- ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತ ಸಂಘದ ಮುಖಂಡರ ಆರೋಪ
- ಸಚಿವರು 0% ಬಡ್ಡಿ ದರದಲ್ಲಿ 5 ಲಕ್ಷ ರೂ. ಸಾಲ ನೀಡುವುದಾಗಿ ಹೆಳಿದ್ದಾರೆ
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದ ರೈತರಿಗೆ ಸಹಕಾರ ಸಂಘದಲ್ಲಿ 10 ಲಕ್ಷ ರೂ.ವರೆಗೂ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಆದರೆ, ಈಗ ಭರವಸೆ ಈಡೇರಿಸುವ ಯೋಚನೆ ಮಾಡುತ್ತಿಲ್ಲ ಎಂದು ರೈತ ಸಂಘದ ಮೂಡಿಗೆರೆ ತಾಲೂಕು ಮುಖಂಡ ಡಿ ಎಸ್ ರಮೇಶ್ ದಾರದಹಳ್ಳಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೂ ಮೊದಲು ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಮರೆತಂತೆ ತೋರುತ್ತಿದೆ. ಇತ್ತೀಚೆಗೆ ಸಹಕಾರ ಸಚಿವರು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ 5 ಲಕ್ಷ ರೂ. ವರೆಗೂ 0% ಬಡ್ಡಿ ದರದಲ್ಲಿ ಸಾಲ ಕೊಡುವ ಹೇಳಿಕೆ ನೀಡಿ ರೈತರಿಗೆ ಸಾಲ ಕೊಡುವ ಸಮಯವನ್ನು ತಿಳಿಸಿಲ್ಲ ಮತ್ತು ಸಾಲ ಕೊಡುವುದಕ್ಕೂ ಷರತ್ತು ಹಾಕಿದ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಕಾಂಗ್ರೇಸ್ 2023ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸಹಕಾರಿ ಸಂಘಗಳಲ್ಲಿ ರೈತರಿಗೆ ಬಡ್ಡಿರಹಿತ ಸಾಲದ ಮೊತ್ತವನ್ನು ಈಗಿನ ರೂ. 3 ಲಕ್ಷದಿಂದ ರೂ. 10 ಲಕ್ಷಕ್ಕೆ ಏರಿಸುವ ಮತ್ತು ಶೇಕಡಾ 3 ರ ಬಡ್ಡಿಯಲ್ಲಿನ ಸಾಲದ ಮೊತ್ತವನ್ನು ರೂ. 15 ಲಕ್ಷಕ್ಕೆ ಏರಿಸುವುದಾಗಿ ಭರವಸೆ ನೀಡಿತ್ತು. ಆದರೆ ಈಗ ತನ್ನ ಭರವಸೆಯನ್ನು ಸರ್ಕಾರ ಮರೆತಿದೆ ಎಂದು ದೂರಿದರು.
ಹಿಂದಿನ ಸರ್ಕಾರ 2023ರ ಮಾರ್ಚ್ 08ರಲ್ಲಿ ಮಂಡಿಸಿದ್ದ ಬಜೆಟ್‍ನಲ್ಲಿ 5 ಲಕ್ಷದವರೆಗೂ ಸಹಕಾರ ಸಂಘದಲ್ಲಿ 0% ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಘೋಷಣೆ ಮಾಡಿದ್ದರು. ರೈತರಿಗೆ ಸಾಲ ನೀಡಲು ಸಹಕಾರ ಸಂಘಕ್ಕೆ ಇಲ್ಲಿಯವರೆಗೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದ ರೈತರಿಗೆ ಈ ಮುಂಗಾರು ಹಂಗಾಮಿನಲ್ಲಿ ಸಾಲ ನೀಡಬೇಕಾಗಿದೆ. ರೈತರಿಗೆ ಕೃಷಿ ಅಭಿವೃದ್ಧಿಗೆ ಸಾಲ ನೀಡಿದರೆ ದೇಶದಲ್ಲಿ ಆಹಾರ ಭದ್ರತೆ ಆಗಲಿದೆ ಮತ್ತು ದೇಶದ ಅಭಿವೃದ್ಧಿಗೆ ನೆರವಾಗಲಿದೆ. ಆದರೆ, ಎಲ್ಲ ಸರ್ಕಾರಗಳು ರೈತರಿಗೆ ಸಾಲದ ವಿಚಾರವನ್ನು ಕೇವಲ ರಾಜಕಾರಣಕ್ಕೆ ಬಳಸಿಕೊಳ್ಳುತ್ತೇವೆ ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಪಡಿತರದಲ್ಲಿ ಅಕ್ಕಿ ಜೊತೆಗೆ ರಾಗಿ, ಜೋಳ ನೀಡಲಿ: ರೈತ ಮುಖಂಡ ಬಡಗಲಪುರ ನಾಗೇಂದ್ರ ಆಗ್ರಹ
ಹಿಂದಿನ ಸರ್ಕಾರ ಕೂಡ ಸಹಕಾರ ಸಂಘದಲ್ಲಿ ರೈತರಿಗೆ ಸಕಾಲದಲ್ಲಿ ಸಾಲ ನೀಡಿಲ್ಲ. ಕಾರಣ ಸಹಕಾರ ಸಂಘಕ್ಕೆ ಸಾಲ ಕೊಡುವುದಕ್ಕೆ ಡಿ.ಸಿ.ಸಿ. ಬ್ಯಾಂಕುಗಳು ಮಧ್ಯಸ್ಥಿಕೆ ವಹಿಸುತ್ತಿವೆ, ಆದರೆ ಡಿ.ಸಿ.ಸಿ. ಬ್ಯಾಂಕ್‍ಗಳು ರೈತರ ಸಾಲ ನೀಡುವ ವಿಚಾರದಲ್ಲಿ ದಲ್ಲಾಳಿಗಳ ರೀತಿಯಲ್ಲಿ ಸಾಲ ಕೊಡುವುದನ್ನು ವಿಳಂಬ ಮಾಡುತ್ತಿವೆ. ಡಿ.ಸಿ.ಸಿ.ಬ್ಯಾಂಕ್‍ಗಳಲ್ಲಿ ರಾಜಕೀಯ ಒತ್ತಡ ಗುಂಪುಗಾರಿಕೆಯಿಂದ ಗೊಂದಲ ಉಂಟಾಗಿದೆ. ಆದ್ದರಿಂದ ಈಗಿನ ಕಾಂಗ್ರೆಸ್ ಸರ್ಕಾರ ಕೂಡಲೇ ಸಹಕಾರ ಸಂಘದಲ್ಲಿ ರೈತರಿಗೆ ಕೊಡುವ ಬೆಳೆ ಸಾಲವನ್ನು ಚುನಾವಣಾ ಪ್ರಣಾಳಿಕೆ ಭರವಸೆಯಂತೆ 10 ಲಕ್ಷದವರೆಗಿನ 0% ಸಾಲವನ್ನು ಕೊಡುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಪ್ರಕಾಶ್ ಸತ್ತಿಗನಹಳ್ಳಿ ಇದ್ದರು.