ಕರಾವಳಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಯಾಕಿಲ್ಲ?

Date:

Advertisements

ಕರಾವಳಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎನ್ನುವಂತಹ ಕೂಗು ಮತ್ತೆ ಸೋಷಿಯಲ್ ಮೀಡಿಯಾ ಹಾಗೂ ಜನರ ನಡುವೆ ಪ್ರತಿಧ್ವನಿಸುತ್ತಿದೆ. ಈ ಕೂಗು ಇಂದು ಮೊನ್ನೆಯದ್ದಲ್ಲ. ಕಳೆದ ಹಲವಾರು ವರ್ಷಗಳಿಂದಲೂ ಕೇಳಿ ಬರುತ್ತಲಿದ್ದರೂ, ಸರ್ಕಾರವಾಗಲೀ, ರಾಜಕೀಯ ಪ್ರತಿನಿಧಿಗಳಾಗಲೀ ಅತ್ತ ಗಮನಹರಿಸುತ್ತಲೇ ಇಲ್ಲ ಎಂಬುದು ಮಾತ್ರ ವಾಸ್ತವ.

ಕರಾವಳಿ ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜು ಕೇವಲ ಚುನಾವಣೆ ಆಶ್ವಾಸನೆಗಷ್ಟೇ ಸೀಮಿತಗೊಂಡಂತಿದೆ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಬೇಕು ಎಂಬ ಕೂಗು ಕರಾವಳಿಯಲ್ಲಿ ಮತ್ತೆ ಬಲಗೊಳ್ಳುತ್ತಿದೆ.

ಕಳೆದ ಹಲವು ದಿನಗಳಿಂದ ಸಾಮಾಜಿಕ ತಾಣಗಳಲ್ಲಿ ಅಲ್ಲಲ್ಲಿ ಭಿತ್ತಿ ಪತ್ರಗಳು ಇಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುತ್ತಿರುವುದು ಮತ್ತು ಸರ್ಕಾರಿ ಮೆಡಿಕಲ್ ಕಾಲೇಜಿಗಾಗಿ ಆಗ್ರಹಿಸುತ್ತಿರುವುದನ್ನು ಸಾಮಾಜಿಕ ‌ತಾಣಗಳಲ್ಲಿ ನೋಡುತ್ತಿದ್ದೇವೆ.

Advertisements

ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಚುನಾವಣೆ ಹೊತ್ತಿನಲ್ಲಿ ಮಾತ್ರ ಭರವಸೆ ನೀಡುತ್ತಿರುವುದು ಕರಾವಳಿ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು.

mng

ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಆರಂಭಗೊಂಡರೆ ಜಿಲ್ಲೆಯ ಪ್ರತಿಭಾವಂತ ಬಡ ವಿದ್ಯಾರ್ಥಿಗಳು ನೀಟ್‌ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೆ ಇಲ್ಲಿಯೇ ಸರಕಾರಿ ಸೀಟ್‌ ಕೂಡ ಪಡೆಯಬಹುದು. ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶುಲ್ಕ ವಾರ್ಷಿಕ 60 ಸಾವಿರದಿಂದ 70 ಸಾವಿರ ರೂಪಾಯಿ ಇದ್ದರೆ ಖಾಸಗಿ ಕಾಲೇಜಿನಲ್ಲಿ ಸರಕಾರಿ ಸೀಟಿಗೆ 1.50 ಲಕ್ಷ ರೂಪಾಯಿ ಇದೆ. ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ದುಬಾರಿ ಶುಲ್ಕ ಇರುವುದರಿಂದ ಜಿಲ್ಲೆಯ ಹಲವಾರು ಮಂದಿ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದಾರೆ.

ಚುನಾವಣೆ ಸಂದರ್ಭ ಬಹುತೇಕ ಎಲ್ಲ ಪಕ್ಷಗಳ ಪ್ರಣಾಳಿಕೆಯಲ್ಲಿಯೂ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಬಗ್ಗೆ ಉಲ್ಲೇಖ ಇರುತ್ತದೆಯಾದರೂ, ಚುನಾವಣೆ ಮುಗಿದ ಬಳಿಕ ಅಷ್ಟೇ ವೇಗದಲ್ಲಿ ಮರೆಯಾಗುತ್ತಿದೆ. ಈ ಬಗ್ಗೆ ಕೆಲವೊಂದು ಬಾರಿಯಷ್ಟೇ ಹೋರಾಟಗಳು ನಡೆಯುತ್ತಿವೆಯಾದರೂ ತೀವ್ರ ಸ್ವರೂಪ ಪಡೆದುಕೊಂಡಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ಮೆಡಿಕಲ್ ಕಾಲೇಜು ಇದ್ದರೂ ಎಲ್ಲವೂ ಖಾಸಗಿ ಒಡೆತನಕ್ಕೆ ಸೇರಿದವು. ಉಡುಪಿಯಲ್ಲಿ ಖಾಸಗಿ ವಿಶ್ವವಿದ್ಯಾಲಯವೇ ಕಾರ್ಯ ನಿರ್ವಹಿಸುತ್ತಿದೆ. ಈ ಭಾಗದಲ್ಲಿ ಒಂದೇ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ.

utk 2

ಉಡುಪಿ, ಜಿಲ್ಲೆಯಾಗಿ ವರ್ಷಗಳೇ ಉರುಳಿದರೂ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲದಿರುವುದು ದುರಂತವೇ ಸರಿ. ಉಡುಪಿ ಜಿಲ್ಲೆ ಸ್ಥಾಪನೆಯಾದ ಸಂದರ್ಭದಲ್ಲಿಯೇ ರಚಿತವಾದ ಜಿಲ್ಲೆಗಳಲ್ಲಿ ಕೊಪ್ಪಳ ಕೂಡ ಒಂದು. ಕೊಪ್ಪಳದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜನ್ನು ನಿರ್ಮಿಸಲಾಗಿದೆ. ಆದರೆ ಉಡುಪಿ ಜಿಲ್ಲೆಗೆ ಈ ಭಾಗ್ಯ ಲಭ್ಯವಾಗಿಲ್ಲದಿರುವುದು ಈ ಭಾಗದ ಜನಪ್ರತಿನಿಧಿಗಳ ಅಸಮರ್ಥತೆಯನ್ನು ಎದ್ದು ತೋರಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

sunil kumar

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಹೋರಾಟಗಾರ ಸುನೀಲ್ ಕುಮಾರ್ ಬಜಾಲ್, “ದಕ್ಷಿಣ ಕನ್ನಡ ಜಿಲ್ಲೆ ವಿದ್ಯಾವಂತರ, ಪ್ರಜ್ಞಾವಂತರ ಜಿಲ್ಲೆ ಎಂದು ಗುರುತಿಸಿಕೊಂಡಿವೆ. ಈ ನಾಡಿನಲ್ಲಿ ಇಂತಹ ಬೇಡಿಕೆ ಹಲವು ಬಾರಿ ಕೇಳಿ ಬಂದಿದೆ. ಇಲ್ಲಿ ಖಾಸಗಿ ಮೆಡಿಕಲ್ ಕಾಲೇಜು ಮತ್ತು ಖಾಸಗಿ ಇಂಜಿನಿಯರಿಂಗ್ ಕಾಲೇಜು ಬೇಕಾದಷ್ಟು ಇವೆ. ಕೇಳಿದವರಿಗೆ ಎತ್ತಿ ಎತ್ತಿ ಕೊಡುತ್ತಾರೆ, ಆದರೆ ಸರ್ಕಾರಿ ಮೆಡಿಕಲ್ ಕಾಲೇಜು ಬಗ್ಗೆ ಮಾತಾಡಿದಾಗ ಮೌನವಾಗುತ್ತಾರೆ” ಎಂದರು.

“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣದ ಬಹಳ ದೊಡ್ಡ ಲಾಬಿ ನಡೆಯುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಹಣ ಉಳ್ಳವರಿಗೆ, ಶಿಕ್ಷಣ ಇಲ್ಲದವರಿಗೆ ಬಿಕ್ಷಣ ಎನ್ನುವ ರೀತಿಯಲ್ಲಿ ಈ ಜಿಲ್ಲೆಯಲ್ಲಿ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಬಂದರೆ ಮಾತ್ರ ಬಡವರ ಮಕ್ಕಳು ಡಾಕ್ಟರ್ ಆಗಲು ಸಾಧ್ಯವೇ ಹೊರತು, ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಸಾಧ್ಯವೇ ಇಲ್ಲ. ಏಕೆಂದರೆ ಲಕ್ಷ ಲಕ್ಷ ಸುರಿಸಿ ಮಕ್ಕಳನ್ನು ಡಾಕ್ಟರ್ ಮಾಡಲು ಯಾವ ಬಡವನಿಂದ ಸಾಧ್ಯ” ಎಂದು ಹೇಳಿದರು.

ಅಮೃತ್ ಶೆಣೈ

ಈ ದಿನ.ಕಾಮ್ ಜೊತೆ ಮಾತ‌ನಾಡಿದ ಸಾಮಾಜಿಕ ಕಾರ್ಯಕರ್ತ ಅಮೃತ್ ಶೆಣೈ, “ಉಡುಪಿ ಜಿಲ್ಲೆಯಾಗಿ 25 ವರ್ಷ ಸಂದಿದೆ. ಉಡುಪಿ ಜಿಲ್ಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಡಾಕ್ಟರ್ ಆಗಬೇಕು ಎನ್ನುವಂತಹ ಆಸೆ ಇರುವವರಿಗೆ ಇಲ್ಲಿ ಯಾವುದೇ ಒಂದು ಸರಕಾರಿ ವೈದ್ಯಕೀಯ ಕಾಲೇಜು ಇಲ್ಲ. ಇದು ಬಹಳ ಬೇಸರದ ಸಂಗತಿ. ಯಾಕೆಂದರೆ ತಮ್ಮ ಮಕ್ಕಳನ್ನು ಹೊರ ಜಿಲ್ಲೆಗೆ ಕಳುಹಿಸಿ ಓದಿಸುವ ಮಾನಸಿಕ ಧೈರ್ಯ ಪೋಷಕರಲ್ಲಿ ಇಲ್ಲ, ಉಡುಪಿಯಲ್ಲಿ ಒಂದೇ ಒಂದು ಖಾಸಗಿ ಕಾಲೇಜು ಇದೆ. ಅದು ಡೀಮ್ಡ್‌ ಯೂನಿವರ್ಸಿಟಿ. ಅಲ್ಲಿ ಎಲ್ಲರ ಕೈಗೆಟಕುವ ರೀತಿಯಲ್ಲಿ ಮೆಡಿಕಲ್ ಸೀಟು ಪಡೆಯಲು ಸಾಧ್ಯವಾಗುವುದಿಲ್ಲ. ಐದು ವಿಧಾನಸಭಾ ಕ್ಷೇತ್ರ, ಎಲ್ಲ ರೀತಿಯಲ್ಲಿಯೂ ಆದಾಯ ಕೊಡುವಂತಹ ಈ ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲದಿರುವುದು ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಾಗಿದೆ” ಎಂದು ಹೇಳಿದರು.

ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಅಭಿಯಾನವನ್ನು ಆರಂಭಿಸಲಾಗಿದೆ. ಇದರ ಅಡ್ಮಿನ್‌ಗಳ ಪೈಕಿ ಓರ್ವರಾಗಿರುವ ಅಯ್ಯೂಬ್ ಖಾನ್ ಈ ದಿನ.ಕಾಮ್‌ ಜೊತೆಗೆ ಮಾತನಾಡಿ, “ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು ಎಂದು ಈಗ ಅರ್ಥವಾಗಿದೆ. ಹೀಗಾಗಿ, ಜಿಲ್ಲೆಯಲ್ಲಿ ಜನಾಂದೋಲನ ರೂಪಿಸುವ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಅಭಿಯಾನವನ್ನು ಆರಂಭಿಸಲಾಗಿದೆ. ಶೀಘ್ರದಲ್ಲೆ ಎಲ್ಲರನ್ನೂ ಒಳಗೊಂಡಂತೆ ಒಂದು ಹೋರಾಟ ಸಮಿತಿಯನ್ನು ರೂಪಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದೆ. ವಿಭಿನ್ನ ಶೈಲಿಯಲ್ಲಿ ಮಾಡುವ ಯೋಚನೆ ಕೂಡ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಎಲ್ಲ ಬಡವರು ಬೀದಿಗಿಳಿಯುವಂತಹ ದೀರ್ಘಕಾಲದ ಹೋರಾಟ ರೂಪಿಸಲಿದ್ದೇವೆ” ಎಂದು ತಿಳಿಸಿದರು.

“ಕರಾವಳಿ ಜಿಲ್ಲೆಯಲ್ಲಿ ಮೆಡಿಕಲ್ ಮಾಫಿಯಾ ನಿಲ್ಲಲೇಬೇಕು, ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಸರಕಾರ ಸ್ಥಳ ಕಾಯ್ದಿಟ್ಟು ಜಿಲ್ಲೆಗೆ ಸುಸಜ್ಜಿತವಾದ ಸರಕಾರಿ ಮೆಡಿಕಲ್ ಕಾಲೇಜನ್ನು ಸ್ಥಾಪಿಸಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಭವಿಷ್ಯವನ್ನು ಬೆಳಗಿಸಬೇಕೆನ್ನುವುದೇ ಈ ಆಂದೋಲನದ ಮೂಲ ಉದ್ದೇಶ” ಎಂದು ಅಯ್ಯೂಬ್ ಖಾನ್ ತಿಳಿಸಿದರು.

WhatsApp Image 2024 07 29 at 9.34.13 PM

ಒಟ್ಟಿನಲ್ಲಿ, ರಾಜ್ಯದ ಇತರೇ ಜಿಲ್ಲೆಯಲ್ಲಿ ಇರುವಂತೆ ಕರಾವಳಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಬೇಕು ಮತ್ತು ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕೈಯಲ್ಲಿ ಸ್ಟೆತಸ್ಕೋಪ್ ಬರಬೇಕು. ಅವರು ಕೂಡ ವೈದ್ಯರಾಗಿ ಸಮಾಜದಲ್ಲಿ ಸೇವೆಯನ್ನು ನೀಡಬೇಕು. ಕರಾವಳಿ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಆದಷ್ಟು ಬೇಗ ಬರಲಿ ಎಂಬ ಆಶಯದೊಂದಿದೆ ಸಾರ್ವಜನಿಕರ ಆಂದೋಲನ ಮುನ್ನಡೆಯಲಿ ಎಂಬುದು ಎಲ್ಲರ ಒಕ್ಕೊರಲ ಆಗ್ರಹವಾಗಿದೆ.

mng
mng1
WhatsApp Image 2024 07 28 at 9.48.31 AM
WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

Download Eedina App Android / iOS

X