“ಸರ್ಕಾರ ನಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ವಿಧಾನಸೌಧದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಹೇಳಿದ್ದೇನೆ ಎಂದು ಕಾಂಗ್ರೆಸ್ ಪಕ್ಷದ ಶಾಸಕ ರಾಜು ಕಾಗೆ, ತಮ್ಮದೇ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದಾರೆ.
ಅಥಣಿ ತಾಲೂಕಿನ ತಾವಂಶಿ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ, “ವರ್ಷದಿಂದ ನನ್ನ ಗೋಳು ವಿಧಾನಸೌಧದಲ್ಲಿರುವವರಿಗೆ ಕೇಳುತ್ತಿಲ್ಲ. ವಿಧಾನಸೌಧಕ್ಕೆ ಹೋದರೆ ಊಟವನ್ನು ಸಹ ಮಾಡುತ್ತಿಲ್ಲ. ನಮ್ಮ ಕ್ಷೇತ್ರದ ಜನತೆಯ ಕಷ್ಟಗಳಿಗೆ ಈ ಸರ್ಕಾರ ಸ್ಪಂದಿಸುತ್ತಿಲ್ಲ” ಎಂದು ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
“ನಾವು ಯಾಕೆ ಶಾಸಕರಾಗಿರಬೇಕು? ಯಾಕೆ ಆಡಳಿತ ಮಾಡಬೇಕು? ಆಡಳಿತ ಪಕ್ಷದ ಶಾಸಕನಾಗಿಯೂ ಅಸಹಾಯಕನಾಗಿದ್ದೇನೆ. ಕ್ಷೇತ್ರದ ಕೆಲಸ ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಕ್ಕೆ ಮಂತ್ರಿಯೊಬ್ಬರು, ನೀನ್ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತೀಯಾ? ಎಲ್ಲ ಕೆಲಸ ಮಾಡಿಸಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ” ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಉಡುಪಿ | ನಿರ್ಲಕ್ಷ್ಯದಿಂದ ಮೇಲ್ಸೇತುವೆ ಕಾಮಗಾರಿ: ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ
“ಸರ್ಕಾರ ಯಾವುದೇ ರೈತಪರ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ. ರೈತರು ಬದುಕು ನಡೆಸುವುದು ದುಸ್ತರವಾಗಿದೆ. ಆಡಳಿತ ಪಕ್ಷದ ಒಬ್ಬ ಶಾಸಕನಾಗಿ ಅಸಹಾಯಕತೆ ಬಗ್ಗೆ ಹೇಳ್ತಾ ಇದ್ದೀನಿ ಅಂದರೆ, ಎಷ್ಟರಮಟ್ಟಿಗೆ ಈ ವ್ಯವಸ್ಥೆಯಲ್ಲಿ ಬದುಕಿದ್ದೇವೆ ಎಂದು ಅರ್ಥ ಮಾಡಿಕೊಳ್ಳಿ. ನಮ್ಮದೇ ಸರ್ಕಾರದ ನಡೆಯಿಂದಾಗಿ ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಹೀಗಾಗಿ, ಮುಂದಿನ ಸಲ ನನಗೆ ಎಂಎಲ್ಎ ಆಗುವುದು ಬೇಕಾಗಿಲ್ಲ. ಹೀಗೇ ಮುಂದುವರಿದರೆ ರಾಜೀನಾಮೆ ನೀಡಬೇಕಷ್ಟೇ” ಎಂದು ಕ್ಷೇತ್ರದ ಜನತೆಯ ಮುಂದೆ ತಮ್ಮ ಅಸಹಾಯಕತೆಯನ್ನು ಶಾಸಕ ರಾಜು ಕಾಗೆ ತೊಡಿಕೊಂಡಿದ್ದಾರೆ.
