯಾರ್ಥಿಗಳಿಗೆ ನಡೆದುಕೊಂಡು ಹೋಗಲು ಅನುಕೂಲವಾಗಿದೆ.
ಕಾಲೇಜಿನ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಅಗತ್ಯವಿದ್ದು, ಸದ್ಯ ಎರಡು ವಸತಿ ನಿಲಯದ ಕಟ್ಟಡಗಳಿವೆ. ತಲಾ ವಸತಿ ನಿಲಯದಲ್ಲಿ ಎಪ್ಪತ್ತೆರಡು ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಮಾತ್ರ ಅವಕಾಶವಿದೆ. ಹೀಗಾಗಿ, ಇನ್ನೂ ಎರಡು ಹಾಸ್ಟೆಲ್ ಕಟ್ಟಡಗಳ ಅಗತ್ಯವಿದೆ.
ಗ್ರಂಥಾಲಯಕ್ಕೆ ಹೆಚ್ಚಿನ ಪುಸ್ತಕಗಳು ಬೇಕಿದೆ: ಕಾಲೇಜಿನಲ್ಲಿ ಒಟ್ಟು ನಾಲ್ಕು ಕೋರ್ಸುಗಳು ಆರಂಭವಾಗಿದ್ದು, ಗ್ರಂಥಾಲಯದಲ್ಲಿ ಕೋರ್ಸುಗಳಿಗೆ ಅನುಗುಣವಾಗಿ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳ ಕೊರತೆ ಇದೆ. ಇನ್ನೂ ಹೆಚ್ಚು ಪುಸ್ತಕಗಳ ಅಗತ್ಯವಿದೆ.
ಸುಸಜ್ಜಿತ ಆಟದ ಮೈದಾನ ಬೇಕಿದೆ: 24 ಎಕರೆ ಭೂಮಿ ಬೃಹತ್ ಕಟ್ಟಡ ಹೊದಿರುವ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸುಸಜ್ಜಿತ ಆಟದ ಮೈದಾನವಿಲ್ಲ. ಸಮತಟ್ಟಿರದ, ಹುಲ್ಲು ಬೆಳೆದ ಆವರಣದಲ್ಲಿಯೇ ವಿದ್ಯಾರ್ಥಿಗಳು ಕ್ರೀಡೆಗಳನ್ನು ಆಡುತ್ತಿರುವುದು ಬೇಸರದ ಸಂಗತಿ. ಆದ್ದರಿಂದ ಸುಸಜ್ಜಿತ ವಿಶಾಲವಾದ ಕ್ರೀಡಾ ಮೈದಾನದ ಅಗತ್ಯವಿದೆ.
ಕಾಲೇಜಿನ ಸಮಸ್ಯೆಗಳ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಪ್ರಾಂಶುಪಾಲ ಪ್ರೊ. ಸಿದ್ದನಗೌಡ ಪಾಟೀಲ, “ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗುತ್ತಿದೆ. ಹೊಸದಾಗಿ ಎರಡು ಕೋರ್ಸುಗಳು ಆರಂಭವಾಗಿವೆ. ಇನ್ನೂ ಎರಡು ವಸತಿ ನಿಲಯಗಳ ಅವಶ್ಯಕತೆ ಇದೆ. ಗ್ರಂಥಾಲಯಕ್ಕೆ ಇನ್ನೂ ಹೆಚ್ಚು ಹೆಚ್ಚು ಪುಸ್ತಕಗಳು ಸೇರ್ಪಡೆ ಆಗಬೇಕಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಉತ್ತಮ ಆಟದ ಮೈದಾನ ಆಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ನಮಗೆ ಸಹಕಾರ ನೀಡಿದರೆ, ಕಾಲೇಜನ್ನು ಇನ್ನೂ ಉತ್ತಮ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಅನುಕೂಲವಾಗುತ್ತದೆ” ಎಂದರು.