ಮಾಗಡಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ₹120 ಕೋಟಿಗೂ ಹೆಚ್ಚು ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.
ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದ ಹೊಸಪೇಟೆ ವೃತ್ತದಲ್ಲಿ ಆಯೋಜಿಸಿದ್ದ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ನೂತನವಾಗಿ ನಿರ್ಮಾಣಗೊಂಡಿರುವ ಬೆಂಗಳೂರು ಹಾಲು ಒಕ್ಕೂಟದ ಮಾಗಡಿ ನೂತನ ಶಿಬಿರ ಕಚೇರಿ ಉದ್ಘಾಟಿಸಿ ಮಾತನಾಡಿದರು.
“ಮಾಗಡಿ ಒಂದು ಪ್ರಮುಖ ಪಟ್ಟಣವಾಗಿದ್ದು, ಇದು ಪರಿಪೂರ್ಣವಾಗಿ ಅಭಿವೃದ್ಧಿಯಾಗಬೇಕೆಂಬ ರಾಜ್ಯ ಸರ್ಕಾರದ ದೃಷ್ಠಿಯಾಗಿದೆ. ಈ ಹಿಂದೆ ಅವರ ಸರ್ಕಾರವು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಆರಂಭಿಸಿತ್ತು, ಈ ಮಹಾನ್ ನಾಯಕನನ್ನು ಸ್ಮರಿಸುತ್ತಲೇ ಮುಂದುವರಿಯುತ್ತೇವೆ” ಎಂದು ಹೇಳಿದರು.

“ಗ್ಯಾರಂಟಿ ಯೋಜನೆಗಳಿಗೆ ₹56 ಸಾವಿರ ಕೋಟಿಯನ್ನು ಮೀಸಲಿಟ್ಟಿದ್ದು, ಸುಮಾರು 1.20 ಲಕ್ಷ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತಿದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರಿಗೆ ಮೀಸಲಾಗಿರುವ ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಬಳಸಲಾಗುವುದು” ಎಂದು ಭರವಸೆ ನೀಡಿದರು.
ಹಾಲಿನ ದರ ಹೆಚ್ಚಳದ ಕುರಿತಂತೆ, “ಭವಿಷ್ಯದಲ್ಲಿ ರೈತರಿಗೆ ನೇರ ಲಾಭವಾಗುವಂತೆ ತೀರ್ಮಾನ ಕೈಗೊಳ್ಳಲಾಗುವುದು ಹಾಲಿನ ದರವನ್ನು ₹5ಕ್ಕೆ ಏರಿಸುವ ಬಗ್ಗೆ ಚರ್ಚಿಸಲಾಗುವುದು” ಎಂದು ಹೇಳಿದರು.
ಸಹಕಾರ ಸಚಿವ ಕೆ ಎನ್ ರಾಜಣ್ಣ ಮಾತನಾಡಿ, “ಗ್ಯಾರಂಟಿ ಯೋಜನೆಗಳು ರಾಜ್ಯದ ಬಡಜನರ ಜೀವನವನ್ನು ಸುಧಾರಿಸಲು ಮಹತ್ತರ ಪಾತ್ರವಹಿಸಿವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅರವಿಂದ್ ಕೇಜ್ರಿವಾಲ್ ಪ್ರಕರಣ ಪ್ರಾಮಾಣಿಕತೆಗೆ ಸಾಕ್ಷಿ: ಭೋಗೇಶ್ ಸೋಲಾಪುರ್
ಮಾಗಡಿ ಶಾಸಕ ಎಚ್ ಸಿ ಬಾಲಕೃಷ್ಣ ಮಾತನಾಡಿ, ಮಾಗಡಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಮಾಡಬೇಕಾದ ಹಲವು ಕಾರ್ಯಗಳ ಬಗ್ಗೆ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಅಧಿಕಾರಿಗಳು, ಕಾರ್ಯಕರ್ತರು ಇದ್ದರು.