ಕೇಂದ್ರ ಅಥವಾ ರಾಜ್ಯ ಸರ್ಕಾರವಾಗಲಿ ಯಾವುದೇ ಯೋಜನೆಗಳನ್ನು ಘೋಷಣೆ ಮಾಡುವುದಕ್ಕಿಂತ ಮೊದಲು ರೈತರೊಂದಿಗೆ ಚರ್ಚೆ ಮಾಡಬೇಕೆಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಒತ್ತಾಯಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಾರ್ವಜನಿಕರಿಗೆ 29ರೂ.ಗಳಿಗೆ ಅಕ್ಕಿ ಕೊಡುವ ಯೋಜನೆಯನ್ನು ಜಾರಿಗೊಳಿಸಿದೆ. ಅದೇ ರೀತಿ ಕೇಂದ್ರ ಸರ್ಕಾರ ರೈತ ಬೆಳೆದ ಭತ್ತಕ್ಕೆ 2,180 ರೂ.ಗಳ ಬೆಂಬಲ ಬೆಲೆಯನ್ನು ಘೋಷಣೆ ಮಾಡಿದೆ. ಈ ಬೆಂಬಲ ಬೆಲೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಜಾರಿಗೊಳಿಸಿದರೆ, ಮಾತ್ರ ರೈತನ ಬದುಕ ಹಸನಾಗಿ ಉಳಿಯುವುದಕ್ಕೆ ಅವಕಾಶವಿದೆ.
ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆಯನ್ನು ಮಾಡದೇ ಕೇಂದ್ರ ಸರ್ಕಾರ 29 ರೂ.ಗಳಿಗೆ ಅಕ್ಕಿ ಹಾಗೂ ರಾಜ್ಯ ಸರ್ಕಾರ ಉಚಿತ ಅಕ್ಕಿ ಘೋಷಣೆ ಮಾಡಿದರೆ ರೈತ ಯಾವ ದರಕ್ಕೆ ಭತ್ತವನ್ನು ಮಾರಬೇಕು, ಖರೀದಿದಾರರು ಯಾವ ದರಕ್ಕೆ ಖರೀದಿ ಮಾಡಬೇಕು ಎಂಬುವುದು ಗೊತ್ತಾಗದೇ ಈ ದಿನ ರೈತ ಬೆಳೆದ ಭತ್ತಕ್ಕೆ ಮಾರುಕಟ್ಟೆಯಲ್ಲಿ ಖರೀದಿದಾರರು ಇಲ್ಲದ ಪರಿಸ್ಥಿತಿ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆಯನ್ನು ಮಾಡಬೇಕೆಂದು ಒತ್ತಾಯಿಸಿ ರೈತ ಸಂಘಟನೆಗಳು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ ಹಾಗೂ ಕಳೆದ ಬಾರಿ ಕನಿಷ್ಠ ಬೆಂಬಲ ಬೆಲೆ ಕಾಯ್ದೆಯನ್ನು ಮಾಡುತ್ತೇವೆಂದು ಎಂದು ಹೇಳಿದ ಕೇಂದ್ರ ಸರ್ಕಾರ ಪತ್ರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆಯನ್ನು ಮಾಡಬೇಕೆಂದು ಒತ್ತಾಯಿಸಿದರು. ರಾಜ್ಯ ಸರ್ಕಾರವು ಫಾರಂ 52, 53, 57ರಲ್ಲಿ ಹಾಕಿರುವ ಬಗರ್ ಹುಕುಂ ಅರ್ಜಿಗಳನ್ನು ಈ ಕೂಡಲೇ ಇತ್ಯಾರ್ಥಗೊಳಿಸಿ ಹಕ್ಕು ಪತ್ರಗಳನ್ನು ನೀಡಬೇಕೆಂದರು.
ಜಗಳೂರು ತಾಲೂಕಿನಲ್ಲಿ ತೀವ್ರವಾದ ಕುಡಿಯುವ ನೀರಿನ ಸಮಸ್ಯೆ ಇದ್ದು, ಸುಮಾರು 80ಕ್ಕಿಂತ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ದನಕರುಗಳಿಗೆ ಕುಡಿ ಕುಡಿಯಲು ನೀರು, ಮೇವಿನ ಅಭಾವವಿರುವುದರಿಂದ ಜಿಲ್ಲಾಡಳಿತ ಬೋರ್- ವೆಲ್ ಗಳನ್ನು ಕೊರೆದು ಕುಡಿಯಲು ನೀರು ಹಾಗೂ ದನಕರುಗಳಿಗೆ ಗೋಶಾಲೆಗಳನ್ನು ತೆರೆಯಬೇಕೆಂದರು.
ರಾಜ್ಯ ಸರ್ಕಾರ ಅಕ್ರಮ-ಸಕ್ರಮ ವಿದ್ಯುತ್ ಯೋಜನೆಯನ್ನು ಮುಂದುವರೆಸಬೇಕು, ನಿವೇಶನ ರಹಿತ ಗ್ರಾಮಗಳಲ್ಲಿ ಇರುವ ಕುಟುಂಬಗಳಿಗೆ ಸರ್ಕಾರದ ಜಮೀನು ಲಭ್ಯವಿದ್ದರೂ ಸಹ ನಿವೇಶನಗಳನ್ನು ಮಾಡಿ ನಿವೇಶನ ನೀಡಿಲ್ಲ. ಸಾವಿರಾರು ಕುಟುಂಬಗಳು ನಿವೇಶನವಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಇಂತಹ ಕುಟುಂಬಗಳಿಗೆ ಜಿಲ್ಲಾ ಪಂಚಾಯಿತಿ ನಿವೇಶನಗಳನ್ನು ನೀಡುವುದು ಸೇರಿದಂತೆ ರೈತರ ಎಲ್ಲಾ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿದರು.
ಫೆ. 19ರಂದು ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಿಂದ ಬೃಹತ್ ಪಾದಯಾತ್ರೆಯ ಕೈಗೊಂಡು, ಫೆ.22ರಂದು ಜಿಲ್ಲಾಧಿಕಾರಿಗಳ ಕಛೇರಿ ತಲುಪಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೈದಾಳೆ ರವಿಕುಮಾರ್, ಯಲೋದಹಳ್ಳಿ ರವಿಕುಮಾರ್, ಬಾಲಾಜಿ, ಅಸ್ತಾಪನಹಳ್ಳಿ ಗಂಡುಗಲಿ, ಪೂಜಾರ್ ಅಂಜಿನಪ್ಪ, ಬಸಣ್ಣ, ಕುಮಾರ್, ನಾಗರಾಜ್, ಕೃಷ್ಣಮೂರ್ತಿ, ಹನುಮಂತ ಇನ್ನಿತರರು ಉಪಸ್ಥಿತರಿದ್ದರು.