ಔರಾದ್ ತಾಲ್ಲೂಕಿನ ಶೆಂಬೆಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಶೆಂಪುರ(ಬಿ) ಹಾಗೂ ಬೇಲೂರ (ಎನ್) ಗ್ರಾಮಗಳ ಜನರು ತಮ್ಮ ಗ್ರಾಮ ಪಂಚಾಯಿತಿ ಕೇಂದ್ರ ಬಲು ದೂರವಿರುವ ಕಾರಣ ಸುತ್ತಿ ಬಳಸಿ ಹೋಗಬೇಕಾದ ಪರಿಸ್ಥಿತಿ ಇದೆ.
ಖಾಶೆಂಪುರ(ಬಿ) ಮತ್ತು ಬೆಲೂರ(ಎನ್) ಗ್ರಾಮಗಳು ಶೆಂಬೆಳ್ಳಿ ಗ್ರಾಮ ಪಂಚಾಯಿತಿಯಿಂದ ಕೇವಲ 4-5 ಕಿ.ಮೀ. ಅಂತರದಲ್ಲಿವೆ. ಆದರೆ ನೇರವಾಗಿ ಪಂಚಾಯಿತಿ ಕೇಂದ್ರಕ್ಕೆ ಹೋಗಲು ರಸ್ತೆ ಇಲ್ಲದಕ್ಕೆ ಈ ಎರಡು ಗ್ರಾಮಗಳ ಜನರು ನಾಗರಿಕ ಸೌಲಭ್ಯಗಳಿಗಾಗಿ ಸುತ್ತಿ ಬಳಸಿ 15 ಕಿ.ಮೀ. ದೂರ ಕ್ರಮಿಸಿ ಶೆಂಬೆಳ್ಳಿ ಪಂಚಾಯಿತಿಗೆ ತಲುಪಬೇಕಾದ ಅನಿವಾರ್ಯವಿದೆ.
ಎರಡು ಗ್ರಾಮಗಳ ಜನ ನಾನಾ ಕೆಲಸಕ್ಕೆ ಶೆಂಬೆಳ್ಳಿ ಪಂಚಾಯಿತಿಗೆ ಬರುತ್ತಾರೆ. ಸಾರಿಗೆ ಸೌಲಭ್ಯ ಸಮಪರ್ಕವಾಗಿ ಇಲ್ಲದ ಕಾರಣ ಟಂಟಂ, ಜೀಪ್ ಮತ್ತಿತರ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ. ಇನ್ನು ಶಾಲಾ-ಕಾಲೇಜು, ಬ್ಯಾಂಕ್ ಹಾಗೂ ತುರ್ತಾಗಿ ಆಸ್ಪತ್ರೆಗೆ ನಗರ, ಪಟ್ಟಣಕ್ಕೆ ಹೋಗಬೇಕಾದರೂ ಹತ್ತಾರು ಕಿ.ಮೀ. ಮೀಟರ್ ಸುತ್ತಿ ಬರಲೇಬೇಕು. ಇಂತಹ ದುಸ್ಥಿತಿ ಎದುರಿಸುತ್ತಿರುವ ಈ ಗ್ರಾಮಗಳ ಜನರು ಶೆಂಬೆಳ್ಳಿ ಮಾರ್ಗವಾಗಿ ರಸ್ತೆ ನಿರ್ಮಿಸುವಂತೆ ಆಗ್ರಹಿಸುತ್ತಿದ್ದಾರೆ.

ಬೆಲೂರ(ಎನ್) ಗ್ರಾಮದಲ್ಲಿ 250ಕ್ಕೂ ಅಧಿಕ ಮನೆಗಳಿದ್ದು, ಸುಮಾರು 2,000 ಜನಸಂಖ್ಯೆ ಇದೆ. ಗ್ರಾಮಕ್ಕೆ ಸಾರಿಗೆ ಬಸ್ ಇಲ್ಲದಕ್ಕೆ ಆಲೂರ ಗ್ರಾಮದ ಕ್ರಾಸ್‌ವರೆಗೆ ನಡೆದು ಹೋಗಬೇಕು. ಸಾರಿಗೆ ಸೌಲಭ್ಯ ಇಲ್ಲದಕ್ಕೆ ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಸಮಸ್ಯೆ ಅನುಭವಿಸುವಂತಾಗಿದೆʼ ಎಂದು ಬೇಲೂರ(ಎನ್) ಗ್ರಾಮ ಪಂಚಾಯತ್ ಸದಸ್ಯ ಮಚೇಂದ್ರ ಅವಲತ್ತುಕೊಳ್ಳುತ್ತಾರೆ.
ʼಬೇಲೂರ(ಎನ್) ಗ್ರಾಮದಿಂದ ಶೆಂಬೆಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಕಾಮಗಾರಿ ಜಮೀನು ತಕರಾರು ಹಿನ್ನಲೆ ನನೆಗುದಿಗೆ ಬಿದ್ದಿದೆ. ಈ ರಸ್ತೆ ಕಾಮಗಾರಿ ಪೂರ್ಣಗೊಂಡರೆ ಈ ಮಾರ್ಗವಾಗಿ ತಾಲ್ಲೂಕು ಕೇಂದ್ರಕ್ಕೆ ತೆರಳು ಅನುಕೂಲವಾಗುತ್ತದೆ. ಸಾರಿಗೆ ಬಸ್ ಸೌಲಭ್ಯ ಕೂಡ ದೊರೆಯುತ್ತದೆʼ ಎಂದು ಹೇಳಿದರು.
ʼಖಾಶೆಂಪುರ(ಬಿ) ಗ್ರಾಮವು ಔರಾದ್(ಬಿ) ತಾಲ್ಲೂಕಿನಲ್ಲಿ ಚಿಕ್ಕ ಮತಗಟ್ಟೆ ಹೊಂದಿರುವ ಪುಟ್ಟ ಗ್ರಾಮ. ಶೆಂಬೆಳ್ಳಿ ಗ್ರಾಮ ಪಂಚಾಯತ್ ವಾರ್ಡ್-2ರ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ 12 ರಿಂದ 15 ಮನೆಗಳಿವೆ. ಇಲ್ಲಿಯವರೆಗೆ ನಮ್ಮೂರಿಗೆ ಕೆಂಪು ಬಸ್ ಬಂದಿಲ್ಲ. ತಾಲ್ಲೂಕು, ಜಿಲ್ಲಾ ಹಾಗೂ ಗ್ರಾಮ ಪಂಚಾಯಿತಿಗೆ ಹೋಗಬೇಕಾದರೆ ದ್ವಿಚಕ್ರ ವಾಹನ ಮೂಲಕ ಸುತ್ತಿ ಬಳಸಿ ತೆರಳುವುದು ಅನಿವಾರ್ಯವಾಗಿದೆ ಎಂದು ಖಾಶೆಂಪುರ(ಬಿ) ನಿವಾಸಿ ಸಂತೋಷ ಪಾಟೀಲ್ ಹೇಳುತ್ತಾರೆ.
ʼಶೆಂಬೆಳ್ಳಿ ಗ್ರಾಮದ ಕೆರೆ ಮಾರ್ಗವಾಗಿ ಇರುವ ಕಚ್ಚಾ ರಸ್ತೆ ಅಭಿವೃದ್ಧಿಪಡಿಸಿದರೆ ಕೇವಲ 5 ಕಿ.ಮೀ.ನಲ್ಲಿ ಗ್ರಾಮ ಪಂಚಾಯತ್‌ಗೆ ತಲುಪಬಹುದು. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕುʼ ಎಂದು ಒತ್ತಾಯಿಸಿದ್ದಾರೆ.

ʼಹಲವು ದಶಕಗಳಿಂದ ಎರಡು ಗ್ರಾಮಗಳ ಜನರು ರಸ್ತೆ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೂ ಇಲ್ಲಿಯವರೆಗೆ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಚಿತ್ತ ಹರಿಸಿಲ್ಲ. ಎರಡು ಗ್ರಾಮಗಳಿಗೆ ತೆರಳುವ ನಾಲ್ಕೈದು ಕಿ.ಮೀ. ಅಂತರದ ರಸ್ತೆ ಅಭಿವೃದ್ಧಿಯಾದರೆ ಆ ಊರಿನವರಿಗೆ ಹಾಗೂ ಶೆಂಬೆಳ್ಳಿ ಗ್ರಾಮಸ್ಥರಿಗೂ ಜಮೀನಿಗೆ ಹೋಗಲು ತುಂಬಾ ಅನುಕೂಲವಾಗುತ್ತದೆʼ ಎಂದು ಶೆಂಬೆಳ್ಳಿ ಗ್ರಾಮಸ್ಥ ಹಣಮಂತ ಮಡಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ಬೇಲೂರ್(ಎನ್) ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ಬರಬೇಕಾದರೂ ಕೌಡಗಾಂವ- ಮುಸ್ತಾಪುರ ಮಾರ್ಗವಾಗಿ ಶೆಂಬೆಳ್ಳಿ ಗ್ರಾ.ಪಂ.ಗೆ ಬರಬೇಕಿದೆ. ಇನ್ನು ಖಾಶೆಂಪುರ(ಬಿ) ಗ್ರಾಮಸ್ಥರು ನಾಗೂರ(ಎನ್)-ಸಂತಪೂರ ಮೂಲಕ ಪಂಚಾಯಿತಿಗೆ ಹೋಗುವುದು ಅನಿವಾರ್ಯ. ಎರಡು ಗ್ರಾಮಸ್ಥರು ಪಂಚಾಯಿತಿಗೆ ಬರಬೇಕಾದರೆ ಹೆಚ್ಚು ಕಮ್ಮಿ 15 ಕಿ.ಮೀ. ಸುತ್ತಲೇಬೇಕಾಗಿದೆ.
ʼಶೆಂಬೆಳ್ಳಿ ಗ್ರಾಮಕ್ಕೆ ನಿಗದಿತ ಸಮಯಕ್ಕೆ ಸಾರಿಗೆ ಬಸ್ ಇಲ್ಲ. ಹೀಗಾಗಿ ಖಾಸಗಿ ವಾಹನಗಳಿಗಾಗಿ ಗಂಟೆಗಟ್ಟಲೆ ಕಾಯಲೇಬೇಕಾಗಿದೆ. ಗ್ರಾಮ ಪಂಚಾಯಿತಿನಲ್ಲಿ ಒಮ್ಮೊಮ್ಮೆ ಅಧಿಕಾರಿಗಳು ಸಿಗದಿದ್ದರೆ ಎರಡು ದಿನ ಅಲೆಯಬೇಕಾಗುತ್ತದೆ. ಒಂದು ದಿನದ ಕೂಲಿ ಕೆಲಸದ ಜೊತೆಗೆ ದಿನ ಪೂರ್ತಿ ಸಮಯವನ್ನು ವ್ಯಯಿಸಲೇಬೇಕಿದೆʼ ಎಂದು ಎರಡು ಗ್ರಾಮಗಳ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕಿರಿಯ ಇಂಜಿನಿಯರ್ ಶಿವಕುಮಾರ್ ಪುರಾಣಿಕ ಅವರು ʼಈದಿನ.ಕಾಮ್ʼ ಜೊತೆ ಮಾತನಾಡಿ, ʼಶೆಂಬೆಳ್ಳಿಯಿಂದ ಎರಡು ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಕುರಿತು ಸ್ಥಳಕ್ಕೆ ಭೇಟಿ ನೀಡಿ ಜಮೀನಿನ ನಕ್ಷೆ ಪರಿಶೀಲಿಸಿ, ರಸ್ತೆ ನಿರ್ಮಾಣ ಕುರಿತು ಮೇಲಾಧಿಕಾರಿಗಳೊಂದಿಗೆ ಚರ್ಚಿಸುವೆʼ ಎಂದು ಪ್ರತಿಕ್ರಿಯಿಸಿದರು.
ಈ ಸುದ್ದಿ ಓದಿದ್ದೀರಾ? ಸಿದ್ಧಲಿಂಗಯ್ಯನವರ ಕಾವ್ಯ: ಸಾಮಾಜಿಕ ಕ್ರೋಧದ ನೆಲೆಯಿಂದ ಆಧ್ಯಾತ್ಮಿಕ ಅನ್ವೇಷಣೆಯ ಕಡೆಗೆ
ಈ ಕುರಿತು ಶೆಂಬೆಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ನಾಗೇಶ ಮುಕರಂಬೆ ಅವರನ್ನು ʼಈದಿನ.ಕಾಮ್ʼ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.