ಲಂಚ ಪಡೆದ ಪ್ರಕರಣದಲ್ಲಿ ನ್ಯಾಯಾಲಯವು ಶಿಕ್ಷೆ ವಿಧಿಸಿದ್ದ ಉಪ ನೋಂದಣಾಧಿಕಾರಿ ಭಾಸ್ಕರ್ ಸಿದ್ದರಾಮಪ್ಪ ಚೌರ ಅವರನ್ನು ಕರ್ತವ್ಯದಿಂದ ವಜಾ ಮಾಡಿ ನೋಂದಣಿ ಮತ್ತು ಮುದ್ರಾಂಕ ಆಯುಕ್ತ ದಯಾನಂದ ಕೆ.ಎ. ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಹೊಳೆನರಸೀಪುರದಲ್ಲಿ ಉಪ ನೋಂದಣಾಧಿಕಾರಿಯಾಗಿರುವ ಭಾಸ್ಕರ ಎಸ್. ಚೌರ 2019ರಲ್ಲಿ ಜಾಲದಲ್ಲಿ ಉಪ ನೋಂದಣಾಧಿಕಾರಿ ಆಗಿದ್ದಾಗ ನಿವೇಶನದ ಕ್ರಯಪತ್ರ ನೋಂದಣಿ ಮಾಡಿಕೊಡಲು ₹15,000 ಲಂಚ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಸಿಕ್ಕಿಬಿದ್ದಿದ್ದರು. ಲಂಚ ಪಡೆದಿರುವುದು ಸಾಬೀತಾಗಿದ್ದರಿಂದ ಹೆಚ್ಚುವರಿ ನಗರ ಸಿವಿಲ್ ನ್ಯಾಯಾಲಯವು ಶುಕ್ರವಾರ ಮೂರು ವರ್ಷಗಳ ಜೈಲು ಶಿಕ್ಷೆ, ₹5 ಲಕ್ಷ ದಂಡ ವಿಧಿಸಿತ್ತು.
ಶಿಕ್ಷೆಗೆ ಒಳಗಾಗಿರುವ ಭಾಸ್ಕರ ಎಸ್. ಚೌರ ಅವರನ್ನು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ 1957ರ ನಿಯಮ 8ರ ಅನ್ವಯ ತಕ್ಷಣವೇ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಸಕ್ಷಮ ಪ್ರಾಧಿಕಾರಿಯೂ ಆಗಿರುವ ದಯಾನಂದ ಅವರ ಆದೇಶದಲ್ಲಿ ತಿಳಿಸಲಾಗಿದೆ.
