ಕರಾವಳಿ ಜಿಲ್ಲೆಗಳಲ್ಲಿ ಸಂಘಪರಿವಾರದ ದ್ವೇಷ ಭಾಷಣಕಾರರಿಗೆ ಸರ್ಕಾರ ಕಡಿವಾಣ ಹಾಕದ ಪರಿಣಾಮ ಇಂದು ಅಮಾಯಕ ಯುವಕ ರಹೀಂ ಅವರ ಕೊಲೆಯಾಗಿದೆ. ಇದಕ್ಕೆ ಸರ್ಕಾರವೇ ನೇರವಾದ ಹೊಣೆ ಎಂದು ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಜಲೀಲ್ ಕೃಷ್ಣಾಪುರ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಮಂಗಳೂರಿನ ಕೊಳತ್ತಮೊಗರು ಬಳಿಯ ಸಂಘಪರಿವಾರದ ಭಯೋತ್ಪಾದಕರಿಂದ ನಡೆದ ದಾಳಿಯಲ್ಲಿ ಅಮಾಯಕ ಮುಸ್ಲಿಂ ಯುವಕರಾದ ಅಬ್ದುಲ್ ರಹಿಮಾನ್ ಸಾವನ್ನಪ್ಪಿದ್ದಾರೆ ಮತ್ತು ಕಲಂದರ್ ಶಾಪಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆಗೆ ಸಂಘಪರಿವಾರದ ಕೆಲವು ವ್ಯಕ್ತಿಗಳಾದ ಭರತ್ ಕುಮ್ಡೇಲು, ಶಿವಾನಂದ ಮೆಂಡನ್ ಮತ್ತು ಶ್ರೀಕಾಂತ್ ಶೆಟ್ಟಿಯವರ ಪ್ರಚೋದನಾತ್ಮಕ ಹೇಳಿಕೆಗಳು ನೇರ ಕಾರಣವಾಗಿವೆ. ಈ ವ್ಯಕ್ತಿಗಳ ಭಾಷಣಗಳು ಸಮಾಜದಲ್ಲಿ ದ್ವೇಷ ಮತ್ತು ಹಿಂಸೆಯನ್ನು ಉತ್ತೇಜಿಸಿದ್ದು, ಸರಕಾರ ಈ ಸಂಘಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡಿದ್ದರೆ ಈ ದುರಂತವನ್ನು ತಡೆಗಟ್ಟಬಹುದಿತ್ತು” ಎಂದು ತಿಳಿಸಿದ್ದಾರೆ.
ಈ ಘಟನೆಗೆ ರಾಜ್ಯ ಸರಕಾರದ ವೈಫಲ್ಯವೇ ಮೂಲ ಕಾರಣವಾಗಿದೆ. ರೌಡಿಶೀಟರ್ ಹತ್ಯೆಯ ನಂತರ ಬಂದ್ ಕರೆ ನೀಡಿದ ಶರಣ್ ಪಂಪ್ವೆಲ್ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಗೃಹ ಕೂಡಾ ಕಾರಣವಾಗಿದೆ ಸಚಿವ ಜಿ. ಪರಮೇಶ್ವರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಈ ಘಟನೆಯ ಸಂಪೂರ್ಣ ಹೊಣೆಯನ್ನು ಹೊತ್ತುಕೊಳ್ಳಬೇಕು. ಹಾಗೂ ತಕ್ಷಣ ಮಂಗಳೂರಿಗೆ ಭೇಟಿ ನೀಡಿ, ದಾಳಿಯ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು. ಜೊತೆಗೆ, ಈ ರೀತಿಯ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರದಿಂದ ಮುಸ್ಲಿಂ ಸಮುದಾಯದ ವಿರುದ್ಧ ಸತತವಾಗಿ ನಡೆಯುತ್ತಿರುವ ದಾಳಿಗಳು ಮತ್ತು ದ್ವೇಷದ ಭಾಷಣಗಳು ಶಾಂತಿಯುತ ಸಮಾಜಕ್ಕೆ ಧಕ್ಕೆ ತರುತ್ತಿವೆ. ಸರಕಾರ ಈ ಭಯೋತ್ಪಾದಕ ಗುಂಪುಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ನಮ್ಮ ಪಕ್ಷವು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ರಾಜ್ಯ ಸರಕಾರವು ತನ್ನ ಜವಾಬ್ದಾರಿಯನ್ನು ನಿರ್ವಹಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ಖಾತ್ರಿಪಡಿಸಬೇಕೆಂದು ಒತ್ತಾಯಿಸುತ್ತೇವೆ ಎಂದು ಜಲೀಲ್ ಕೃಷ್ಣಾಪುರ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಯುವಕ ರಹಿಮಾನ್ ಕೊಲೆ ಪ್ರಕರಣ: ಸ್ಥಳೀಯ ಇಬ್ಬರು ಸೇರಿ 15 ಮಂದಿಯ ವಿರುದ್ಧ ಎಫ್‌ಐಆರ್
ನಾವು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಶಾಂತಿ ಕಾಪಾಡಿಕೊಳ್ಳಲು ಮನವಿ ಮಾಡುತ್ತೇವೆ ಮತ್ತು ಈ ರೀತಿಯ ದ್ವೇಷದ ರಾಜಕೀಯಕ್ಕೆ ಒಗ್ಗದಂತೆ ಕರೆ ನೀಡುತ್ತೇವೆ. ಸರಕಾರ ತಕ್ಷಣ ಕ್ರಮ ಕೈಗೊಂಡು ನ್ಯಾಯ ಒದಗಿಸದಿದ್ದರೆ, ಎಸ್‌ಡಿಪಿಐ ಕಾನೂನು ಬದ್ಧವಾಗಿ ಜನಾಂದೋಲನವನ್ನು ತೀವ್ರಗೊಳಿಸಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
