ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ನಿವೇಶನಗಳ ಡಿಜಿಟಲ್ ಖಾತೆಗಳನ್ನು ಮಾಡಿಸಿಕೊಳ್ಳುವ ಮುನ್ನ ಎಲ್ಲ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ, ನಿಯಮಾನುಸಾರ ಖಾತೆಗಳನ್ನು ಮಾಡಿಕೊಳ್ಳಬೇಕು. ಕಾನೂನು ಬಾಹಿರ, ಅನಧಿಕೃತ ಖಾತೆಗಳ ವಿಷಯದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಇತ್ತಿಚೆಗೆ ಜಿ.ಪಂ ಸಿಇಓ ಅವರ ವಿರುದ್ಧ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮಾಡಿರುವ ಆರೋಪ ಕುರಿತು ಪ್ರಕಟವಾಗಿರುವ ಸುದ್ದಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
ಬೀದರ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ವಸತಿ ನಿರ್ಮಾಣಕ್ಕಾಗಿ, ಕೃಷಿ ಭೂಮಿಯನ್ನು ಸಕ್ಷಮ ಪ್ರಾಧಿಕಾರದಿಂದ ಭೂ ಪರಿವರ್ತನೆ ಆಗದೇ ಇರುವ ಹಾಗೂ ಸಕ್ಷಮ ಪ್ರಾಧಿಕಾರದಿಂದ (ವಿನ್ಯಾಸ ಬಡಾವಣೆ) ಲೇಔಟ್ ಅನುಮೋದನೆ ಪಡೆಯದೆ, ಕೃಷಿ ಭೂಮಿಯಲ್ಲಿ, ಇನಾಮಿ/ ಸರ್ಕಾರಿ, ಅರಣ್ಯ ಇಲಾಖೆ ಜಮೀನಿನಲ್ಲಿ ನಿವೇಶನಗಳಿಗೆ ಅನಧಿಕೃತವಾಗಿ 11-ಬಿ. 9, 11-ಎ ಡಿಜಿಟಲ್ ಖಾತೆಗಳನ್ನು ನೀಡಲಾಗುತ್ತಿದೆ ಎಂದು ಸಾರ್ವಜನಿಕರು ಕೆಲವು ಗ್ರಾಮ ಪಂಚಾಯತ ಪಿಡಿಒಗಳ ವಿರುದ್ಧ ಜಿಲ್ಲಾ ಪಂಚಾಯತಿಗೆ ಪದೇ ಪದೇ ದೂರುಗಳು ಸಲ್ಲಿಸಿದ್ದರು.
ಸದರಿ ದೂರುಗಳನ್ನು ನಿಯಮಾನುಸಾರ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕ್ಕೆ ಆದೇಶಿಸಲಾಗಿದೆ. ಈ ಕ್ರಮ ಯಾವುದೇ ಒಬ್ಬ ಅಧಿಕಾರಿಯ ವಿರುದ್ಧವಲ್ಲ, ಸಾರ್ವಜನಿಕರ ಹಿತಕ್ಕಾಗಿ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಭೀಮರಾವ್ ನಾಯ್ಕ ತಾಂಡಾ ನಿವಾಸಿಗಳು
“ದೂರುಗಳಿಗೆ ಸಂಬಂಧಿಸಿದಂತೆ ಫೆ.21 ರಂದು ಜಿಲ್ಲೆಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಕರೆದು ಅನಧಿಕೃತವಾಗಿ ಡಿಜಿಟಲ್ ಖಾತೆಗಳು ನೀಡದಂತೆ ಹಾಗೂ ಸರ್ಕಾರಕ್ಕೆ ಆರ್ಥಿಕ ನಷ್ಟವಾಗುವ ಯಾವುದೇ ಕೆಲಸಗಳನ್ನು ಮಾಡದಂತೆ ಸೂಚನೆಗಳನ್ನು ನೀಡಲಾಗಿದೆ” ಎಂದು ಜಿಲ್ಲಾ ಪಂಚಾಯತ ಸಿಇಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.