ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾರಣಕ್ಕೆ ಮೊಮ್ಮಗನೊಬ್ಬ ಅಜ್ಜನನ್ನೇ ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರಗಿ ತಾಲೂಕಿನ ಜವಳಗಾ(ಬಿ) ಗ್ರಾಮದಲ್ಲಿ ನಡೆದಿದೆ. ಸಿದ್ರಾಮಪ್ಪ ಕಾಮನ್ (75) ಕೊಲೆಯಾದ ಅಜ್ಜ ಎಂದು ತಿಳಿದು ಬಂದಿದೆ.
ಸೋಮವಾರ ಸಿದ್ರಾಮಪ್ಪ ಅವರ ಸಹೋದರಿ ಸಾವನ್ನಪ್ಪಿದ ಹಿನ್ನಲೆ ಸಿದ್ರಾಮಪ್ಪ ಮತ್ತು ಸೊಸೆ ಸರೋಜಾ ಕುಟುಂಬ ಕಲಬುರಗಿ ತಾಲ್ಲೂಕಿನ ಕುಮಿಸಿ ಗ್ರಾಮಕ್ಕೆ ತೆರಳಿದ್ದರು. ಅಂತ್ಯಸಂಸ್ಕಾರ ಮುಗಿಸಿಕೊಂಡು ವಾಪಸ್ ವಾಹನದಲ್ಲಿ ಬರುವಾಗ ಸರೋಜಾ ಅವರು ಮಾವ ಸಿದ್ರಾಮಪ್ಪ ಅವರಿಗೆ ವಾಹನದ ಮೇಲೆ ಕೂರುವಂತೆ ಹೇಳಿದ್ದರು. ವಯಸ್ಸಾದವನಿಗೆ ಗಾಡಿಯ ಮೇಲೆ ಕೂರುವಂತೆ ಹೇಳಿದಕ್ಕೆ ಸಿದ್ರಾಮಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ವಿಷಯವನ್ನು ಸರೋಜಾ ತನ್ನ ಮಗನಿಗೆ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಮಗ ಚಾಕುವಿನಿಂದ ಇರಿದು ತಾತನಿಗೆ ಕೊಲೆ ಮಾಡಿದ್ದಾನೆ.
ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ಆಕಾಶ್ ಕಾಮನ್ (22) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ನರೋಣಾ ಪೊಲೀಸ್ ಠಾಣೆ ಪಿಎಸ್‌ಐ ಈದಿನ.ಕಾಮ್ ದೊಂದಿಗೆ ಮಾತನಾಡಿ ತಿಳಿಸಿದ್ದಾರೆ.